Umar Khalid, Sharjeel Imam, Gulfisha Fatima, Meeran Haider and Supreme Court  
ಸುದ್ದಿಗಳು

ದೆಹಲಿ ಗಲಭೆ: ಖಾಲಿದ್ ಮತ್ತಿತರರ ಪರ ವಾದ ಮಂಡನೆ ಪೂರ್ಣ; ನವೆಂಬರ್ 11ರಿಂದ ಪೊಲೀಸರ ವಾದ

ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಾದಾಬ್ ಅಹ್ಮದ್ ಮತ್ತು ಮೊಹಮ್ಮದ್ ಸಲೀಂ ಖಾನ್ ಅವರ ವಾದವನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್‌ ವಿ ಅಂಜಾರಿಯಾ ಅವರಿದ್ದ ಪೀಠ ಆಲಿಸಿತು.

Bar & Bench

ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಪಿತೂರಿ ಪ್ರಕರಣದಲ್ಲಿ ಜಾಮೀನು ಕೋರಿದ್ದ ಆರು ಆರೋಪಿಗಳು ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಾದ ಪೂರ್ಣಗೊಳಿಸಿದರು.

ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಾದಾಬ್ ಅಹ್ಮದ್ ಮತ್ತು ಮೊಹಮ್ಮದ್ ಸಲೀಂ ಖಾನ್ ಅವರ ವಾದವನ್ನು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್‌ ವಿ ಅಂಜಾರಿಯಾ ಅವರಿದ್ದ ಪೀಠ ಆಲಿಸಿತು. ದೆಹಲಿ ಪೊಲೀಸರು ನವೆಂಬರ್ 11, ಮಂಗಳವಾರ ತಮ್ಮ ವಾದವನ್ನು ಪ್ರಾರಂಭಿಸಲಿದ್ದಾರೆ.

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರುದ್ಧ 2020ರ ಫೆಬ್ರವರಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಈಶಾನ್ಯ ದೆಹಲಿಯಲ್ಲಿ ಗಲಭೆ ಉಂಟಾಗಿತ್ತು. ದೆಹಲಿ ಪೊಲೀಸರ ಪ್ರಕಾರ ಘಟನೆಯಲ್ಲಿ 53 ಜನರು ಸಾವನ್ನಪ್ಪಿ ನೂರಾರು ಮಂದಿ ಗಾಯಗೊಂಡಿದ್ದರು. ಆರೋಪಿಗಳು ಹಲವು ಗಲಭೆಗಳು ಉಂಟಾಗುವಂತೆ ವಿಸ್ತೃತ ಪಿತೂರಿ ನಡೆಸಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಇಂದು ಆರೋಪಿ ಶಾದಾಬ್ ಅಹ್ಮದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ , ವಿಚಾರಣೆ ವೇಳೆ ತಮ್ಮ ಕಕ್ಷಿದಾರರಿಂದ ಯಾವುದೇ ಬಗೆಯ ವಿಳಂಬವಾಗಿಲ್ಲ ಎಂದರು.

ಶಾದಾಬ್ ಅಹ್ಮದ್ ವಯಸ್ಸು 27 ವರ್ಷ. ಎನ್‌ಡಿಎಸ್‌ ಎಂಟರ್‌ಪ್ರೈಸಸ್‌ ಜಗತ್‌ಪುರಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಆರೋಪ ನಿಗದಿ ಹಂತದ ವಾದಗಳು ನಡೆಯುತ್ತಿವೆ. ಆದರೆ ಶಾದಾಬ್‌ ಪರ ವಾದ ಮಂಡನೆ ಈಗಾಗಲೇ ಮುಕ್ತಾಯವಾಗಿದೆ ಎಂದು ಅವರು ಹೇಳಿದರು.

 ವಾಟ್ಸಾಪ್‌ ಸಂದೇಶಗಳನ್ನು ಸಾಕ್ಷ್ಯವಾಗಿ ಒದಗಿಸಲಾಗಿದ್ದರೂ ಶಾದಾಬ್‌ ಅವರು ಆ ಸಂದೇಶಗಳ ಭಾಗವಾಗಿರಲಿಲ್ಲ ಎಂದರು. ಪ್ರತಿಭಟನೆಗಳನ್ನು ರಸ್ತೆ ತಡೆ ಎಂದು ಬಿಂಬಿಸುತ್ತಿರುವುದೇಕೆ ಎಂದು ನ್ಯಾ. ಕುಮಾರ್‌ ಅವರು ಪ್ರಶ್ನಿಸಿದಾಗ ಲೂತ್ರಾ ಅವರು ʼಇದರರ್ಥ ಸಂಚಾರಕ್ಕೆ ಅಡ್ಡಿಪಡಿಸುವುದು ಎಂದಾಗಿದೆ. ದೆಹಲಿ ವಿವಿಯಲ್ಲಿ ಓದುತ್ತಿರುವವರಿಗೆ ಅದು ತಿಳಿದಿದೆ. ಇದು ಸಾಮಾನ್ಯವಾಗಿ ಬಳಸುವ ಪದ. ಆಡುಮಾತಿನಲ್ಲಿ ರೂಢಿಯಲ್ಲಿದೆʼ ಎಂದರು. ಅಂತೆಯೇ ಅರ್ಜಿದಾರರ ಪರ ವಾದವನ್ನು ಅವರು ಮುಕ್ತಾಯಗೊಳಿಸಿದರು. ದೆಹಲಿ ಪೊಲೀಸರು ನವೆಂಬರ್ 11, ಮಂಗಳವಾರ ತಮ್ಮ ವಾದ  ಆರಂಭಿಸಲಿದ್ದಾರೆ.