ಕೇರಳದ ಮುಲ್ಲಪೆರಿಯಾರ್ ಅಣೆಕಟ್ಟಿನ ಸುರಕ್ಷತೆಯ ಕುರಿತು ಎದ್ದಿರುವ ಕಳವಳದ ಹಿನ್ನೆಲೆಯಲ್ಲಿ ತಾನು ಸುರಕ್ಷತಾ ಪರಿಶೀಲನೆಗೆ ಆದೇಶಿಸಲು ಮುಕ್ತವಾಗಿದ್ದೇನೆ ಎಂಬ ಸುಳಿವನ್ನು ಸುಪ್ರೀಂ ಕೋರ್ಟ್ ಬುಧವಾರ ನೀಡಿದೆ. 130 ವರ್ಷಗಳಷ್ಟು ಹಳೆಯದಾದ ಅಣೆಕಟ್ಟಿನ ಶಿಥಿಲತೆಯ ಕುರಿತು ಭೀತಿ ಮೂಡಿರುವ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್‌ನ ಈ ಹೆಜ್ಜೆ ಮಹತ್ವ ಪಡೆದಿದೆ.
ಅಣೆಕಟ್ಟಿನ ತಪಾಸಣೆಗಾಗಿ ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರವನ್ನು ತಾನು ಕೇಳಬಹುದು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ದೀಪಂಕರ್ ದತ್ತಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ತಿಳಿಸಿದೆ.
ಅಣೆಕಟ್ಟು ಸುರಕ್ಷತಾ ಕಾಯಿದೆಯಡಿ ಅಣೆಕಟ್ಟು ಸುರಕ್ಷತೆಗಾಗಿ ರಾಷ್ಟ್ರೀಯ ಸಮಿತಿ ರಚಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕೂಡ ತಿಳಿಸಿದ ನ್ಯಾಯಾಲಯ ಈ ಕುರಿತು ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರನೆ ಜನವರಿ 22ರಂದು ನಡೆಯಲಿದೆ.
ಅಣೆಕಟ್ಟಿನ ಸುರಕ್ಷತೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಮರುಪರಿಶೀಲಿಸುವಂತೆ ಕೋರಿ ವಕೀಲ ಮ್ಯಾಥ್ಯೂಸ್ ನೆಡುಂಪರ ಅವರು ಅರ್ಜಿ ಸಲ್ಲಿಸಿದ್ದರು.
ಒಂದೊಮ್ಮೆ ಮುಲ್ಲಪೆರಿಯಾರ್ ಅಣೆಕಟ್ಟು ಒಡೆದರೆ ಅದರ ಕೆಳ ಹರಿವಿನಲ್ಲಿ 56 ಕಿಲೋಮೀಟರ್ ದೂರದಲ್ಲಿರುವ ಇಡುಕ್ಕಿ ಅಣೆಕಟ್ಟು ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದ ದುರಂತ ಸಂಭವಿಸುವುದಿಲ್ಲ ಎಂದು 2006ರ ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.
ಬ್ರಿಟಿಷರು ನಿರ್ಮಿಸಿದ ಮುಲ್ಲಪೆರಿಯಾರ್ ಅಣೆಕಟ್ಟು ತಮಿಳುನಾಡು ಮತ್ತು ಕೇರಳದ ನಡುವಿನ ಸಂಘರ್ಷದ ಮೂಲವಾಗಿದೆ. ಅಣೆಕಟ್ಟು ಮತ್ತು ಅದರ ಜಲಾನಯನ ಪ್ರದೇಶ ಕೇರಳ ಭೂಭಾಗದೊಳಗೆ ಇದ್ದರೆ, ಜಲಾಶಯದ ನೀರನ್ನು ತಮಿಳುನಾಡು ಬಳಸುತ್ತಿದ್ದು ತಮಿಳುನಾಡಿನ ಐದು ಜಿಲ್ಲಗಳ ಜೀವನಾಡಿ ಇದಾಗಿದೆ.
2014 ರ ತೀರ್ಪಿನಲ್ಲಿ , ಸುಪ್ರೀಂ ಕೋರ್ಟ್ ತಮಿಳುನಾಡು ಪರವಾಗಿ ತೀರ್ಪು ನೀಡಿತ್ತು. ಅಣೆಕಟ್ಟು ಸುರಕ್ಷಿತವಾಗಿದ್ದು ಜಲಾಶಯದ ನೀರಿನ ಮಟ್ಟವನ್ನು 142 ಅಡಿಗಳಿಗೆ ಇರಿಸಬೇಕು ಎಂದು ಹೇಳಿತ್ತು. ಆಗ ಅಣೆಕಟ್ಟಿನ ನಿರ್ವಹಣೆಗೆ ಮೇಲ್ವಿಚಾರಣಾ ಸಮಿತಿ ರಚಿಸಲಾಗಿತ್ತು.
ಅಣೆಕಟ್ಟು ಸುರಕ್ಷಿತವಾಗಿದೆ ಎಂದು ಎಲ್ಲಾ ಸಮಯದಲ್ಲೂ ಸಮರ್ಥಿಸಿಕೊಂಡಿದ್ದ ತಮಿಳುನಾಡು ಈಗಿರುವ ಅಣೆಕಟ್ಟನ್ನು ಬಲಪಡಿಸಲು ನಿರ್ದೇಶನ ನೀಡಬೇಕು ಎಂದಿತ್ತು.
ನಂತರ 2018ರಲ್ಲಿ ಕೇರಳದಲ್ಲಿ ಪ್ರವಾಹ ತಲೆದೋರಿದ ವೇಳೆ 139 ಅಡಿಗಳಿಗೆ ನೀರಿನ ಮಿತಿಯನ್ನು ತಾತ್ಕಾಲಿಕವಾಗಿ ನಿಗದಿಪಡಿಸಿತ್ತು. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅಣೆಕಟ್ಟು ಅಸುರಕ್ಷಿತವಾಗಿದ್ದು, ಅದನ್ನು ಬಳಕೆಯಿಂದ ಸ್ಥಗಿತಗೊಳಿಸಬೇಕು ಎಂದು ಕೇರಳ ಸರ್ಕಾರ ಸದಾ ಪ್ರತಿಪಾದಿಸುತ್ತಾ ಬಂದಿದೆ.