ದೇಶಾದ್ಯಂತ ಕೋವಿಡ್- 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 4ರಂದು ನಡೆಯಬೇಕಿದ್ದ ಕೇಂದ್ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ. ಸೆಪ್ಟೆಂಬರ್ 28ರಂದು ವಿಚಾರಣೆ ನಡೆಯಲಿದೆ.
ಅಕ್ಟೋಬರ್ 4 ರಂದು ಏಳು ಗಂಟೆಗಳ ಸುದೀರ್ಘ ಆಫ್‌ಲೈನ್ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಹೊರಡಿಸಿದ ಪರಿಷ್ಕೃತ ವೇಳಾಪಟ್ಟಿಯನ್ನು ರದ್ದುಗೊಳಿಸುವಂತೆ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಕೋರಲಾಗಿದೆ.
ಸಾಂಕ್ರಾಮಿಕ ರೋಗ ಕಡಿಮೆಯಾಗುವವರೆಗೆ ಎರಡು ಅಥವಾ ಮೂರು ತಿಂಗಳ ಕಾಲ ಪರೀಕ್ಷೆ ಮುಂದೂಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಯುಪಿಎಸ್‌ಸಿ ಪರೀಕ್ಷೆ ನಿರ್ಧಾರದಿಂದಾಗಿ ಸಂವಿಧಾನದ 19 (1) (ಜಿ) ವಿಧಿಯಡಿ ತಮ್ಮ ಹಕ್ಕುಗಳ ಉಲ್ಲಂಘನೆಯಾಗಿದೆ. ಅನಾರೋಗ್ಯ ಅಥವಾ ಸಾವಿನ ಭಯವನ್ನು ಉಲ್ಲೇಖಿಸಿ ಅಕ್ಟೋಬರ್ 4 ರಂದು ಅನೇಕರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿರಬಹುದು. ಯುಪಿಎಸ್‌ಸಿ ನೇಮಕಾತಿ ಪರೀಕ್ಷೆಯಾಗಿದ್ದು ಶೈಕ್ಷಣಿಕ ಪರೀಕ್ಷೆಗಿಂತಲೂ ಸಂಪೂರ್ಣ ಭಿನ್ನವಾಗಿದೆ ಹೀಗಾಗಿ, ಶೈಕ್ಷಣಿಕ ಸಾಲಿನ ವಿಳಂಬ ಅಥವಾ ನಷ್ಟದ ಪ್ರಶ್ನೆಯೇ ಇರುವುದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದ
"ಸುಮಾರು 6 ಲಕ್ಷ ಆಕಾಂಕ್ಷಿಗಳು (ಅರ್ಜಿದಾರರು ಸೇರಿದಂತೆ) ನಾಗರಿಕ ಸೇವೆಗಳ (ಪೂರ್ವಭಾವಿ) ಪರೀಕ್ಷೆಯಲ್ಲಿ ಹಾಜರಾಗುವ ಸಾಧ್ಯತೆಗಳಿದ್ದು ಇದು 7 ಗಂಟೆಗಳ ಅವಧಿಯ ಆಫ್‌ಲೈನ್ ಪರೀಕ್ಷೆಯಾಗಿದೆ. ಭಾರತದಾದ್ಯಂತ 72 ನಗರಗಳಲ್ಲಿನ ಕೆಲವೇ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ನಡುವೆ ಕೋವಿಡ್-19 ಪ್ರಕರಣಗಳು ದೇಶದಲ್ಲಿ ಪ್ರತಿದಿನ 80 ಸಾವಿರದಷ್ಟು ಏರಿಕೆಯಾಗುತ್ತಿವೆ. ಮಾರಣಾಂತಿಕ ಕೋವಿಡ್ 19 ಈಗಾಗಲೇ ಭಾರತದ 40 ಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿದೆ ಮತ್ತು ದಿನಗಳೆದಂತೆ ಪರಿಸ್ಥಿತಿ ಹದಗೆಡುತ್ತಿದೆ."ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾದ ಅರ್ಜಿ
ನಿಗದಿಯಂತೆ ಪರೀಕ್ಷೆ ನಡೆದರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಅನ್ಯಾಯ ಮತ್ತು ತೊಂದರೆ ಅನುಭವಿಸಬೇಕಾಗುತ್ತದೆ. ಪರಿಷ್ಕೃತ ವೇಳಾಪಟ್ಟಿಯಲ್ಲಿ ಇಂತಹ ವರ್ಗಾಧಾರಿತ ತಾರತಮ್ಯ ಇದೆ. ಇದರಿಂದ ಆಕಾಂಕ್ಷಿಗಳ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶದಂತಹ ರಾಜ್ಯಗಳು ಈಗಾಗಲೇ ರಾಜ್ಯಮಟ್ಟದ ನಾಗರಿಕ ಸೇವಾ ಪರೀಕ್ಷೆಗಳನ್ನು ರದ್ದುಗೊಳಿಸಿವೆ ಇಲ್ಲವೇ ಅನಿರ್ದಿಷ್ಟಾವಧಿಗೆ ಮುಂದೂಡಿವೆ ಎಂದು ಅರ್ಜಿಯಲ್ಲಿ ಸಮರ್ಥನೆ ನೀಡಲಾಗಿದೆ.