Bulldozer  Image for representative purposes
ಸುದ್ದಿಗಳು

ತನ್ನ ಅನುಮತಿಯಿಲ್ಲದೆ ಸದ್ಯಕ್ಕೆ 'ಬುಲ್ಡೋಜರ್ ನ್ಯಾಯʼಕ್ಕೆ ಮುಂದಾಗುವಂತಿಲ್ಲ ಎಂದ ಸುಪ್ರೀಂ ಕೋರ್ಟ್

ಅನಧಿಕೃತ ಕಟ್ಟಡ ತೆರವುಗೊಳಿಸಲು ಇಂತಹ ಕ್ರಮ ಅಗತ್ಯವಿರುವ ಪ್ರಕರಣಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Bar & Bench

ಅಪರಾಧ ಪ್ರಕ್ರಿಯೆಯಲ್ಲಿ ಆರೋಪಿಗಳಾಗಿರುವವರ ಮನೆ ಅಥವಾ ಅಂಗಡಿಗಳನ್ನು ನ್ಯಾಯಾಲಯದ ಅನುಮತಿ ಪಡೆಯದೇ ಬುಲ್ಡೋಜರ್‌ ಬಳಸಿ ನೆಲಸಮ ಮಾಡುವುದನ್ನು (ಬುಲ್ಡೋಜರ್‌ ನ್ಯಾಯ) ನಿಷೇಧಿಸಿ ಸುಪ್ರೀಂ ಕೋರ್ಟ್‌ ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದೆ.

ಅನಧಿಕೃತ ಕಟ್ಟಡ ತೆರವುಗೊಳಿಸಲು ಇಂತಹ ಕ್ರಮ ಅಗತ್ಯವಿರುವ ಪ್ರಕರಣಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮುಂದಿನ ವಿಚಾರಣೆ ನಡೆಯಲಿರುವ ಅಕ್ಟೋಬರ್ 1ರವರೆಗೆ ಈ ಆದೇಶ ಜಾರಿಯಲ್ಲಿರಬೇಕು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಹೇಳಿದೆ.

"ಮುಂದಿನ (ವಿಚಾರಣಾ) ದಿನದವರೆಗೆ ಈ ನ್ಯಾಯಾಲಯದ ಅನುಮತಿ ಪಡೆಯದೆ ಯಾವುದೇ ನೆಲಸಮ ಚಟುವಟಿಕೆ ಮಾಡಬಾರದು. ಆದರೆ ಸಾರ್ವಜನಿಕ ರಸ್ತೆ, ಫುಟ್‌ಪಾತ್‌, ರೈಲ್ವೆ ಮಾರ್ಗ, ಜಲಮೂಲ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಲಾದ ಅನಧಿಕೃತ ಕಟ್ಟಡಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ" ಎಂದು ನ್ಯಾಯಾಲಯ ಆದೇಶಿಸಿದೆ.

ಕಾನೂನುಬಾಹಿರ ದಂಡನೆ ಎಂಬಂತೆ ಕ್ರಿಮಿನಲ್‌ ಮೊಕದ್ದಮೆಗಳಲ್ಲಿ ಆರೋಪಿಗಳಾದವರ ಮನೆ ಅಥವಾ ಅಂಗಡಿ ನೆಲಸಮ ಮಾಡುವುದನ್ನು ತಡೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶ ಪ್ರಕಟಿಸಿದೆ.

ಬುಲ್ಡೋಜರ್‌ ನ್ಯಾಯವನ್ನು ಈ ಹಿಂದಿನ ವಿಚಾರಣೆ ವೇಳೆ ಖಂಡಿಸಿದ್ದ ಸುಪ್ರೀಂ ಕೋರ್ಟ್‌ ಇಂತಹ ಸಮಸ್ಯೆಗಳನ್ನು ನಿಭಾಯಿಸಲು ಮಾರ್ಗಸೂಚಿ ಹೊರಡಿಸುವುದಾಗಿ ತಿಳಿಸಿತ್ತು.

ಗಮನಾರ್ಹ ಸಂಗತಿ ಎಂದರೆ ಕಟ್ಟಡ ಅಕ್ರಮವಾಗಿದ್ದರೆ ಮಾತ್ರ ನೆಲಸಮ ಮಾಡಬಹುದು ಎಂಬ ಉತ್ತರ ಪ್ರದೇಶ ಸರ್ಕಾರದ ನಿಲುವನ್ನು ಇದೇ ವೇಳೆ ನ್ಯಾಯಾಲಯ ಶ್ಲಾಘಿಸಿತು.

ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರ ತೀವ್ರ ಆಕ್ಷೇಪದ ನಡುವೆ ನ್ಯಾಯಾಲಯ ಇಂದಿನ ಆದೇಶ ನೀಡಿದೆ.

ಇಂತಹ ಧ್ವಂಸ ಕಾರ್ಯಾಚರಣೆ ಕಾನೂನುಬಾಹಿರವಾಗಿದ್ದು ಕೇವಲ ಒಂದು ಧಾರ್ಮಿಕ ಸಮುದಾಯವನ್ನು (ಮುಸ್ಲಿಮರು) ಗುರಿಯಾಗಿಸಲು ಬಳಸಲಾಗುತ್ತಿದೆ ಎಂಬ ಸುಳ್ಳು ನಿರೂಪಣೆಯಿಂದ ನ್ಯಾಯಾಲಯವನ್ನು  ದಿಕ್ಕುತಪ್ಪಿಸಲಾಗುತ್ತಿದೆ ಎಂದು ಮೆಹ್ತಾ ವಾದಿಸಿದರು.

 ಎಸ್‌ ಜಿ ಅವರ ವಾದಕ್ಕೆ ವಿರೋಧ ವ್ಯಕ್ತಪಡಿಸಿದ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಹಿರಿಯ ವಕೀಲರಾದ ಸಿ ಯು ಸಿಂಗ್ ಮತ್ತು ಎಂ ಆರ್ ಶಂಶದ್ ನೆಲಸಮ ಕಾರ್ಯಾಚರಣೆ ಮುಂದುವರೆದಿದ್ದು ಸಮಸ್ಯೆ ಗಂಭೀರವಾಗಿದೆ ಎಂದರು.

ಅರ್ಜಿ ಮುಂದೂಡುವಂತೆ ಮೆಹ್ತಾ ಕೋರಿದರಾದರೂ ಅರ್ಜಿದಾರರ ಪರ ವಕೀಲರು ಅಲ್ಪಾವಧಿಗೆ ಮುಂದೂಡುವಂತೆ ಮನವಿ ಮಾಡಿದರು.

ಆಗ ನ್ಯಾ. ವಿಶ್ವನಾಥನ್‌ ತಾವು ವ್ಯವಸ್ಥಿತ ನಿರ್ದೇಶನಗಳನ್ನು ನೀಡುವವರೆಗೆ ಯಾರೂ ಕಾನೂನನ್ನು ದುರುಪಯೋಗಪಡಿಸಿಕೊಳ್ಳದಂತೆ ತಾಕೀತು ಮಾಡಿದರು. ಆಗ ನ್ಯಾ. ಗವಾಯಿ ಅವರು ಸರ್ಕಾರ ತನ್ನ ವಾದಗಳನ್ನು ವಿವರಿಸುವ ಸಮಗ್ರ ಅಫಿಡವಿಟ್ ಅನ್ನು ಸಲ್ಲಿಸಬಹುದು. ಸರ್ಕಾರದ ಕಾರ್ಯಾಂಗ ನ್ಯಾಯಾಧೀಶನ ಪಾತ್ರ ನಿರ್ವಹಿಸುವಂತಿಲ್ಲ ಎಂದು ಎಚ್ಚರಿಸಿದರು.

 ಆದರೆ ನೆಲಸಮ ಚಟುವಟಿಕೆ ನಿರ್ಬಂಧಿಸುವ ಯಾವುದೇ ಮಧ್ಯಂತರ ಆದೇಶವನ್ನು ತೀವ್ರವಾಗಿ ವಿರೋಧಿಸಿದ ಮೆಹ್ತಾ ಅರ್ಜಿದಾರರ ನಿರೂಪಗಳಿಗೆ ನ್ಯಾಯಾಲಯ ಕಿವಿಗೊಡಬಾರದು ಎಂದರು.

ಅಕ್ಟೋಬರ್‌ 1ರವರೆಗೆ ನೆಲಸಮ ಕಾರ್ಯಾಚರಣೆಗೆ ಮುಂದಾಗಂತೆ ಕೈಕಟ್ಟಿಕೊಳ್ಳುವಿರೇ ಎಂದು ನ್ಯಾ. ಗವಾಯಿ ಪ್ರಶ್ನಿಸಿದಾಗ ಮಧ್ಯಂತರ ಆದೇಶ ಅಧಿಕಾರಿಗಳು ಅಗತ್ಯ ಕರ್ತವ್ಯ ನಿರ್ವಹಿಸುವುದನ್ನು ತಡೆಯುತ್ತದೆ ಮೆಹ್ತಾ ಆಕ್ಷೇಪಿಸಿದರು.

ಗಮನಾರ್ಹವೆಂದರೆ ಸುಪ್ರೀಂ ಕೋರ್ಟ್‌ ಮತ್ತೊಂದು ಪೀಠ ಕೂಡ ಬುಲ್ಡೋಜರ್‌ ನ್ಯಾಯ ಕಾನೂನು ಮೀರುವಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು.