ಸುಪ್ರೀಂ ಕೋರ್ಟ್‌ನ ಕೆಲವು ನಿರ್ದಿಷ್ಟ ತೀರ್ಪುಗಳನ್ನು ಪ್ರಸ್ತಾಪಿಸಿ ಸರ್ವೋಚ್ಚ ನ್ಯಾಯಾಲಯದ ಮೇಲೆ ಪಕ್ಷಪಾತದ ಆರೋಪ ಮಾಡಿ ಟ್ವೀಟ್ ಮಾಡಿದ್ದ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಮತ್ತು ವ್ಯಂಗ್ಯ ಚಿತ್ರಕಾರ್ತಿ ರಚಿತಾ ತನೇಜಾ ಅವರ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಕಮ್ರಾ ಹಾಗೂ ತನೇಜಾ ಅವರ ವಿರುದ್ಧ ಸಲ್ಲಿಸಿದ್ದ ಹಲವು ನ್ಯಾಯಾಂಗ ನಿಂದನಾ ಮನವಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರಿದ್ದ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.
ನ್ಯಾಯಾಂಗವನ್ನು ವಿಮರ್ಶಿಸಿ ನಾಲ್ಕು ಟ್ವೀಟ್ ಮಾಡಿದ್ದ ಕಮ್ರಾ ಅವರ ವಿರುದ್ಧ ಕಾನೂನು ವಿದ್ಯಾರ್ಥಿಗಳು ಮತ್ತು ವಕೀಲರು ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸುವಂತೆ ಕೋರಿ ಸಲ್ಲಿಸಿದ್ದ ಮನವಿಗೆ ನವೆಂಬರ್ 12ರಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅನುಮತಿ ನೀಡಿದ್ದರು.
ತನೇಜಾ ವಿರುದ್ಧ ನ್ಯಾಯಾಂಗ ನಿಂದನಾ ದೂರು ಸಲ್ಲಿಸಲು ಕಾನೂನು ವಿದ್ಯಾರ್ಥಿ ಆದಿತ್ಯ ಕಶ್ಯಪ್ ಅವರಿಗೆ ಅಟಾರ್ನಿ ಜನರಲ್ ಅನುಮತಿ ನೀಡಿದ್ದರು.
ನ್ಯಾಯಾಂಗ ನಿಂದನೆ ಕಾಯಿದೆ- 1971 ಅಡಿ ಅಟಾರ್ನಿ ಜನರಲ್ ಅಥವಾ ಸಾಲಿಸಿಟರ್ ಜನರಲ್ ಅವರಿಂದ ಒಪ್ಪಿಗೆ ಪಡೆದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಖಾಸಗಿ ವ್ಯಕ್ತಿ ನ್ಯಾಯಾಂಗ ನಿಂದನಾ ಮನವಿ ಸಲ್ಲಿಸಬಹುದಾಗಿದೆ. ಹೈಕೋರ್ಟ್‌ಗಳಲ್ಲಿ ನ್ಯಾಯಾಂಗ ನಿಂದನಾ ಮನವಿ ಸಲ್ಲಿಸಬೇಕಾದರೆ ರಾಜ್ಯದ ಅಡ್ವೊಕೇಟ್ ಜನರಲ್ ಅವರಿಂದ ಅನುಮತಿ ಪಡೆಯಬೇಕಿದೆ.
ರಿಪಬ್ಲಿಕ್ ಟಿವಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ್ದನ್ನು ಇಬ್ಬರೂ ಕಲಾವಿದರು ಟೀಕಿಸಿದ್ದರು. ಅರ್ಜಿದಾರರ ಮನವಿಯಂತೆ ಅಟಾರ್ನಿ ಜನರಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಿದ್ದರು. ಬಳಿಕ ಕಮ್ರಾ, “ಈ ನಿಂದನಾ ಮನವಿಗೆ ಬದಲಾಗಿ ಚುನಾವಣಾ ಬಾಂಡ್, ಸಂವಿಧಾನದ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಆಲಿಸಿ,” ಎಂದು ನುಡಿದಿದ್ದರು.