Supreme Court and Demonetisation  
ಸುದ್ದಿಗಳು

ಕೇಂದ್ರ 48 ಗಂಟೆಗಳಲ್ಲಿ ನೋಟು ಅಮಾನ್ಯ ನಿರ್ಧಾರ ಹೇಗೆ ಕೈಗೊಂಡಿತು ಎಂಬುದನ್ನು ವಿವರಿಸಿದೆ ಸುಪ್ರೀಂ ಕೋರ್ಟ್ ತೀರ್ಪು

ನೋಟು ಅಮಾನ್ಯ ಎತ್ತಿ ಹಿಡಿದ ನಾಲ್ವರು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರು ಅಂತಿಮ ಅಧಿಸೂಚನೆಯವರೆಗಿನ ವಿವಿಧ ಹಂತಗಳನ್ನು ವಿವರಿಸುವ ದಾಖಲೆಗಳನ್ನು ಪರಿಶೀಲಿಸಿದರು.

Bar & Bench

ನೋಟು ರದ್ದತಿ ಕುರಿತಂತೆ 2016ರಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ಣಯದಲ್ಲಿ ದೋಷಗಳಿಲ್ಲ ಎಂದು ಸುಪ್ರೀಂ ಕೋರ್ಟ್‌ ನಿನ್ನೆ ತೀರ್ಪು ನೀಡಿತ್ತು. ನೋಟು ಅಮಾನ್ಯೀಕರಣವನ್ನು ಎತ್ತಿ ಹಿಡಿದ ನಾಲ್ವರು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರು  ಅಂತಿಮ ಅಧಿಸೂಚನೆಯವರೆಗಿನ ವಿವಿಧ ಹಂತಗಳನ್ನು ವಿವರಿಸುವ ದಾಖಲೆಗಳನ್ನು ಪರಿಶೀಲಿಸಿದರು.

ಈ ದಾಖಲೆಗಳನ್ನು ಪರಿಶೀಲಿಸಲೇಬೇಕು ಎಂಬ ಅರ್ಜಿದಾರರ ಒತ್ತಾಯದ ಹಿನ್ನೆಲೆಯಲ್ಲಿ  ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅವುಗಳನ್ನು ಸಲ್ಲಿಸಿದ್ದವು. ನೋಟು ಅಮಾನ್ಯೀಕರಣದ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಲಾಗಿದೆ ಎಂಬುದನ್ನು ಈ ದಾಖಲೆಗಳು ತೋರಿಸಿವೆ:

ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣದ ಪ್ರಸ್ತಾವನೆಗೆ ಚಾಲನೆ ನೀಡಿ 2016ರ  ನವೆಂಬರ್‌ 7ರಂದು ಆರ್‌ಬಿಐನ ಅಭಿಪ್ರಾಯ ಕೇಳಿತು. ಇದಕ್ಕಾಗಿ ಆರ್‌ಬಿಐ ಗವರ್ನರ್‌ಗೆ ಹಣಕಾಸು ಸಚಿವಾಲಯ ಪತ್ರ ಕಳುಹಿಸಿತ್ತು. ಕಪ್ಪುಹಣದ ಚಲಾವಣೆ , ಖೋಟಾ ನೋಟುಗಳ ಹಾವಳಿ, ಹೆಚ್ಚಿದ್ದು ₹500 ಮತ್ತು ₹1,000ರ ನೋಟುಗಳಲ್ಲಿ ಇದರ ಪ್ರಭಾವ ಹೆಚ್ಚು ಎಂದು ತಿಳಿಸಿತು. ಜೊತೆಗೆ ನಗದು ಚಲಾವಣೆ ವಿರುದ್ಧದ ನಿಲುವು ವ್ಯಕ್ತಪಡಿಸಿದ ಪತ್ರ ಸುಪ್ರೀಂ ಕೋರ್ಟ್‌ನ ಇಬ್ಬರು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆಗೆ ಸೂಚಿಸಿತು. ಹೀಗಾಗಿ ಈ ಬಗ್ಗೆ ಕೇಂದ್ರೀಯ ಮಂಡಳಿ ಗಮನಹರಿಸಿ ಅಗತ್ಯ ಶಿಫಾರಸು ಮಾಡುವಂತೆ ಸಲಹೆ ನೀಡಿತು. ಸಾರ್ವಜನಿಕರಿಗೆ ಮತ್ತು ವ್ಯಾಪಾರಿಗಳಿಗೆ ಹೆಚ್ಚು ತೊಂದರೆಯಾಗದಂತೆ ಶಿಫಾರಸುಗಳ ಜಾರಿಗಾಗಿ ಕರಡು ಯೋಜನೆ ರೂಪಿಸಲು ಅದು ವಿನಂತಿಸಿತು.

PM Modi

ಬಳಿಕ ಮರುದಿನವೇ - ನವೆಂಬರ್ 8, 2016ರಂದು ಸಂಜೆ 5 ಗಂಟೆಗೆ ಆರ್‌ಬಿಐ ಕೇಂದ್ರ ಮಂಡಳಿಯ ಸಭೆ ನಡೆಸಲಾಯಿತು. ಸಭೆಯಲ್ಲಿ ಪ್ರಸ್ತಾವನೆ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು. ಮಂಡಳಿಯು ಪ್ರಸ್ತಾವನೆಯ ಸಾಧಕ ಬಾಧಕಗಳನ್ನು ಪರಿಗಣಿಸಿತು. ಎಲೆಕ್ಟ್ರಾನಿಕ್‌ ಪಾವತಿ ವಿಧಾನಗಳಿಗೆ ಒತ್ತು, ಅದರಿಂದಾಗುವ ಪ್ರಯೋಜನಗಳನ್ನು ಚರ್ಚಿಸಲಾಯಿತು. ವಿವರವಾದ ಸಮಾಲೋಚನೆ ಬಳಿಕ  ನೋಟು ಅಮಾನ್ಯೀಕರಣಕ್ಕೆ ಶಿಫಾರಸು ಮಾಡಲು ಮಂಡಳಿ ಸಭೆ ನಿರ್ಧರಿಸಿತು.

ನಂತರ, ಡೆಪ್ಯುಟಿ ಗವರ್ನರ್ ಅವರು ಅದೇ ದಿನ ಅಂದರೆ ನವೆಂಬರ್ 8, 2016 ರಂದು ಕೇಂದ್ರೀಯ ಮಂಡಳಿಯ ಶಿಫಾರಸುಗಳ ಬಗ್ಗೆ ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ, ಹಣಕಾಸು ಸಚಿವಾಲಯಕ್ಕೆ ಪತ್ರ ಮುಖೇನ ತಿಳಿಸಿದರು. ಶಿಫಾರಸುಗಳ ಜೊತೆಗೆ ಅದರ ಅನುಷ್ಠಾನಕ್ಕೆ ಕರಡು ಯೋಜನೆಯನ್ನು ಸಹ ಅದರೊಂದಿಗೆ ಕಳುಹಿಸಿಕೊಡಲಾಗಿತ್ತು. ಅದೇ ದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಶಿಫಾರಸು ಪರಿಗಣನೆಗೆ ಸೂಚಿಸಲಾಯಿತು. ಆರ್ಥಿಕ ಸಮೀಕ್ಷೆಯ ಮಾಹಿತಿ, ಖೋಟಾನೋಟಿನ ಪ್ರಮಾಣ, ಕಪ್ಪುಹಣದ ಇತ್ಯಾದಿ ವಿಚಾರಗಳ ಬಗ್ಗೆ ಗುಪ್ತಚರ ದಳದ ವರದಿ, ಕಪ್ಪುಹಣಕ್ಕೆ ಸಂಬಂಧಿಸಿದಂತೆ 2012ರಲ್ಲಿ ಹೊರಡಿಸಲಾಗಿದ್ದ ಶ್ವೇತಪತ್ರದ ವಿವರ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ವರದಿಯ ಶಿಫಾರಸುಗಳನ್ನು ಸಂಪುಟ ಸಭೆಯ ಟಿಪ್ಪಣಿ ಒಳಗೊಂಡಿತ್ತು.

ಕೆಲವೇ ಗಂಟೆಗಳಲ್ಲಿ ಕೇಂದ್ರೀಯ ಮಂಡಳಿಯ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಯಿತು ಮತ್ತು ಅದೇ ದಿನ (ನವೆಂಬರ್ 8, 2016) ರಾತ್ರಿ 8 ಗಂಟೆಗೆ ರಾಷ್ಟ್ರೀಯ ದೂರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ರದ್ದತಿ ನಿರ್ಧಾರವನ್ನು ಪ್ರಕಟಿಸಿದರು.

ಪ್ರಕರಣದ ವಿಚಾರಣೆ ನಡೆಸಿದ ಐದನೇ  ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ತಮ್ಮ ಭಿನ್ನ ತೀರ್ಪಿನಲ್ಲಿ ಕಾನೂನು ಅಥವಾ ಪೂರ್ಣ ಶಾಸನದ ಮೂಲಕವೇ ಇಂತಹ ನಿರ್ಧಾರಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು. ಜೊತೆಗೆ ಆರ್‌ಬಿಐ ಕೇಂದ್ರ ಸರ್ಕಾರದ ಆದೇಶದಂತೆ ನಡೆದುಕೊಂಡಿದ್ದು ಸ್ವಂತ ವಿವೇಚನೆ ಬಳಸಿಲ್ಲ ಎಂದಿದ್ದರು.