ಮೈಸೂರಿನಲ್ಲಿ ಕ್ಯಾಂಪಸ್ ವಿಸ್ತರಣೆಗಾಗಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದ ಭೂಮಾಲೀಕರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡುವುದನ್ನು ಪ್ರಶ್ನಿಸಿ ದೇಶದ ಮುಂಚೂಣಿ ಸಾಫ್ಟ್‌ವೇರ್ ಸಂಸ್ಥೆ ಇನ್ಫೋಸಿಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ [ಇನ್ಫೋಸಿಸ್ ಲಿಮಿಟೆಡ್ ಮತ್ತು ಬಿ. ರಾಜು ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಮೇಲ್ಮನವಿ ಸಲ್ಲಿಸುವಲ್ಲಿ 160 ದಿನಗಳಿಗೂ ಹೆಚ್ಚು ಕಾಲ ವಿಳಂಬ ಉಂಟಾಗಿರುವುದನ್ನು ಕ್ಷಮಿಸಲಾಗದು ಎಂದಿತು. ಕನ್ನಡದಿಂದ ಇಂಗ್ಲಿಷ್ಗೆ ದಾಖಲೆಗಳನ್ನು ಭಾಷಾಂತರಿಸಲು ಸಮಯ ಹಿಡಿಯಿತು ಎಂಬ ಇನ್ಫೋಸಿಸ್ ಸಮಜಾಯಿಷಿಯನ್ನು ಅದು ಒಪ್ಪಲಿಲ್ಲ.
"ಕನ್ನಡದಿಂದ ಇಂಗ್ಲಿಷ್ಗೆ ದಾಖಲೆಗಳನ್ನು ಭಾಷಾಂತರಿಸಲು ಸಮಯ ಹಿಡಿಯಿತು ಎಂದು ಇನ್ಫೋಸಿಸ್ ಹೇಳುತ್ತಿದೆಯೇ?" ಎಂದು ಅಚ್ಚರಿ ಸೂಚಿಸಿದ ಪೀಠವು "ಅರ್ಜಿ ವಜಾಗೊಳಿಸಲಾಗಿದೆ" ಎಂದು ಆದೇಶಿಸಿತು.
ಇನ್ಫೋಸಿಸ್ ಪರ ಹಾಜರಿದ್ದ ಹಿರಿಯ ವಕೀಲ ಆತ್ಮಾರಾಮ್ ನಾಡಕರ್ಣಿ, ಕಾಲಮಿತಿ ಮೀರಲಾಗಿದೆ ಎಂಬ ಕಾರಣಕ್ಕೆ ಅರ್ಜಿ ತಿರಸ್ಕರಿಸಬಾರದು ಎಂದು ಮನವಿ ಮಾಡಿದರು. ಕಾಲಾವಕಾಶ ವಿಸ್ತರಣೆ ಕೋರಿ ಹೊಸ ಪ್ರಮಾಣಪತ್ರ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದರು. ಆದರೆ ಇದಕ್ಕೆ ನ್ಯಾಯಾಲಯ ಸಮ್ಮತಿಸಲಿಲ್ಲ.
ಮೈಸೂರಿನಲ್ಲಿ ಇನ್ಫೋಸಿಸ್ ಕ್ಯಾಂಪಸ್ ವಿಸ್ತರಣೆಗಾಗಿ ಕೆಐಎಡಿಬಿ ಒಟ್ಟು 18.04 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ವೇಳೆ ಪ್ರತಿವಾದಿಗಳಿಗೆ ಸೇರಿದ್ದ 1.05 ಎಕರೆಯನ್ನು 2005ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. ವಿಶೇಷ ಭೂಸ್ವಾಧೀನ ಅಧಿಕಾರಿ ಪ್ರತಿ ಎಕರೆಗೆ ₹4.85 ಲಕ್ಷ ಪರಿಹಾರ ನೀಡಲು ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ಭೂಮಾಲೀಕರ ಕುಟುಂಬ1894ರ ಭೂಸ್ವಾಧೀನ ಕಾಯಿದೆಯ ಸೆಕ್ಷನ್ 18ರ ಅಡಿಯಲ್ಲಿ ಪರಿಹಾರ ಕೋರಿತು.
ಜನವರಿ 2020ರಲ್ಲಿ, ಮೈಸೂರು ರೆಫರೆನ್ಸ್ ಕೋರ್ಟ್ ಪರಿಹಾರವನ್ನು ಮತ್ತಷ್ಟು ಹೆಚ್ಚಿಸಿ, ಪ್ರತಿ ಚದರ ಅಡಿಗೆ ₹220ರ ದರ ನಿಗದಿಪಡಿಸಿತು, ಜೊತೆಗೆ ಸಾಲ ಮತ್ತು ಬಡ್ಡಿಯಂತಹ ಶಾಸನಬದ್ಧ ಪ್ರಯೋಜನಗಳನ್ನು ನೀಡಿತು.
ತೀರ್ಪನ್ನು ಇನ್ಫೋಸಿಸ್ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತು. ಹರಾಜು ಮಾರಾಟ ಪತ್ರಗಳು ಮತ್ತು ಸಣ್ಣ-ಪ್ಲಾಟ್ ವಹಿವಾಟುಗಳನ್ನು ತಪ್ಪಾಗಿ ಅವಲಂಬಿಸಿ ರೆಫರೆನ್ಸ್ ಕೋರ್ಟ್ ತೀರ್ಪು ನೀಡಿದೆ. ಬೃಹತ್ ಕೃಷಿ ಭೂಮಿಗೆ ಸಂಬಂಧಿಸಿದಂತೆ ಇದನ್ನು ಅನ್ವಯಿಸಲಾಗದು ಎಂದು ಇನ್ಫೋಸಿಸ್ ವಾದಿಸಿತ್ತು.
ಪ್ರಾಥಮಿಕ ಅಧಿಸೂಚನೆಯ ಸಮಯದಲ್ಲಿ ಸ್ವಾಧೀನಪಡಿಸಿಕೊಂಡಿರುವ ಜಮೀನು ಕೃಷಿಯೇತರ ಭೂಮಿಯ ಮೌಲ್ಯವನ್ನು ಹೊಂದಿದೆ ಎನ್ನಲು ವಿಶ್ವಾಸಾರ್ಹ ಪುರಾವೆಗಳಿಲ್ಲ ಎಂದು ಅದು ವಾದಿಸಿತು. ಛಾಯಾಚಿತ್ರಗಳು, ಉಪಗ್ರಹ ಚಿತ್ರಗಳನ್ನು ಗಮನಿಸಿದರೆ ಪರಿಹಾರ ಹೆಚ್ಚಳಕ್ಕೆ ಸಮರ್ಥನೆ ಒದಗುವುದಿಲ್ಲ ಎಂದು ಆಕ್ಷೇಪಿಸಿತು.
ಆದರೆ ಸ್ವಾಧೀನಪಡಿಸಿಕೊಂಡ ಭೂಮಿ ಇನ್ಫೋಸಿಸ್ ಕ್ಯಾಂಪಸ್‌ಗೆ ಹೊಂದಿಕೊಂಡಿದೆ ಮತ್ತು ಬಹು ಸಾಫ್ಟ್ವೇರ್ ಮತ್ತು ಉತ್ಪಾದನಾ ಕಂಪನಿಗಳೊಂದಿಗೆ ವೇಗವಾಗಿ ಕೈಗಾರಿಕೀಕರಣಗೊಳ್ಳುತ್ತಿರುವ ಪ್ರದೇಶದಲ್ಲಿದೆ ಎಂದು ಭೂಮಾಲೀಕರು ಆಕ್ಷೇಪಿಸಿದರು. ಜೊತೆಗೆ ರೆಫರೆನ್ಸ್ ಕೋರ್ಟ್ ಹೇಳಿದ ಪರಿಹಾರ ಕಡಿಮೆಯಾಯಿತು ಎಂದರು.
ಅಕ್ಟೋಬರ್ 22, 2024ರಂದು, ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಉಮೇಶ್ ಎಂ ಅಡಿಗ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಇನ್ಫೋಸಿಸ್ ಮೇಲ್ಮನವಿ ವಜಾಗೊಳಿಸಿತ್ತು. ಭೂಮಿಯು ಇನ್ಫೋಸಿಸ್ ಕ್ಯಾಂಪಸ್ ಬದಿಗೇ ಇದ್ದು, ಸ್ಪಷ್ಟವಾಗಿ ಕೈಗಾರಿಕಾ ಸಾಮರ್ಥ್ಯ ಹೊಂದಿದೆ ಎಂದಿತ್ತು. ಈ ತೀರ್ಪನ್ನು ಪ್ರಶ್ನಿಸಿ ಇನ್ಫೋಸಿಸ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆದರೆ, ಮೇಲ್ಮನವಿ ಸಲ್ಲಿಕೆಗೆ ಇರುವ ಕಾಲಮಿತಿಯಾದ 160 ದಿನಗಳ ಮಿತಿಯನ್ನು ಅದು ಮೀರಿತ್ತು.