Udaipur Files and Supreme Court 
ಸುದ್ದಿಗಳು

[ಉದಯಪುರ ಫೈಲ್ಸ್] ಧಾರ್ಮಿಕ ಪಠ್ಯಗಳ ಕುರಿತಾದ ಸಂಭಾಷಣೆ ತೆಗೆಯಲು ಸಮಿತಿ ಶಿಫಾರಸು: ಪ್ರಕರಣ ಮುಂದೂಡಿದ ಸುಪ್ರೀಂ

ಜುಲೈ 10 ರಂದು ದೆಹಲಿ ಹೈಕೋರ್ಟ್ ಚಿತ್ರ ಬಿಡುಗಡೆಗೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು.

Bar & Bench

ರಾಜಸ್ಥಾನದಲ್ಲಿ ನಡೆದ ದರ್ಜಿ ಕನ್ಹಯ್ಯಾ ಲಾಲ್ ತೇಲಿ ಹತ್ಯೆ ಆಧರಿಸಿದ 'ಉದಯಪುರ ಫೈಲ್ಸ್' ಚಿತ್ರಕ್ಕೆದೆಹಲಿ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿದ್ದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಗುರುವಾರಕ್ಕೆ ಮುಂದೂಡಿದೆ.

ಕೇಂದ್ರ ಸರ್ಕಾರ ನೇಮಿಸಿದ್ದ ಸಮಿತಿಯ ವರದಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಸಮಿತಿಯ ಶಿಫಾರಸುಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಗುರುವಾರಕ್ಕೂ ಮುನ್ನ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿ ಪ್ರಕರಣ ಮುಂದೂಡಿತು.

ಸಮಿತಿಯ ಶಿಫಾರಸುಗಳು ಇಂತಿವೆ:

ಎ) ಈಗಿನ ಹಕ್ಕುತ್ಯಾಗದ (ಡಿಸ್‌ಕ್ಲೈಮರ್) ಬದಲು ತಾನು ಶಿಫಾರಸು ಮಾಡಿರುವ ಹಕ್ಕುತ್ಯಾಗವನ್ನು ಪ್ರಸಾರ ಮಾಡಬೇಕು, ಅದಕ್ಕೆ ಹಿನ್ನೆಲೆ ಧ್ವನಿಯನ್ನೂ ಒದಗಿಸಬೇಕು.

ಬಿ) ಚಿತ್ರದ ಕೃತಜ್ಞತಾ ಪಟ್ಟಿಯಲ್ಲಿ ನಮೂದಿಸಲಾಗಿರುವ ವಿವಿಧ ವ್ಯಕ್ತಿಗಳ ಹೆಸರುಗಳನ್ನು ತೆಗೆದುಹಾಬೇಕು.

ಸಿ) ಸೌದಿ ಅರೇಬಿಯಾ ಶೈಲಿಯ ಪೇಟವನ್ನು ಚಿತ್ರಿಸುವ ಎಐ ಸೃಷ್ಟಿತ ದೃಶ್ಯವನ್ನು ಪರಿಷ್ಕರಿಸಬೇಕು.

d) ಪೋಸ್ಟರ್‌ ಸೇರಿದಂತೆ "ನೂತನ್ ಶರ್ಮಾ" ಎಂಬ ಹೆಸರು ಎಲ್ಲೆಲ್ಲಿ ಬರುತ್ತದೋ ಅಲ್ಲೆಲ್ಲಾ ಆ ಹೆಸರನ್ನು ಬದಲಿಸಬೇಕು.

ಇ) "...ಮೈನೆ ತೋ ವೊಹಿ ಕಹಾ ಹೈ ಜೋ ಉನ್ಕೆ ಧರ್ಮ ಗ್ರಂಥೋ ಮೇ ಲಿಖಾ ಹೈ..." ಎಂಬ ನೂತನ್‌ ಶರ್ಮಾ ಪಾತ್ರದ ಸಂಭಾಷಣೆಯನ್ನು ಅಳಿಸಬೇಕು.

ಎಫ್‌) ಹಫೀಜ್ ಪಾತ್ರ ಹೇಳುವ "...ಬಲೂಚಿ ಕಭಿ ವಫಾದಾರ್ ನಹೀ ಹೋತಾ..." ಹಾಗೂ ಮಕ್ಬೂಲ್‌ ಪಾತ್ರ ನುಡಿಯುವ "...ಬಲೂಚಿ ಕಿ..." ಮತ್ತು "...ಅರೆ ಕ್ಯಾ ಬಲೂಚಿ ಕ್ಯಾ ಅಫ್ಘಾನಿ ಕ್ಯಾ ಹಿಂದೂಸ್ತಾನಿ ಕ್ಯಾ ಪಾಕಿಸ್ತಾನಿ..." ಸಂಭಾಷಣೆಯನ್ನು ತೆಗೆದುಹಾಕಬೇಕು.

ಸಮಿತಿಯ ವರದಿಯನ್ನು ಸರ್ಕಾರ ಅಂಗೀಕರಿಸಿದ್ದು ಶಿಫಾರಸು ಜಾರಿಗೆ ತರುವಂತೆ ನಿರ್ಮಾಪಕರಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿರ್ದೇಶಿಸಿದೆ.

ಚಿತ್ರ ಬಿಡುಗಡೆಗೆ ತಡೆ ನೀಡಿದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಚಿತ್ರದ ನಿರ್ಮಾಪಕರು ಸಲ್ಲಿಸಿದ ಮೇಲ್ಮನವಿ; ಕನ್ಹಯ್ಯಾ ಲಾಲ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರು ಚಿತ್ರ ಬಿಡುಗಡೆಯಾದರೆ ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆಯಾಗುತ್ತದೆ ಎಂದು ಸಲ್ಲಿಸಿದ ರಿಟ್ ಅರ್ಜಿ - ಹೀಗೆ ಎರಡು ಮನವಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.