ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಭಾರತೀಯ ಕುಸ್ತಿ ಒಕ್ಕೂಟದ ಚುನಾವಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ: ಪಂಜಾಬ್‌ ಹೈಕೋರ್ಟ್‌ ತಡೆಯಾಜ್ಞೆ ತೆರವು

ಆಗಸ್ಟ್ 12 ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಮತ ಚಲಾಯಿಸಲು ಅರ್ಹತೆ ನೀಡಿಲ್ಲ ಎಂದು ಉಲ್ಲೇಖಿಸಿದ್ದ ವಿವಿಧ ರಾಜ್ಯಗಳ ಕುಸ್ತಿ ಸಂಸ್ಥೆಗಳು ಪ್ರಕ್ರಿಯೆ ನಿಲ್ಲಿಸುವಂತೆ ವಿವಿಧ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಿದ್ದವು.

Bar & Bench

ಭಾರತೀಯ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್ಐ) ಕಾರ್ಯಕಾರಿ ಸಮಿತಿಯ ಚುನಾವಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೆರವುಗೊಳಿಸಿದೆ.

ಚುನಾವಣೆ ಫಲಿತಾಂಶ ಕುರಿತಾದ ತನ್ನ ತೀರ್ಪಿಗೆ ಬದ್ಧವಾಗಿರಬೇಕು ಎಂದು ತಿಳಿಸಿ ಚುನಾವಣೆಗೆ ಹೈಕೋರ್ಟ್‌ ಅನುವು ಮಾಡಿಕೊಡಬೇಕಿತ್ತು ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಹೇಳಿದೆ.

"ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಹೈಕೋರ್ಟ್ ಹೇಗೆ ನಿಷ್ಕ್ರಿಯಗೊಳಿಸಿತು ಎಂದು ಅರ್ಥವಾಗುತ್ತಿಲ್ಲ. ಚುನಾವಣೆ ನಡೆಸಲು ಅವಕಾಶ ನೀಡುವುದು ಮತ್ತು ಬಾಕಿ ಇರುವ ರಿಟ್ ಅರ್ಜಿಯ ತೀರ್ಪಿಗೆ ಚುನಾವಣೆ ಒಳಪಟ್ಟಿರಬೇಕು ಎನ್ನುವುದು ಸರಿಯಾದ ಮಾರ್ಗವಾಗಿತ್ತು. ಅದರಂತೆ, ಮಧ್ಯಂತರ ಪರಿಹಾರ ನೀಡಿದ್ದ ಆದೇಶ ಬದಿಗೆ ಸರಿಸಲಾಗಿದೆ" ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ದರಿಂದ, ಹೈಕೋರ್ಟ್ ಮುಂದೆ ಸಲ್ಲಿಸಿದ ಅರ್ಜಿಯ ತೀರ್ಪಿಗೆ ಒಳಪಟ್ಟು ಚುನಾವಣೆ ನಡೆಸಲು ಅದು ಅನುಮತಿಸಿತು.

ಡಬ್ಲ್ಯುಎಫ್ಐ ಚುನಾವಣೆಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಡಬ್ಲ್ಯುಎಫ್ಐನ ದೈನಂದಿನ ವ್ಯವಹಾರಗಳನ್ನು ನಡೆಸುತ್ತಿರುವ ತಾತ್ಕಾಲಿಕ ಸಮಿತಿ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅಕ್ಟೋಬರ್‌ನಲ್ಲಿ ನೋಟಿಸ್ ನೀಡಿತ್ತು .

ಚುನಾವಣೆಗೆ ತಡೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಡಬ್ಲ್ಯುಎಫ್ಐ ಅರ್ಜಿ ಸಲ್ಲಿಸಿದ್ದು ಇದು ಮೂರನೇ ಬಾರಿ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ನಿರಾಕರಿಸಿತ್ತು.

ಆಗಸ್ಟ್ 12ರಂದು ಚುನಾವಣೆ ನಿಗದಿಯಾಗಿತ್ತು. ಆದರೆ ಮತ ಚಲಾಯಿಸಲು ಅರ್ಹತೆ ನೀಡಿಲ್ಲ ಎಂದು ಉಲ್ಲೇಖಿಸಿದ್ದ ವಿವಿಧ ರಾಜ್ಯಗಳ ಕುಸ್ತಿ ಸಂಸ್ಥೆಗಳು ಪ್ರಕ್ರಿಯೆ ನಿಲ್ಲಿಸುವಂತೆ ವಿವಿಧ ಹೈಕೋರ್ಟ್‌ಗಳಿಗೆ ಅರ್ಜಿ ಸಲ್ಲಿಸಿದ್ದವು.

ಜುಲೈನಲ್ಲಿ, ಡಬ್ಲ್ಯುಎಫ್ಐನ ಕಾರ್ಯಕಾರಿ ಸಮಿತಿಯ ಚುನಾವಣೆಗೆ ಗುವಾಹಟಿ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿತ್ತು.