ಗೂಂಡಾ ಹಣೆಪಟ್ಟಿ ಹಚ್ಚಿ ಚೆನ್ನೈ ಪೊಲೀಸರು ಕಳೆದ ಮೇನಲ್ಲಿ ಬಂಧಿಸಿದ್ದ ಯೂಟ್ಯೂಬರ್ ಸವುಕ್ಕು ಶಂಕರ್ ಅವರನ್ನು ಮಧ್ಯಂತರ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದೆ [ಎ ಕಮಲ ಮತ್ತು ತಮಿಳುನಾಡು ಸರ್ಕಾರ ಇನ್ನಿತರರ ನಡುವಣ ಪ್ರಕರಣ]
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು ಶಂಕರ್ ಅವರನ್ನು ಬಂಧಿಸಿರುವ ನಿರ್ಧಾರವನ್ನು ಪ್ರಶ್ನಿಸಿದೆ. ಅಲ್ಲದೆ ಮದ್ರಾಸ್ ಹೈಕೋರ್ಟ್ ಅವರ ಸ್ವಾತಂತ್ರ್ಯದ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಅದು ಟೀಕಿಸಿದೆ.
ಪರಿಣಾಮ ಮುಂಜಾಗ್ರತಾ ಕ್ರಮವಾಗಿ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಬಾಕಿ ಇರುವಾಗಲೇ ಅವರನ್ನು ಮಧ್ಯಂತರ ಕ್ರಮವಾಗಿ ಬಿಡುಗಡೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.
ಶಂಕರ್ ಅವರನ್ನು ನಿರಂತರವಾಗಿ ಬಂಧನದಲ್ಲಿರಿಸುವುದನ್ನು ಪ್ರಶ್ನಿಸಿ ಅವರ ತಾಯಿ ಕಮಲಾ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಕಳೆದ ಮೇನಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಭಿನ್ನ ತೀರ್ಪು ನೀಡಿತ್ತು.
ಇಂದಿನ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಇದೊಂದು ಸಾಮಾನ್ಯ ಸಿವಿಲ್ ವ್ಯಾಜ್ಯವಾಗಿರದೆ ಮುಂಜಾಗ್ರತಾ ಕ್ರಮವಾಗಿ ಬಂಧನಕ್ಕೆ ಸಂಬಂಧಿಸಿದ ವಿಚಾರವಾಗಿದೆ ಎಂದಿತು.
"ಒಬ್ಬರ ಸ್ವಾತಂತ್ರ್ಯ ಅಪಾಯದಲ್ಲಿದೆ. ಅವರು 2 ತಿಂಗಳ ಕಾಲ ಮಂಜಾಗ್ರತಾ ಕ್ರಮದ ಬಂಧನದಲ್ಲಿದ್ದಾರೆ" ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು. ಈ ಹಂತದಲ್ಲಿ ನ್ಯಾ. ಅಮಾನುಲ್ಲಾ ಅವರು “ಹೈಕೋರ್ಟ್ ಬಹಳ ಲಘುವಾಗಿ ಸ್ವಾತಂತ್ರ್ಯದ ವಿಚಾರವನ್ನು ಪರಿಗಣಿಸಿರುವಂತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ಗೆ ಪ್ರಕರಣ ವರ್ಗಾಯಿಸುವಂತೆ ಕೋರಿದ ಸವಕ್ಕು ಅವರ ತಾಯಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ದವೆ ಹೈಕೋರ್ಟ್ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಲು ನಿರಾಕರಿಸಿದೆ ಎಂದರು.
ಶಂಕರ್ ಅವರನ್ನು ಬಂಧನದಿಂದ ಬಿಡುಗಡೆ ಮಾಡಲು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಆಲಿಸದಂತೆ ಇಬ್ಬರು ಅಪರಿಚಿತ ವ್ಯಕ್ತಿಗಳು ತನಗೆ ಎಚ್ಚರಿಕೆ ನೀಡಿದ್ದರು ಎಂದು ನ್ಯಾಯಮೂರ್ತಿಯೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಲಾಯಿತು.
ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ಅವರು ಹೈಕೋರ್ಟ್‌ನಿಂದ ಪ್ರಕರಣ ವರ್ಗಾಯಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
ಆದರೆ ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳನ್ನು ಗಮನಿಸಿ ಶಂಕರ್ ಅವರನ್ನು ಮಧ್ಯಂತರ ಬಿಡುಗಡೆಗೆ ಆದೇಶಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತು. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಸೂಚಿಸಿತು.