Supreme Court  
ಸುದ್ದಿಗಳು

ಅಪಘಾತ ಪ್ರಕರಣ: ಅಮೂಲ್ಯ ಅವಧಿಯಲ್ಲಿ ನಗದು ರಹಿತ ಚಿಕಿತ್ಸೆಗೆ ಯೋಜನೆ ರೂಪಿಸಲು ಕೇಂದ್ರಕ್ಕೆ ಸುಪ್ರೀಂ ಆದೇಶ

ಮಾರ್ಚ್ 14ರೊಳಗೆ ಯೋಜನೆ ಸಂಬಂಧ ಅಧಿಸೂಚನೆ ಹೊರಡಿಸಬೇಕು. ಗಡುವು ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Bar & Bench

ಮೋಟಾರು ಅಪಘಾತ ಸಂತ್ರಸ್ತರ ಜೀವ ರಕ್ಷಣೆಯ ದೃಷ್ಟಿಯಿಂದ ಅತಿ ತುರ್ತು ಚಿಕಿತ್ಸೆ ಅಗತ್ಯವಿರುವ ʼಗೋಲ್ಡನ್‌ ಅವಧಿʼಯಲ್ಲಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆ ರೂಪಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ [ಎಸ್‌ ರಾಜಶೇಖರನ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಅಪಘಾತವಾದ ಮೊದಲ 60 ನಿಮಿಷಗಳು ರೋಗಿಯ ಪಾಲಿಗೆ ತುರ್ತು ಚಿಕಿತ್ಸೆ ಅಗತ್ಯವಿರುವ ಅತಿ ನಿರ್ಣಾಯಕ ಅವಧಿಯಾಗಿದ್ದು ಈ ಅವಧಿಯಲ್ಲಿ ಅಗತ್ಯ ವೈದ್ಯಕೀಯ ಚಿಕಿತ್ಸೆ ದೊರೆಯದಿದ್ದರೆ ಗಾಯಾಳು ಪ್ರಾಣ ಕಳೆದುಕೊಳ್ಳಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಮೋಟಾರು ವಾಹನ ಕಾಯಿದೆಯ ಸೆಕ್ಷನ್‌ 162ರ ಪ್ರಕಾರ ಅಪಘಾತ ಸಂತ್ರಸ್ತರಿಗೆ  ಗೋಲ್ಡನ್‌ ಅವಧಿಯಲ್ಲಿ ನಗದು ರಹಿತ ಚಿಕಿತ್ಸೆ ಒದಗಿಸುವ ಯೋಜನೆ ರೂಪಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದಾಗಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್‌ ಅವರಿದ್ದ ಪೀಠ ತಿಳಿಸಿದೆ.

"ಯೋಜನೆಯನ್ನು ರೂಪಿಸುವುದು ಕೇಂದ್ರ ಸರ್ಕಾರದ ಶಾಸನಬದ್ಧ ಹೊಣೆಗಾರಿಕೆಯಾಗಿದೆ. ಪರಿಚ್ಛೇದ 162ರ ಉಪ ಸೆಕ್ಷನ್‌ (2)ರ ಅಡಿಯಲ್ಲಿ ಯೋಜನೆ  ರೂಪಿಸಲು ಕೇಂದ್ರಕ್ಕೆ ಸಮಂಜಸವಾದ ಸಮಯಕ್ಕಿಂತ ಹೆಚ್ಚು ಕಾಲಾವಕಾಶ ಇತ್ತು. ಒಮ್ಮೆ ಯೋಜನೆ ರೂಪುಗೊಂಡು ಜಾರಿಯಾದರೆ ಇದು ಅಪಘಾತಕ್ಕೀಡಾಗಿ ಗೋಲ್ಡನ್‌ ಅವಧಿಯಲ್ಲಿ ಅಗತ್ಯ ಚಿಕಿತ್ಸೆ ದೊರೆಯದೆ ಮರಣವನ್ನಪ್ಪುವಂತಹ ಹಲವು ಗಾಯಾಳುಗಳ ಜೀವ ಉಳಿಸುತ್ತದೆ” ಎಂದು ಆದೇಶ ತಿಳಿಸಿದೆ.

ಹೀಗಾಗಿ ಮಾರ್ಚ್ 14ರೊಳಗೆ ಯೋಜನೆ ಸಂಬಂಧ ಅಧಿಸೂಚನೆ ಹೊರಡಿಸಬೇಕು. ಗಡುವು ವಿಸ್ತರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಗೋಲ್ಡನ್‌ ಅವಧಿಯಲ್ಲಿ ನಗದು ರಹಿತ ಚಿಕಿತ್ಸೆ ಒದಗಿಸಬೇಕಾದ ತಾರ್ಕಿಕತೆಯನ್ನು ವಿವರಿಸಿದ ನ್ಯಾಯಾಲಯ “ಆಸ್ಪತ್ರೆ ಅಧಿಕಾರಿಗಳು ಕೆಲವೊಮ್ಮೆ ಪೊಲೀಸರ ಬರುವವರೆಗೂ ಕಾಯುತ್ತಾರೆ. ತಾವು ನೀಡಿದ ಚಿಕಿತ್ಸೆಗೆ ಶುಲ್ಕ ಪಾವತಿಯಾಗುತ್ತದೆಯೇ ಎಂದು ಅವರು ಚಿಂತಿತರಾಗುತ್ತಾರೆ. ಹಾಗಾಗಿಯೇ ಮೋಟಾರು ವಾಹನ ಕಾಯಿದೆಯ ಪರಿಚ್ಛೇದ 162 ರ ಉಪ ಸೆಕ್ಷನ್‌(1) ಭಾರತದ ವಿಮಾ ಕಂಪೆನಿಗಳು ಗೋಲ್ಡನ್‌ ಅವಧಿ ಸೇರಿದಂತೆ ರಸ್ತೆ ಅಪಘಾತಕ್ಕೆ ತುತ್ತಾದವರಿಗೆ ಚಿಕಿತ್ಸೆ ಒದಗಿಸಲು ಅವಕಾಶ ಕಲ್ಪಿಸಬೇಕು ಎನ್ನುವ ಪ್ರಮುಖ ಷರತ್ತಿನೊಂದಿಗೆ ಪ್ರಾರಂಭವಾಗುತ್ತದೆ ಎಂದಿದೆ.

ಕೇಂದ್ರವು ಪ್ರಸ್ತಾವಿತ ಯೋಜನೆಯ ರೂಪುರೇಷೆಗಳ ಕರಡು ಪರಿಕಲ್ಪನೆಯ ಟಿಪ್ಪಣಿಯನ್ನು ಸಲ್ಲಿಸಿದ್ದು ಇದರಲ್ಲಿ ಗರಿಷ್ಠ ₹ 1.5 ಲಕ್ಷ ಚಿಕಿತ್ಸಾ ವೆಚ್ಚ ಮತ್ತು ಕೇವಲ ಏಳು ದಿನಗಳವರೆಗೆ ಚಿಕಿತ್ಸಾ ಅವಧಿಯನ್ನು ಒದಗಿಸಲಾಗಿದೆ.  ಸಮಗ್ರ ಆರೈಕೆಯ ಅಗತ್ಯ ಇರುವುದರಿಂದ ಕೇಂದ್ರದ ಈ ಕ್ರಮ ಅಸಮರ್ಪಕವಾಗಿದೆ ಎಂದು ಪ್ರಕರಣದ ಅರ್ಜಿದಾರರು ವಾದಿಸಿದ್ದರು.