Supreme Court Lawyers  
ಸುದ್ದಿಗಳು

ಹಿರಿಯ ನ್ಯಾಯವಾದಿ ಪದೋನ್ನತಿ ಪ್ರಕ್ರಿಯೆಯ ಮರುಪರಿಶೀಲನೆ ಬಗ್ಗೆ ನಿರ್ಧರಿಸಲಿರುವ ಸುಪ್ರೀಂ ಕೋರ್ಟ್

ಹಿರಿಯ ನ್ಯಾಯವಾದಿ ಪದೋನ್ನತಿಯ ಚೌಕಟ್ಟು ಸಮಗ್ರವಾಗಿಲ್ಲ, ಕಾಲಾಂತರದ ಅನುಭವದ ಆಧಾರದ ಮೇಲೆ ಅದನ್ನು ಮರುಪರಿಶೀಲಿಸಬೇಕಾಗಬಹುದು ಎಂದು 2017ರ ಇಂದಿರಾ ಜೈಸಿಂಗ್ ತೀರ್ಪಿನ ಕೊನೆಯ ಪ್ಯಾರಾದಲ್ಲಿ ಒಪ್ಪಿಕೊಳ್ಳಲಾಗಿದೆ.

Bar & Bench

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ಹಿರಿಯ ನ್ಯಾಯವಾದಿ ಪದೋನ್ನತಿಯನ್ನು ವಿಳಂಬವಿಲ್ಲದೆ ಪರಿಗಣಿಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆ ವೇಳೆ ಇಂದಿರಾ ಜೈಸಿಂಗ್‌ ಮತ್ತು ಸುಪ್ರೀಂ ಕೋರ್ಟ್‌ ನಡುವಣ ಪ್ರಕರಣದಲ್ಲಿ ತಾನು ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆ ಎಂಬುದನ್ನು ಮೊದಲು ನಿರ್ಧರಿಸುವುದಾಗಿ ಸರ್ವೋಚ್ಚ ನ್ಯಾಯಾಲಯ ಗುರುವಾರ ಹೇಳಿದೆ.

ಇಂದಿರಾ ಜೈಸಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ತೀರ್ಪು ಹೈಕೋರ್ಟ್‌ಗಳಲ್ಲಿ ಹಿರಿಯ ನ್ಯಾಯವಾದಿಗಳ ಪದೋನ್ನತಿಯ ರೂಪುರೇಷೆ ಸೂಚಿಸಿತ್ತು. ಆದರೆ ತೀರ್ಪಿನ ಮುಕ್ತಾಯದ ಪ್ಯಾರಾದಲ್ಲಿ ಈ ತೀರ್ಪು ಆತ್ಯಂತಿಕವಾದುದಲ್ಲ, ಕಾಲಾಂತರದ ಅನುಭವ, ಜ್ಞಾನದ ಆಧಾರದ ಮೇಲೆ ಮರುಪರಿಶೀಲಿಸಬೇಕಾಗಬಹುದು ಎಂದು ಹೇಳಲಾಗಿತ್ತು.

ಬೇರೆ ಬೇರೆ ಹೈಕೋರ್ಟ್‌ಗಳಲ್ಲಿ ಭಿನ್ನ ಸಮಸ್ಯೆಗಳಿರಬಹುದು ಎಂಬುದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಮನೋಜ್ ಮಿಶ್ರಾ ಹಾಗೂ ಅರವಿಂದ್ ಕುಮಾರ್ ಅವರಿದ್ದ ಪೀಠ ತೀರ್ಪಿನ ಮುಕ್ತಾಯದ ಪ್ಯಾರಾದಿಂದ ಉದ್ಭವಿಸುವ ಸಮಸ್ಯೆಗಳನ್ನು ಮೊದಲು ಪರಿಶೀಲಿಸಲಾಗುವುದು ಎಂದು ತಿಳಿಸಿತು.

ಹೀಗಾಗಿ, ವಿವಿಧ ಹೈಕೋರ್ಟ್‌ಗಳಲ್ಲಿ ಹಿರಿಯ ನ್ಯಾಯವಾದಿಗಳ ನೇಮಕಾತಿ ಕುರಿತಂತೆ ತಮ್ಮ ಅನುಭವದ ಟಿಪ್ಪಣಿ ಸಲ್ಲಿಸುವಂತೆ ವಿವಿಧ ವಕೀಲರ ಸಂಘಗಳ ಪರ ಹಾಜರಾಗುವ ನ್ಯಾಯವಾದಿಗಳಿಗೆ ನಿರ್ದೇಶನ ನೀಡಿ ಪ್ರಕರಣವನ್ನು  ಫೆಬ್ರವರಿ 22ಕ್ಕೆ ಮುಂದುಡಿತು.  

ಹಿರಿಯ ವಕೀಲರ ಹುದ್ದೆಗಳ ಪ್ರಕ್ರಿಯೆಗೆ ಸಂಬಂಧಿಸಿದ ವಿವಿಧ ಅರ್ಜಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದ್ದು ಸುಪ್ರೀಂ ಕೋರ್ಟ್ ಅಡ್ವೊಕೇಟ್-ಆನ್-ರೆಕಾರ್ಡ್ ಒಕ್ಕೂಟವು ​​(ಎಸ್‌ಸಿಎಒಆರ್‌ಎ) ಸಲ್ಲಿಸಿದ ಅರ್ಜಿಯು ಉನ್ನತ ನ್ಯಾಯಾಲಯಕ್ಕೆ ಹಿರಿಯ ನ್ಯಾಯವಾದಿಗಳನ್ನು ನೇಮಿಸುವ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಮುಕ್ತಾಯಗೊಳಿಸುವಂತೆ ಹಿರಿಯ ನ್ಯಾಯವಾದಿಗಳ ನೇಮಕಾತಿ ಸಮಿತಿಗೆ (ಸಿಡಿಎಸ್‌ಎ) ನಿರ್ದೇಶಿಸಬೇಕು ಎಂದು ಕೋರಿದೆ.

ಇಂದಿರಾ ಜೈಸಿಂಗ್‌ ಪ್ರಕರಣದಲ್ಲಿ ಹೊರಬಂದ ಮಹತ್ವದ ತೀರ್ಪು ಹಿರಿಯ ನ್ಯಾಯವಾದಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮತ್ತು ಎಲ್ಲಾ ಹೈಕೋರ್ಟ್‌ಗಳಿಗೆ ಅನ್ವಯವಾಗುವಂತಹ ಮಾನದಂಡವನ್ನು ನಿಗದಿಪಡಿಸಿತ್ತು.

ಪ್ರತಿ ನ್ಯಾಯಾಲಯಕ್ಕೆ ಸಿಡಿಎಸ್‌ಎ ಇರಲಿದ್ದು ಹುದ್ದೆಗಾಗಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ, ಇಬ್ಬರು ಹಿರಿಯ ನ್ಯಾಯಾಧೀಶರು, ಅಟಾರ್ನಿ ಜನರಲ್ / ಅಡ್ವೊಕೇಟ್ ಜನರಲ್ ಹಾಗೂ ಈ ನಾಲ್ವರಿಂದ ನಾಮಕರಣಗೊಂಡ ನ್ಯಾಯವಾದಿ ವರ್ಗದ ಪ್ರಮುಖ ವಕೀಲರು ಪರಿಶೀಲಿಸಲಿದ್ದಾರೆ ಎಂದು ಮಾನದಂಡದಲ್ಲಿ ವಿವರಿಸಲಾಗಿತ್ತು.