Central Vista, Supreme Court
Central Vista, Supreme Court 
ಸುದ್ದಿಗಳು

ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿ ತಿರಸ್ಕರಿಸಿದ ಸುಪ್ರೀಂ: ಸೆಂಟ್ರಲ್ ವಿಸ್ತಾ ನಿರ್ಮಾಣ ಕಾಮಗಾರಿ ಅಬಾಧಿತ

Bar & Bench

ಕೋವಿಡ್‌ ಸಾಂಕ್ರಾಮಿಕದ ನಡುವೆ ಸೆಂಟ್ರಲ್‌ ವಿಸ್ತಾ ಕಾಮಗಾರಿ ಸ್ಥಗಿತಗೊಳಿಸಲು ನಿರಾಕರಿಸಿದ್ದ ದೆಹಲಿ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್‌ ಮಂಗಳವಾರ ವಜಾಗೊಳಿಸಿದೆ.

ಇದೇ ರೀತಿಯ ಉಳಿದ ಕಾಮಗಾರಿಗಳು ಪ್ರಗತಿಯಲ್ಲಿರುವಾಗ ಅರ್ಜಿದಾರರು ಕೋವಿಡ್‌ ಉಲ್ಲೇಖಿಸಿ ಸೆಂಟ್ರಲ್‌ ವಿಸ್ತಾ ಯೋಜನೆಯೊಂದನ್ನೇ ಸ್ಥಗಿತಗೊಳಿಸಬೇಕು ಎಂದು ಯಾಕೆ ಕೋರಿದರು ಎಂಬುದಾಗಿ ನ್ಯಾಯಾಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಪ್ರಶ್ನಿಸಿತು. ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಇದೇ ರೀತಿಯ ಕಾಮಗಾರಿಗಳ ಬಗ್ಗೆ ಮೇಲ್ಮನವಿದಾರರು ಯಾವುದಾದರೂ ಪ್ರಾಮಾಣಿಕ ಸಂಶೋಧನೆ ನಡೆಸಿದ್ದಾರೆಯೇ ಅದನ್ನು ಅವರ ಅರ್ಜಿ ಒಳಗೊಂಡಿದೆಯೇ ಎಂದು ನ್ಯಾಯಾಲಯ ಕೇಳಿತು.

“ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಾಗಿ ನೀವು ಎಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ ಮತ್ತು ಏಕೆ ಒಂದು ಯೋಜನೆಯನ್ನು ಆಯ್ದುಕೊಳ್ಳಲಾಗಿದೆ ಎಂಬ ಬಗ್ಗೆ ಸಂಶೋಧನೆ ಮಾಡಿದ್ದೀರಾ? ಎಂದು ಪ್ರಶ್ನಿಸಿತು. ಅರ್ಜಿದಾರರ ಪರ ವಾದ ಮಂಡಿಸಿದ ಸಿದ್ಧಾರ್ಥ್‌ ಲೂತ್ರಾ ಅವರು ಅರ್ಜಿಯಲ್ಲಿರುವ ಅನುಬಂಧಗಳನ್ನು ಉಲ್ಲೇಖಿಸುತ್ತಾ ಸಂಶೋಧನೆ ನಡೆಸಿರುವ ಮಾಹಿತಿ ಒದಗಿಸಿದರು. ಆಗ ಎಲ್ಲಾ ಮಾರ್ಗಸೂಚಿಗಳಿಗೆ ಅನುಸಾರವಾಗಿಯೇ ಯೋಜನೆಯ ಚಟುವಟಿಕೆಗಳನು ನಡೆಯುತ್ತಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಮಾರ್ಗಸೂಚಿಗೆ ಅನುಗುಣವಾಗಿ ಯೋಜನೆ ಇಲ್ಲ ಎಂಬುದು ನಿಮ್ಮ ಆತಂಕವಾಗಿತ್ತು. ಆದರೆ ಅದನ್ನು ಪಾಲಿಸಲಾಗುತ್ತಿದೆ ಎಂದು ಅರಿತ ಮೇಲೆ ಅರ್ಜಿಯನ್ನು ಹೇಗೆ ಮುಂದುವರೆಸಬಹುದು ಎಂಬುದಾಗಿ ಪೀಠ ಪ್ರಶ್ನಿಸಿತು. ಅಂತಿಮವಾಗಿ ದೆಹಲಿ ಹೈಕೋರ್ಟ್‌ ತೀರ್ಪಿನಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ತಿಳಿಸಿ ಮೇಲ್ಮನವಿಯನ್ನು ವಜಾಗೊಳಿಸಿತು.

ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಯಾವುದೇ ಹಸ್ತಕ್ಷೇಪ ಅಗತ್ಯವಿಲ್ಲ ಎಂದು ಹೇಳಿದ ನ್ಯಾಯಾಲಯವು ಮೇಲ್ಮನವಿಯನ್ನು ವಜಾಗೊಳಿಸಿತು. ತಮ್ಮ ಅರ್ಜಿ ತಿರಸ್ಕರಿಸಿ ಹೈಕೋರ್ಟ್‌ ವಿಧಿಸಿದ್ದ ರೂ 1 ಲಕ್ಷ ದಂಡ ಪ್ರಶ್ನಿಸಿ ಅನ್ಯಾ ಮಲ್ಹೋತ್ರಾ, ಸೊಹೈಲ್‌ ಹಶ್ಮಿ ಅವರು ಈ ಹಿಂದೆ ಮೇಲ್ಮನವಿ ಸಲ್ಲಿಸಿದ್ದರು.