ಮುಂಬೈನಲ್ಲಿರುವ ಎಲ್ಲಾ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಕ್ರಿಕೆಟಿಗರಿಗೆ ಶೌಚಾಲಯ ಸೌಲಭ್ಯ ಒದಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ [ರಾಹುಲ್ ರಾಜೇಂದ್ರಪ್ರಸಾದ್ ತಿವಾರಿ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಇನ್ನಿತರರ ನಡುವಣ ಪ್ರಕರಣ].
ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಐಎಲ್ ಸಲ್ಲಿಸಲು ಅರ್ಜಿದಾರರಿಗೆ ಇರುವ ಸ್ಥಾನಮಾನ ಎಂಥದ್ದು ಎಂದು ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ವಿಭಾಗೀಯ ಪೀಠ ಪ್ರಶ್ನಿಸಿದೆ.
"ಇದು ಯಾವ ಬಗೆಯ ಪಿಐಎಲ್? ಕ್ರಿಕೆಟಿಗರಿಗೆ ಸಮಸ್ಯೆಯಿದ್ದರೆ ಅವರು ನಮ್ಮ ಬಳಿಗೆ ಬರುತ್ತಾರೆ? ನೀವು ಪ್ರಧಾನವಾಗಿ ಕ್ರಿಕೆಟಿಗರೇ ಅಥವಾ ವಕೀಲರೇ? ಎಂದು ಅರ್ಜಿದಾರರನ್ನುದ್ದೇಶಿಸಿ ನ್ಯಾಯಮೂರ್ತಿ ಓಕಾ ಅಸಮಾಧಾನ ವ್ಯಕ್ತಪಡಿಸಿದರು.
ಆಗ ಅರ್ಜಿದಾರ ತಾವು ಪ್ರಾಕ್ಟೀಸ್ ನಿರತ ವಕೀಲರಾಗಿದ್ದು ಮುಂಬೈನ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಸರಿಯಾದ ಶೌಚಾಲಯಗಳಿಲ್ಲದ ಕಾರಣ ಪಿಐಎಲ್ ಸಲ್ಲಿಸಿರುವುದಾಗಿ ತಿಳಿಸಿದರು.
ಆಗ ನ್ಯಾಯಾಲಯ "ನೀವು ಲಗತ್ತಿಸಿರುವ ಫೋಟೋಗಳನ್ನು ನೋಡಿ. ನಿಮ್ಮ ನಿಖರವಾದ ಸಾರ್ವಜನಿಕ ಹಿತಾಸಕ್ತಿ ಎಲ್ಲಿಯೂ ಸಿಗುವುದಿಲ್ಲ. ಹೈಕೋರ್ಟ್ (ಬಾಂಬೆ ಹೈಕೋರ್ಟ್ ಅನ್ನು ಉಲ್ಲೇಖಿಸಿ) ನಿಮ್ಮ ಮನವಿಯನ್ನು ವಜಾಗೊಳಿಸಿರುವುದು ಸರಿಯಾಗಿಯೇ ಇದೆ" ಎಂದು ನ್ಯಾಯಾಲಯ ಹೇಳಿದೆ.
ಅರ್ಜಿ ಸಲ್ಲಿಸಲು ಅರ್ಜಿದಾರರ ಸ್ಥಾನಮಾನ ಸೂಕ್ತವಲ್ಲ ಎಂದು ಪರಿಗಣಿಸಿದ ನ್ಯಾಯಾಲಯ, ಪಿಐಎಲ್ ವಜಾಗೊಳಿಸಿತು.