ದಶಕಗಳ ಹಿಂದೆ ಅಂದರೆ 1995ರಲ್ಲಿ ನಡೆದಿದ್ದ ಎರಡು ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆರ್‌ಜೆಡಿ ನಾಯಕ ಮತ್ತು ಮಾಜಿ ಸಂಸದ ಪ್ರಭುನಾಥ್ ಸಿಂಗ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೀವಾವಧಿ ಶಿಕ್ಷೆಯ ಜೊತೆಗೆ ಹತ್ಯೆಯ ಅಪರಾಧಕ್ಕಾಗಿ ₹20 ಲಕ್ಷ ದಂಡ ಪಾವತಿಸುವಂತೆ ಸಿಂಗ್‌ಗೆ ಆದೇಶಿಸಲಾಗಿದೆ. ಅಲ್ಲದೆ ಸಾಕ್ಷಿಯನ್ನು ಹತ್ಯೆ ಮಾಡಲು ಯತ್ನಿಸಿದ್ದಾಕ್ಕಾಗಿ ₹5 ಲಕ್ಷ ದಂಡದ ಜೊತೆಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಸುಮಾರು 28 ವರ್ಷಗಳ ಹಿಂದೆ ಈ ಘಟನೆ ನಡೆದಿರುವುದರಿಂದ ಮರಣದಂಡನೆ ಸೂಕ್ತವಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅಭಯ್ ಎಸ್ ಓಕಾ ಮತ್ತು ವಿಕ್ರಮ್ ನಾಥ್ ಅವರ ಪೀಠ ಶಿಕ್ಷೆ ವಿಧಿಸುವಾಗ ತಿಳಿಸಿದೆ.
ನ್ಯಾಯಸಮ್ಮತವಾಗಿ ಕಾನೂನು ಕ್ರಮ ಜರುಗಿಸುವ ಬದಲು ಬಿಹಾರ ಸರ್ಕಾರ ಆರೋಪಿ ಸಿಂಗ್‌ಗೆ ಸಹಾಯ ಮಾಡಿದೆ ಎಂದು ನ್ಯಾಯಾಲಯ ಸೆಪ್ಟೆಂಬರ್ 1ರಂದು ಜಾರಿಗೊಳಿಸಿದ ಆದೇಶದಲ್ಲಿ ಬೇಸರ ವ್ಯಕ್ತಪಡಿಸಿದೆ. ಆದ್ದರಿಂದ, ಪ್ರಾಸಿಕ್ಯೂಷನ್ ವೆಚ್ಚ ಮರುಪಾವತಿಸುವಂತೆ ಅದು ಆದೇಶ ನೀಡಲಿಲ್ಲ.
ಕಳೆದ ತಿಂಗಳು ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರಕರಣವನ್ನು ಪೊಲೀಸರು, ಪಾಟ್ನಾ ಹೈಕೋರ್ಟ್ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ (ಪಿ ಪಿ) ನಿರ್ವಹಿಸಿರುವ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಂದು ಅದು ತೀರ್ಪು ಕಾಯ್ದಿರಿಸಿತ್ತು.
ಸುಪ್ರೀಂ ಕೋರ್ಟ್ ಇದೀಗ ಇಬ್ಬರು ಮೃತರ ಕಾನೂನುಬದ್ಧ ವಾರಸುದಾರರಿಗೆ ಮತ್ತು ಕೊಲೆ ಯತ್ನದಲ್ಲಿ ಬದುಕುಳಿದ ಸಾಕ್ಷಿಗೆ ಒಟ್ಟು ₹50 ಲಕ್ಷ ಪರಿಹಾರ ನೀಡುವಂತೆ ಅದು ಸೂಚಿಸಿದೆ.
ಮೃತರಿಬ್ಬರ ಕಾನೂನುಬದ್ಧ ಉತ್ತರಾಧಿಕಾರಿಗಳು ಹಾಗೂ ಕೊಲೆ ಯತ್ನಕ್ಕೊಳಗಾದ ಸಂತ್ರಸ್ತರೊಬ್ಬರಿಗೆ ಒಟ್ಟು ₹ 50 ಲಕ್ಷ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದರಲ್ಲಿ ₹25 ಲಕ್ಷ ಮೊತ್ತವನ್ನು ಸಿಂಗ್ ಪಾವತಿಸಬೇಕು. ಮೃತರಿಬ್ಬರ ಕಾನೂನುಬದ್ಧ ವಾರಸುದಾರರಿಗೆ ತಲಾ ₹10 ಲಕ್ಷ ಮತ್ತು ಕೊಲೆ ಯತ್ನದಲ್ಲಿ ಬದುಕುಳಿದ ಸಾಕ್ಷೀದಾರನಿಗೆ ₹5 ಲಕ್ಷ ನೀಡಬೇಕು ಎಂದಿದೆ.