Morbi Bridge collapse 
ಸುದ್ದಿಗಳು

ಮೋರ್ಬಿ ಸೇತುವೆ ಕುಸಿತ ಭಾರೀ ದುರಂತ ಎಂದ ಸುಪ್ರೀಂ: ನಿಯಮಿತ ವಿಚಾರಣೆ ನಡೆಸಲು ಗುಜರಾತ್ ಹೈಕೋರ್ಟ್‌ಗೆ ಸೂಚನೆ

ಈಗಾಗಲೇ ಸ್ವಯಂಪ್ರೇರಿತವಾಗಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಗುಜರಾತ್ ಹೈಕೋರ್ಟ್ ನಿಯಮಿತವಾಗಿ ಪ್ರಕರಣ ವಿಚಾರಣೆ ನಡೆಸಬೇಕು ಎಂದು ಸೂಚಿಸಿದ ಪೀಠ.

Bar & Bench

ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿದು 135 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ ಮತ್ತು ಅನೇಕರು ಗಾಯಗೊಂಡದ್ದು ಭಾರೀ ದುರಂತ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಹೀಗಾಗಿ, ಈಗಾಗಲೇ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಗುಜರಾತ್ ಹೈಕೋರ್ಟ್ ನಿಯಮಿತವಾಗಿ ವಿಚಾರಣೆ ನಡೆಸಬೇಕು ಎಂದು ಸಿಜೆಐ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ನಿರ್ದೇಶಿಸಿದೆ.

"ಇದೊಂದು ದೊಡ್ಡ ದುರಂತವಾಗಿದ್ದು ಗುತ್ತಿಗೆ ನೀಡಿಕೆ, ಗುತ್ತಿಗೆ ನೀಡಿದವರ ಅರ್ಹತೆ, ತಪ್ಪಿಗೆ ಕಾರಣರಾದವರ ಉತ್ತರಾದಯಿತ್ವ ಪರೀಕ್ಷಿಸುವ ಸಲುವಾಗಿ ವಾರಕ್ಕೊಮ್ಮೆ ಮೇಲ್ವಿಚಾರಣೆ ಅಗತ್ಯವಿದೆ. ಹೈಕೋರ್ಟ್ ಇದಾಗಲೇ ವಿಚಾರಣೆ ನಡೆಸುತ್ತಿದೆ. ಇಲ್ಲದಿದ್ದರೆ ನಾವು ನೋಟಿಸ್ ನೀಡಬೇಕಾಗುತ್ತಿತ್ತು" ಎಂದು ಮೌಖಿಕವಾಗಿ ಹೇಳಿದ ಪೀಠ ಕಡೆಗೆ ನಿಯಮಿತವಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಸೂಚಿಸಿತು.

"140 ಮಂದಿ ಸಾವನ್ನಪ್ಪಿದ್ದಾರೆ ಅದರಲ್ಲಿ 47 ಮಕ್ಕಳಿದ್ದಾರೆ. ಪ್ರಕರಣದ ಹಲವಾರು ಅಂಶಗಳಿಗೆ ನಿಯಮಿತ ಪ್ರಸ್ತಾಪಗಳು ಬೇಕಾಗುತ್ತವೆ. ಹೀಗಾಗಿ ಪ್ರಕರಣದ ಬೆಳವಣಿಗೆಗಳನ್ನು ಕಾಲದಿಂದ ಕಾಲಕ್ಕೆ ತಿಳಿಯಲು ಹೈಕೋರ್ಟ್ ಇದನ್ನು ನಿಗದಿತವಾಗಿ ವಿಚಾರಣೆ ನಡೆಸುವಂತೆ ಕೇಳುತ್ತಿದ್ದೇವೆ" ಎಂದು ನ್ಯಾಯಾಲಯ ಹೇಳಿದೆ.

ಸೇತುವೆಗೆ ಸಂಬಂಧಿಸಿದ ಅಕ್ರಮಗಳ ತನಿಖೆ ನಡೆಸುವುದು, ನಗರಪಾಲಿಕೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವುದು ಮತ್ತು ಸೇತುವೆಯ ನಿರ್ವಹಣೆಗೆ ವಹಿಸಲಾಗಿರುವ ಏಜೆನ್ಸಿಗೆ ಸಂಬಂಧಿಸಿದವರನ್ನು ಬಂಧಿಸುವುದು ಮುಂತಾದ ಘಟನೆಗೆ ಕಾರಣರಾದವರನ್ನು ಹೊಣೆ ಮಾಡುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕು ಎಂದು ಕೋರಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮೆಲಿನಂತೆ ಹೇಳಿತು.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ ಶಂಕರ ನಾರಾಯಣನ್ “ಅರ್ಜಿದಾರರ ಅಣ್ಣ ಮತ್ತು ಅತ್ತಿಗೆ 9 ವರ್ಷದ ಮಗುವನ್ನು ಬಿಟ್ಟು ಸಾವನ್ನಪ್ಪಿದ್ದಾರೆ” ಎಂದರು. ಸತ್ಯ ಹೊರತರಲು ಸ್ವತಂತ್ರ ತನಿಖೆ ನಡೆಸಬೇಕಿದೆ. ಚುನಾವಣೆ ಕೂಡ ಹತ್ತಿರವಾಗುತ್ತಿದ್ದು ಅಜಂತಾ ಒರೇವಾ ಹಿಂದಿರುವ ದೊಡ್ಡ ತಿಮಿಂಗಿಲಗಳನ್ನು ಹಿಡಿಯಬೇಕಿದೆ. ಸಂತ್ರಸ್ತರಿಗೆ ನೀಡಿರುವ ಪರಿಹಾರ ಸಮರ್ಪಕವಾಗಿಲ್ಲ. ಪರಿಹಾರ ನೀತಿಯಲ್ಲಿ ಬದಲಾವಣೆ ತರಬೇಕಿದೆ” ಎಂದರು.

ಇತ್ತ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಗುಜರಾತ್‌ ಹೈಕೋರ್ಟ್‌ ಘಟನೆಯ ವಿಚಾರಣೆ ನಡೆಸುತ್ತಿರುವುದರಿಂದ ಸುಪ್ರೀಂ ಕೋರ್ಟ್‌ ಅರ್ಜಿಗಳ ವಿಚಾರಣೆ ನಡೆಸಲು ಬೇರೆ ಕಾರಣಗಳಿಲ್ಲ. ಅರ್ಜಿದಾರ ಇಲ್ಲಿ ವಾದಿಸಿರುವುದನ್ನು ಹೈಕೋರ್ಟ್‌ನಲ್ಲಿಯೂ ವಾದಿಸಬಹುದು ಎಂದರು. ಈ ಹಂತದಲ್ಲಿ ನ್ಯಾಯಾಲಯ ಹೈಕೋರ್ಟ್‌ನಲ್ಲಿ ವಾದ ಮಂಡಿಸಲು ಮತ್ತು ಪ್ರಕರಣದಲ್ಲಿ ಮಧ್ಯಪ್ರವೇಶೀಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿತು.