Justice S Ravindra Bhat and Justice Satish Chandra  
ಸುದ್ದಿಗಳು

ಕಂಪೆನಿಯೊಂದರ ₹ 4,000 ಕೋಟಿ ಮೊತ್ತದ ಆಸ್ತಿ ಹರಾಜು: ನ್ಯಾ. ರವೀಂದ್ರ ಭಟ್ ನೇತೃತ್ವದ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

Bar & Bench

₹ 4,000 ಕೋಟಿ ಮೌಲ್ಯದ ಆಸ್ತಿಯನ್ನು ಹರಾಜು ಮಾಡುವ ಉನ್ನತಾಧಿಕಾರ ಮಾರಾಟ ಸಮಿತಿಗೆ ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಮತ್ತು ಅಲಾಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸತೀಶ್ ಚಂದ್ರ ಅವರನ್ನು ಸುಪ್ರೀಂ ಕೋರ್ಟ್‌ ನೇಮಿಸಿದೆ [ಬಾಳಾಸಾಹೇಬ್ ಕೇಶವರಾವ್ ಭಾಪ್ಕರ್ ಮತ್ತಿತರರು ಹಾಗೂ ಸೆಬಿ ನಡುವಣ ಪ್ರಕರಣ].

ಸಾಯಿಪ್ರಸಾದ್‌ ಕಂಪೆನಿ ಸಮೂಹದ ಆಸ್ತಿ ದಿವಾಳಿ ಪ್ರಕ್ರಿಯೆಗಳ ಮೇಲ್ವಿಚಾರಣೆಗೆ ಸಮಿತಿ ರಚಿಸಿ  ಸುಪ್ರೀಂ ಕೋರ್ಟ್‌  ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಸೋಮವಾರ ಆದೇಶಿಸಿತು.

ನ್ಯಾ. ಭಟ್ ಅವರು ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.ಸುಪ್ರೀಂ ಕೋರ್ಟ್‌ ನಿವೃತ್ತ ರಿಜಿಸ್ಟ್ರಾರ್‌ ಪರ್ದೀಪ್‌ ಕುಮಾರ್‌ ಶರ್ಮಾ, ಭಾರತೀಯ ಷೇರು ನಿಯಂತ್ರಣ ಮಂಡಳಿಯ (ಸೆಬಿ)  ಒಬ್ಬರು ನಾಮ ನಿರ್ದೇಶಿತರು, ಮಹಾರಾಷ್ಟ್ರ ಉಪ ಗೃಹ ಕಾರ್ಯದರ್ಶಿ ಛತ್ತೀಸ್‌ಗಢ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳ ತಲಾ ಒಬ್ಬ ಕಂದಾಯಾಧಿಕಾರಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ನ್ಯಾ. ಭಟ್ ಅವರು ಪ್ರತಿ ವಿಚಾರಣೆಗೆ ₹ 2 ಲಕ್ಷ ಗೌರವಧನ ಪಡೆಯಲಿದ್ದು ನ್ಯಾ. ಚಂದ್ರ ಅವರ ಗೌರವಧನದ ಮೊತ್ತ ₹ 1.5 ಲಕ್ಷ ಆಗಿದೆ.

ಎಂಟು ವರ್ಷಗಳ ಹಿಂದೆ ಅಂದರೆ 2016ರಲ್ಲಿ ನಡೆದಿದ್ದ ₹ 4,000 ಕೋಟಿ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಬಿ ಡಿಸೆಂಬರ್ 2019 ರಲ್ಲಿ ಸಾಯಿ ಪ್ರಸಾದ್ ಕಂಪೆನಿ ಸಮೂಹದ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಹರಾಜು ಆರಂಭಿಸಿತ್ತು. 20 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಗೆ ಅಧಿಕಲ ಆದಾಯದ ಭರವಸೆ ನೀಡಿ ವಂಚಿಸಲಾಗಿತ್ತು.

ಕಂಪೆನಿಯ ಸಂಸ್ಥಾಪಕ ನಿರ್ದೇಶಕರು (ತಂದೆ, ತಾಯಿ ಹಾಗೂ ಪುತ್ರ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾ. ಸೂರ್ಯ ಕಾಂತ್‌ ನೇತೃತ್ವದ ಪೀಠ ಈ ತೀರ್ಪು ನೀಡಿದೆ. ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ಹರಾಜು ಮಾಡಿ ನೈಜ ಹೂಡಿಕೆದಾರರಿಗೆ ಹಣ ನೀಡುವಂತೆ ಅವರು ಕೋರಿದ್ದರು.