ಮರ್ಸಿಡಿಸ್ ಬೆಂಜ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಖರೀದಿಸಿದ್ದ ಕಾರ್ ದೋಷಪೂರಿತವಾಗಿದ್ದ ಹಿನ್ನೆಲೆಯಲ್ಲಿ ಕಾರು ಖರೀದಿಸಿದ್ದ ಕಂಟ್ರೋಲ್ಸ್ ಮತ್ತು ಸ್ವಿಚ್ಗೇರ್ ಕಂಪನಿ ಲಿಮಿಟೆಡ್‌ಗೆ ₹36 ಲಕ್ಷ ಮರುಪಾವತಿ ಮಾಡುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶಿಸಿದೆ. [ಡೈಮ್ಲರ್ ಕ್ರಿಸ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಕಂಟ್ರೋಲ್ಸ್ ಮತ್ತು ಸ್ವಿಚ್ಗೇರ್ ಕಂಪನಿ ಲಿಮಿಟೆಡ್ ಇನ್ನಿತರರ ನಡುವಣ ಪ್ರಕರಣ]
ಮರ್ಸಿಡಿಸ್‌ನಿಂದ ಖರೀದಿಸಿದ ಎರಡು ಕಾರುಗಳಲ್ಲಿ ಒಂದರಲ್ಲಿ, ತಾಂತ್ರಿಕ ತೊಂದರೆ ಇತ್ತು ಎಂದು ಖರೀದಿದಾರ ಕಂಪೆನಿ ವಾದಿಸಿತ್ತು. ದೋಷ ಸರಿಪಡಿಸಲು ಮರ್ಸಿಡಿಸ್ ಹಲವು ಬಾರಿ ಯತ್ನಿಸಿದರೂ ತಾಂತ್ರಿಕ ದೋಷ ಮುಂದುವರೆದಿತ್ತು ಎಂದು ವಾದಿಸಲಾಯಿತು.
ಹಾಗೆ ಕಾರ್ ಅತಿಯಾಗಿ ಬಿಸಿಯಾಗುವುದು ಖರೀದಿದಾರ ಕಂಪೆನಿಯೊಂದಿಗಿನ ಒಪ್ಪಂದದ ಅಡಿಯಲ್ಲಿ ಮರ್ಸಿಡಿಸ್ ನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾದ ಗುಣಮಟ್ಟ ಇಲ್ಲವೇ ಮಾನದಂಡದಲ್ಲಿನ ದೋಷ, ಅಪೂರ್ಣತೆ ಅಥವಾ ನ್ಯೂನತೆ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರಿದ್ದ ವಿಭಾಗೀಯ ಪೀಠ ನುಡಿದಿದೆ.
ತಮ್ಮ ಕಾರು ಪ್ರಪಂಚದಲ್ಲೇ ಅತ್ಯುತ್ತಮ ಮತ್ತು ಸುರಕ್ಷಿತ ಎಂದು ಬಿಂಬಿಸಿ ಬ್ರೌಷರ್ ಅಥವಾ ಜಾಹೀರಾತರುಗಳನ್ನು ನೀಡುವ ಪೂರೈಕೆದಾರರ ಮೇಲೆ ಹೆಚ್ಚಿನ ನಂಬಿಕೆ ಇಟ್ಟು ವಾಹನ ಖರೀದಿಸುವ ಜನರು ತೊಂದರೆ ಅನುಭವಿಸುವುದಕ್ಕಾಗಿ ಉತ್ತಮ ದರ್ಜೆಯ ಐಷಾರಾಮಿ ಖಾರುಗಳನ್ನು ಖರೀದಿಸುವುದಿಲ್ಲ ಎಂದು ನ್ಯಾಯಾಲಯ ಖಾರವಾಗಿ ಪ್ರತಿಕ್ರಿಯಿಸಿದೆ.
ಖರೀದಿದಾರ ಕಂಪೆನಿ ತೊಂದರೆ ಮತ್ತು ಸಮಯ ಹಾಗೂ ಶ್ರಮವನ್ನು ವ್ಯಯಿಸಿದ ಹಿನ್ನೆಲೆಯಲ್ಲಿ ಕಾರ್ ಹಿಂಪಡೆದು ಹಣ ಮರುಪಾವತಿಸುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ನೀಡಿದ್ದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿಯಿತು.
ಆದರೆ ಕಾರನ್ನು 2006ರಲ್ಲೇ ಖರೀದಿಸಲಾಗಿದ್ದು ಖರೀದಿದಾರ ಕಂಪೆನಿಯ ಬಳಿಯೇ ಸುಮಾರು ಹದಿನೇಳು ವರ್ಷಗಳ ಕಾಲ ಕಾರು ಇತ್ತು ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಎನ್‌ಸಿಡಿಆರ್‌ಸಿ ಸೂಚಿಸಿದ್ದಂತೆ ಕಾರಿನ ಮೂಲ ಖರೀದಿ ಬೆಲೆ 58 ಲಕ್ಷ ರೂಪಾಯಿ ಬದಲಿಗೆ ₹ 36 ಲಕ್ಷ ಮರಳಿಸುವಂತೆ ಮರ್ಸಿಡಿಸ್‌ಗೆ ಸೂಚಿಸಿತು.
ಪ್ರತಿವಾದಿ ಕಂಪನಿಯು 'ವಾಣಿಜ್ಯ ಉದ್ದೇಶಕ್ಕಾಗಿ' ಕಾರನ್ನು ಖರೀದಿಸಿದೆ ಎಂದು ಸಾಬೀತುಪಡಿಸುವುದು ಮರ್ಸಿಡಿಸ್‌ಗೆ ಸಂಬಂಧಿಸಿದ ವಿಚಾರ ಎಂಬುದನ್ನು ಗಮನಿಸಿದ ನ್ಯಾಯಾಲಯ ಮರ್ಸಿಡಿಸ್ ತನ್ನ ನಿಲುವನ್ನು ಬೆಂಬಲಿಸುವಂತಹ ಸಾಕ್ಷ್ಯಗಳನ್ನು ನೀಡಿಲ್ಲ ಎಂದು ಅಭಿಪ್ರಾಯಪಟ್ಟಿತು.
ಕಾಯಿದೆಯ ಅಡಿಯಲ್ಲಿ ಪ್ರತಿವಾದಿ-ಕಂಪನಿಯು 'ಗ್ರಾಹಕ' ಎಂದು ಪ್ರತಿಪಾದಿಸಿದ ನ್ಯಾಯಾಲಯ ಕಾರ್ ಅತಿಯಾಗಿ ಬಿಸಿಯಾಗುವುದು ಕಾಯಿದೆಯ ಸೆಕ್ಷನ್ 2(1)(f) ಅಡಿಯಲ್ಲಿ ದೋಷ. ಇದಕ್ಕೆ ಕಾಯಿದೆ ವ್ಯಾಪ್ತಿಯಲ್ಲಿ ಮರ್ಸಿಡಿಸ್ ಹೊಣೆಗಾರನಾಗಿರುತ್ತದೆ ಎಂದು ತಿಳಿಸಿತು.