Rana Ayyub and Supreme Court twitter
ಸುದ್ದಿಗಳು

ಪತ್ರಕರ್ತೆ ರಾಣಾ ಪಿಎಂಎಲ್ಎ ಪ್ರಕರಣ: ಜ. 31ರವರೆಗೆ ವಿಚಾರಣೆ ಮುಂದೂಡುವಂತೆ ಉ. ಪ್ರದೇಶ ನ್ಯಾಯಾಲಯಕ್ಕೆ ಸುಪ್ರೀಂ ಆದೇಶ

ಉತ್ತರ ಪ್ರದೇಶ ನ್ಯಾಯಾಲಯ ನೀಡಿರುವ ಸಮನ್ಸ್ ಪ್ರಶ್ನಿಸಿ ರಾಣಾ ಅವರು ಸಲ್ಲಿಸಿರುವ ಅರ್ಜಿಯನ್ನು ತಾನು ವಿಚಾರಣೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

Bar & Bench

ಪತ್ರಕರ್ತೆ ರಾಣಾ ಅಯೂಬ್ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಜನವರಿ 31 ರ ನಂತರದ ಯಾವುದೇ ದಿನಕ್ಕೆ ಮುಂದೂಡುವಂತೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. [ರಾಣಾ ಅಯೂಬ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಗಾಜಿಯಾಬಾದ್‌ ನ್ಯಾಯಾಲಯ ನೀಡಿರುವ ಸಮನ್ಸ್ ಪ್ರಶ್ನಿಸಿ ರಾಣಾ ಅವರು ಸಲ್ಲಿಸಿರುವ ಅರ್ಜಿಯನ್ನು ತಾನು ಜನವರಿ 31 ರಂದು  ವಿಚಾರಣೆ ನಡೆಸಬೇಕಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಈ ಆದೇಶ ನೀಡಿದೆ.

"ನಾವು ಜನವರಿ 31ರಂದು ಪ್ರಕರಣವನ್ನು ವಿಚಾರಣೆ ಮಾಡುತ್ತೇವೆ. ಈ ಮಧ್ಯೆ ಗಾಜಿಯಾಬಾದ್  ಭ್ರಷ್ಟಾಚಾರ ನಿಗ್ರಹ ವಿಶೇಷ ನ್ಯಾಯಾಲಯ ಜನವರಿ 27 ಕ್ಕೆ ನಿಗದಿಪಡಿಸಿದ್ದ ವಿಚಾರಣೆಯನ್ನು ಜನವರಿ 31ರ ನಂತರದ ದಿನಕ್ಕೆ ಮುಂದೂಡಲು ವಿನಂತಿಸಲಾಗಿದೆ. ವಿಚಾರಣೆ ಮುಕ್ತಾಯಗೊಳಿಸಲು ಸಮಯದ ಅಭವಾ ಇರುವುದರಿಂದ ಈ ಆದೇಶ ನೀಡಲಾಗುತ್ತಿದೆಯೇ ವಿನಾ ಪ್ರಕರಣದ ಅರ್ಹತೆ ಕಾರಣಕ್ಕಾಗಿ ಅಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ರಾಣಾ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಗಾಜಿಯಾಬಾದ್‌ ವಿಚಾರಣಾ ನ್ಯಾಯಾಲಯ ಆಕೆಗೆ ಸಮನ್ಸ್‌ ನೀಡಿತ್ತು. ಮುಂಬೈನಲ್ಲಿ ದೂರು ದಾಖಲಿಸಲಾಗಿದ್ದು ಜಾರಿ ನಿರ್ದೇಶನಾಲಯದ ದೆಹಲಿ ಕಚೇರಿ ಈ ಬಗ್ಗೆ ತನಿಖೆ ನಡೆಸುತ್ತಿದೆ. ಹೀಗಾಗಿ ಉತ್ತರ ಪ್ರದೇಶ ನ್ಯಾಯಾಲಯಕ್ಕೆ ಪ್ರಕರಣ ಆಲಿಸುವ ಅಧಿಕಾರ ಇಲ್ಲ ಎಂದು ರಾಣಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ʼಇದನ್ನು ಮೊದಲೇ ಪ್ರಶ್ನಿಸಬೇಕಿತ್ತು. ಪ್ರಕರಣದ ಅರ್ಹತೆ ಮೇಲೆ ಈಗ ವಿಚಾರಣೆ ನಡೆಸಲು ಈಗ ಸಮಯವಿಲ್ಲʼ ಎಂದು ಇಂದಿನ ವಿಚಾರಣೆ ವೇಳೆ ಪೀಠ ಹೇಳಿತು. ರಾಣಾ ಪರವಾಗಿ ಹಿರಿಯ ನ್ಯಾಯವಾದಿ ಆನಂದ್‌ ಗ್ರೋವರ್‌, ಜಾರಿ ನಿರ್ದೇಶನಲಾಯದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ವಾದ ಮಂಡಿಸಿದರು.