ದೇಶದುದ್ದಗಲಕ್ಕೂ ನಡೆದಿರುವ ಡಿಜಿಟಲ್ ಅರೆಸ್ಟ್ ಹಗರಣಗಳ ತನಿಖೆಯನ್ನು ಆರಂಭಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ಆದೇಶಿಸಿದೆ.
ಡಿಜಿಟಲ್ ಅರೆಸ್ಟ್, ಹೂಡಿಕೆ ಹಾಗೂ ಅರೆಕಾಲಿಕ ಉದ್ಯೋಗಕ್ಕೆ ಸಂಬಂಧಿಸಿದ ಸೈಬರ್ ವಂಚನೆಗಳ ಕುರಿತು ಅಮಿಕಸ್ ಕ್ಯೂರಿ ಅವರು ಪ್ರಸ್ತಾಪಿಸಿದ್ದನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಗಣನೆಗೆ ತೆಗೆದುಕೊಂಡಿತು.
ಅಂತೆಯೇ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣಗಳನ್ನೇ ಸಿಬಿಐ ಆದ್ಯತೆಯ ಮೇಲೆ ತನಿಖೆ ನಡೆಸಬೇಕು. ಉಳಿದ ವಂಚನೆಗಳನ್ನು ನಂತರದ ಹಂತದಲ್ಲಿ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಸೂಚಿಸಿತು.
ತನಿಖೆಗೆ ಸಂಬಂಧಿಸಿದಂತೆ ಸಿಬಿಐಗೆ ಸಂಪೂರ್ಣ ಸ್ವಾತಂತ್ರ್ಯ ಇದ್ದು ಬ್ಯಾಂಕ್ ಖಾತೆಗಳನ್ನು ಬಳಸಲಾಗಿದ್ದರೆ ಬ್ಯಾಂಕರ್‌ಗಳ ಪಾತ್ರವನ್ನೂ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಪರಿಶೀಲಿಸಬಹುದು. ಟೆಲಿಕಾಂ, ಡಿಜಿಟಲ್ ಮಧ್ಯಸ್ಥ ವೇದಿಕೆಗಳು, ನಿಯಂತ್ರಣ ಸಂಸ್ಥೆಗಳು ಹೀಗೆ ಸಂಬಂಧಪಟ್ಟವರು ತನಿಖೆಗೆ ಸಹಕರಿಸಬೇಕು. ಸಿಮ್ ಕಾರ್ಡ್ ದುರುಪಯೋಗ ತಡೆಯಲು ಕ್ರಮ ಕೈಗೊಳ್ಳಬೇಕು. ಸಾಮಾನ್ಯವಾಗಿ ಸಿಬಿಐ ತನಿಖೆಗೆ ಸಮ್ಮತಿ ನೀಡದ ರಾಜ್ಯಗಳು ಕೂಡ ಸಿಬಿಐ ದೇಶದೆಲ್ಲೆಡೆ ತನಿಖೆ ನಡೆಸಲು ಸಾಧ್ಯವಾಗುವಂತೆ ಈ ಪ್ರಕರಣದ ತನಿಖೆಗೆ ಒಪ್ಪಿಗೆ ನೀಡಬೇಕು. ರಾಜ್ಯ ಸರ್ಕಾರಗಳು ಸೈಬರ್ ಅಪರಾಧ ತಡೆ ಕೇಂದ್ರಗಳನ್ನು ಸ್ಥಾಪಿಸಬೇಕು, ಈಗಾಗಲೇ ಅಸ್ತಿತ್ವದಲ್ಲಿದ್ದರೆ ಈ ಕುರಿತು ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ದೇಶದಾದ್ಯಂತ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ಘಟನೆಗಳನ್ನು ನಿಗ್ರಹಿಸುವ ಸಂಬಂಧ ಕಳೆದ ಅಕ್ಟೋಬರ್‌ನಲ್ಲಿ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.
ಈ ವೇಳೆ ನ್ಯಾಯಾಲಯ, ʼವಂಚಕರು ಸುಪ್ರೀಂ ಕೋರ್ಟ್ ಹೆಸರಿನಲ್ಲಿ ನಕಲಿ ಆದೇಶಗಳನ್ನು ತಯಾರಿಸಿದ್ದಾರೆ. ಅಲ್ಲದೆ ಸಿಬಿಐ, ನ್ಯಾಯಾಲಯ, ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಜನರನ್ನು ಅದರಲ್ಲಿಯೂ ಹಿರಿಯ ನಾಗರಿಕರನ್ನು ಬೆದರಿಸುತ್ತಿದ್ದಾರೆ. ಇದು ನ್ಯಾಯಾಂಗದ ಮೇಲೆ ಜನರು ಇರಿಸಿರುವ ವಿಶ್ವಾಸದ ಬುನಾದಿಗೆ ಹೊಡೆತ ಎಂದಿತ್ತು. ₹3,000 ಕೋಟಿಯಷ್ಟು ವಂಚನೆ ನಡೆದಿರುವುದು ಅಚ್ಚರಿಗೀಡು ಮಾಡುವ ವಿಚಾರ ಎಂದು ಹೇಳಿತ್ತು.