ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಅನುವಾಗುವಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಮಾಜಿ ಪಾಲಿಕೆ ಸದಸ್ಯ ಹಾಗೂ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದಿಂದ ಕಣಕ್ಕಿಳಿದಿರುವ ತಾಹಿರ್ ಹುಸೇನ್ ಅವರನ್ನು ಇನ್ನೂ ಜಾಮೀನು ಪಡೆಯದ ಎಲ್ಲಾ ಪ್ರಕರಣಗಳಲ್ಲಿ ಕಸ್ಟಡಿ ಪೆರೋಲ್‌ನಲ್ಲಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಮಂಗಳವಾರ ಅನುಮತಿ ನೀಡಿದೆ.
ದಿನಕ್ಕೆ 12 ಗಂಟೆಗಳ ಕಾಲ ಹಗಲಿನಲ್ಲಿ ಮಾತ್ರ ಪೊಲೀಸ್ ಬೆಂಗಾವಲಿನಲ್ಲಿ ಜೈಲಿನಿಂದ ಹೊರಬರುವುದು ಸೇರಿದಂತೆ ವಿವಿಧ ಷರತ್ತುಗಳನ್ನು ವಿಧಿಸಿ ಜನವರಿ 29ರಿಂದ ಫೆಬ್ರವರಿ 3ರವರೆಗೆ ಹುಸೇನ್ ಅವರಿಗೆ ಕಸ್ಟಡಿ ಪೆರೋಲ್ ಮಂಜೂರು ಮಾಡಲಾಗಿದೆ.
"ಜೈಲು ಕೈಪಿಡಿಯ ಪ್ರಕಾರ ತಾಹಿರ್ ಹುಸೇನ್ ಅವರನ್ನು ಪ್ರತಿದಿನ 12 ಗಂಟೆಗಳ ಕಾಲ ಹೊರಗೆ ಬಿಡಬೇಕು. ಹೈಕೋರ್ಟ್‌ನಲ್ಲಿ ಬಾಕಿ ಇರುವ ಜಾಮೀನು ಅರ್ಜಿಯನ್ನು ಅದರ ಸ್ವಯಂ ಅರ್ಹತೆ ಆಧರಿಸಿ ನಿರ್ಧರಿಸಬೇಕು" ಎಂದು ಪೀಠ ಹೇಳಿದೆ.
ಹುಸೇನ್ ಅವರಿಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ವಿಭಾಗೀಯ ಪೀಠ ಒಮ್ಮತಕ್ಕೆ ಬಾರದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠ ಈ ಆದೇಶ ನೀಡಿದೆ.
"ತನ್ನ ಪರವಾಗಿ ಹಿರಿಯ ವಕೀಲರು ನ್ಯಾಯಾಲಯಕ್ಕೆ ನೀಡಿರುವ ಮುಚ್ಚಳಿಕೆಗೆ ತಾಹಿರ್ ಹುಸೇನ್ ಬದ್ಧವಾಗಿರಬೇಕು. ದೆಹಲಿ ಪೊಲೀಸರು ಸಲ್ಲಿಸಿರುವ (ಸುರಕ್ಷತಾ ಬಂದೋಬಸ್ತ್‌ಗಾಗಿ) ಖರ್ಚುವೆಚ್ಚದಲ್ಲಿ ಅರ್ಧದಷ್ಟನ್ನು - ₹2,47,000 ಠೇವಣಿ ಇರಿಸುವುದಕ್ಕೆ ಒಳಪಟ್ಟಂತೆ ಜೈಲು ಕೈಪಿಡಿಗೆ ಅನುಗುಣವಾಗಿ ಅರ್ಜಿದಾರರನ್ನು (ತಾಹಿರ್ ಹುಸೇನ್) ಜನವರಿ 29ರಿಂದ ಫೆಬ್ರವರಿ 3ರವರೆಗೆ (ಪೆರೋಲ್ ಮೇಲೆ) ಬಿಡುಗಡೆ ಮಾಡಬೇಕು," ಎಂದು ನ್ಯಾಯಾಲಯ ಹೇಳಿದ
ದೆಹಲಿ ಗಲಭೆ ಪ್ರಕರಣದಲ್ಲಿ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿದ್ದರೂ, ಹಣ ವರ್ಗಾವಣೆ ಪ್ರಕರಣ ಸೇರಿದಂತೆ ಇನ್ನೂ ಎರಡು ಪ್ರಕರಣಗಳಲ್ಲಿ ಹುಸೇನ್ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ ಎಂದು ನ್ಯಾಯಾಲಯ ವಿಚಾರಣೆಯ ಒಂದು ಹಂತದಲ್ಲಿ ನೆನಪಿಸಿತು.
ಆಗ ಹುಸೇನ್ ಪರ ವಕೀಲ ಸಿದ್ಧಾರ್ಥ್ ಅಗರ್‌ವಾಲ್ ಅವರು ಕಸ್ಟಡಿ ಪೆರೋಲ್ ನೀಡುವಂತೆ ಕೋರಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಈ ಮನವಿಗೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದರು. ಪೆರೋಲ್ ನೀಡಿ ಭದ್ರತೆ ಒದಗಿಸಲು ದಿನವೊಂದಕ್ಕೆ 4 ಲಕ್ಷ ರೂ. ವೆಚ್ಚವಾಗುವುದಾಗಿಯೂ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ವಾದ ಆಲಿಸಿದ ನ್ಯಾಯಾಲಯ ವಿವಿಧ ಷರತ್ತುಗಳೊಡನೆ ಕಸ್ಟಡಿ ಪೆರೋಲ್ ನೀಡಲು ಸಮ್ಮತಿಸಿತು.