Supreme Court 
ಸುದ್ದಿಗಳು

ಚುನಾವಣಾ ಆಯುಕ್ತರಾಗಿ ಗೋಯೆಲ್ ನೇಮಕಕ್ಕೆ ʼಭಾರೀ ತರಾತುರಿʼ ಏನಿತ್ತು ಎಂದು ಸುಪ್ರೀಂ ಪ್ರಶ್ನೆ

ಸ್ವಯಂ ನಿವೃತ್ತಿ ಪಡೆದ ಮರುದಿನವೇ ಗೋಯೆಲ್ ಅವರನ್ನು ಸಿಇಸಿಯಾಗಿ ನೇಮಿಸಿದ ವಿಚಾರ ಪ್ರಸ್ತಾಪಿಸಿದ ನ್ಯಾಯಾಲಯ "ಕೇವಲ 24 ಗಂಟೆಗಳಲ್ಲಿ ಅದೆಂಥ ಮೌಲ್ಯಮಾಪನ ನಡೆಯಿತು,? ಎಂದು ಕೂಡ ಪ್ರಶ್ನಿಸಿದೆ.

Bar & Bench

ಭಾರತೀಯ ನಾಗರಿಕ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿದ್ದ ಅರುಣ್‌ ಗೋಯಲ್‌ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಅದೆಂಥಾ ಭಾರೀ ತರಾತುರಿ ಇತ್ತು ಎಂದು ಸುಪ್ರಿಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

24 ಗಂಟೆಗಳ ಅವಧಿಯಲ್ಲಿ ಅಭ್ಯರ್ಥಿಗಳ ಮೌಲ್ಯಮಾಪನ ಮಾಡಿ ಗೋಯೆಲ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸಂಗತಿಯನ್ನು ನ್ಯಾ. ಕೆಎಂ ಜೋಸೆಫ್ ನೇತೃತ್ವದ ಸಂವಿಧಾನ ಪೀಠ ಗಮನಿಸಿತು.

"ಇದನ್ನು [ಅರುಣ್ ಗೋಯೆಲ್ ನೇಮಕಾತಿ ಕಡತವನ್ನು] ನವೆಂಬರ್ 18 ರಂದು ರವಾನಿಸಲಾಯಿತು. ನಂತರ ಹೆಸರುಗಳನ್ನು ಪರಿಶೀಲಿಸಲಾಯಿತು. ನಂತರ ಪ್ರಧಾನಿ ಬರುತ್ತಾರೆ... (ಸಾಮಾನ್ಯವಾಗಿ) ಇಷ್ಟು ತರಾತುರಿಯಲ್ಲಿ ಇದನ್ನು (ನೇಮಕಾತಿ) ಮಾಡಲಾಗುತ್ತದೆಯೇ?" ಎಂದು ನ್ಯಾ. ಜೋಸೆಫ್ ಅವರು ಕೇಂದ್ರ ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್  ಆರ್ ವೆಂಕಟರಮಣಿ ಅವರನ್ನು ಪ್ರಶ್ನಿಸಿದರು.

“ನವೆಂಬರ್ 18 ರಂದು ಒಂದೇ ದಿನದಲ್ಲಿ ನೇಮಕಾತಿ ನಡೆದಿದೆ. ಕಡತ ಅದನ್ನು ಹೇಳುತ್ತದೆ” ಎಂದು ಅವರು ಹೇಳಿದರು.

ಸಂವಿಧಾನದ 342 (2) ನೇ ವಿಧಿಯನ್ನು ಉಲ್ಲಂಘಿಸಿ ನೇಮಕಾತಿ ಮಾಡುವ ಅಧಿಕಾರ ಕಾರ್ಯಾಂಗಕ್ಕೆ ಇದೆ ಎಂಬುದನ್ನು ಆಧರಿಸಿ ಭಾರತ ಚುನಾವಣಾ ಆಯೋಗಕ್ಕೆ (ಇಸಿಐ) ಸದಸ್ಯರನ್ನು ನೇಮಿಸುವ ಈಗಿನ ವ್ಯವಸ್ಥೆ ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು.

ನವೆಂಬರ್ 18ರಂದು ತಮ್ಮ ಹುದ್ದೆಯಿಂದ ನಿವೃತ್ತರಾದ ಗೋಯೆಲ್‌ ಅವರನ್ನು ನ. 19ರಂದು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿತ್ತು. ನವೆಂಬರ್ 21 ರಂದು ಅವರು ಅಧಿಕಾರ ವಹಿಸಿಕೊಂಡಿದ್ದರು.

ಆಯೋಗದ (ಇಸಿಐ) ನೇಮಕಾತಿಗಳಿಗೆ ತಡೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯ ವಿಚಾರಣೆ ಬಾಕಿ ಇರುವಾಗಲೇ ನೇಮಕಾತಿ ನಡೆದ ಹಿನ್ನೆಲೆಯಲ್ಲಿ ಗೋಯೆಲ್‌ ನೇಮಕಾತಿಗೆ ಸಂಬಂಧಿಸಿದ ಕಡತ ಹಾಜರುಪಡಿಸುವಂತೆ ನಿನ್ನೆ (ಗುರುವಾರ)  ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತ್ತು.

ಅದರಂತೆ ಇಂದು ಹಾಜರುಪಡಿಸಲಾದ ಕಡತಗಳನ್ನು ಪರಿಶೀಲಿಸಿದ ನ್ಯಾಯಾಲಯ "ನಿಮ್ಮ ಮೊದಲ ಪುಟದ ಪ್ರಕಾರ, ಈ ಹುದ್ದೆ ಮೇ 15ರಿಂದ ಖಾಲಿಯಾಗಿದೆ. ಮೇ ಇಂದ ನವೆಂಬರ್ ವರೆಗೆ ಸುಮ್ಮನಿದ್ದ ಸರ್ಕಾರ ನವೆಂಬರ್‌ನಲ್ಲಿ ಎಲ್ಲವನ್ನೂ ದಿಢೀರನೆ ಮಾಡುವದಕ್ಕೆ ಏನು ಕಾರಣ. ಮನಸ್ಸಿದ್ದಲ್ಲಿ ಮಾರ್ಗ ಎಂಬುದು ನಮಗೆ ತಿಳಿದಿದೆ" ಎಂದು ನ್ಯಾ. ಅಜಯ್ ರಾಸ್ತೋಗಿ ಕುಟುಕಿದರು.

ಅದೇ ದಿನ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೂಡ ಅವರು ಹೇಳಿದರು. ‘ಕೇವಲ 24 ಗಂಟೆಗಳಲ್ಲಿ (ಚುನಾವಣಾ ಆಯುಕ್ತ ಅಭ್ಯರ್ಥಿಗಳ) ಅದೆಂಥಾ ಮೌಲ್ಯಮಾಪನ ನಡೆಯಿತು’ ಎಂದು ಅವರು ಕೇಳಿದರು.  

ಆಗ ಅಟಾರ್ನಿ ಜನರಲ್‌ "ನಾನು ಒಂದು ವಿಚಾರ ಸ್ಪಷ್ಟಪಡಿಸಲು ಬಯಸುತ್ತೇನೆ ಪ್ರಕ್ರಿಯೆಗಳನ್ನು ಅನುಸರಿಸಿಯೇ ಹೆಸರು ಪರಿಗಣಿಸಲಾಗಿದೆ. 12 ಅಥವಾ 24 ಗಂಟೆಗಳಲ್ಲಿ ಸಾರ್ವಜನಿಕ ಹುದ್ದೆಗಳಿಗೆ ಎಷ್ಟು ನೇಮಕಾತಿ ನಡೆದಿವೆ? ಇಂತಹ ಅನೇಕ ಪ್ರಶ್ನೆಗಳು ಏಳುತ್ತವೆ. ಅಂತಹಾ ಎಲ್ಲಾ ಉದಾಹರಣೆಗಳನ್ನು ನಾವು ಗಮನಿಸಲಾಗುತ್ತದೆಯೇ...” ಎಂದರು. ಆಗ ನ್ಯಾಯಾಲಯ. ಸೂಚಿತ ಕಾರ್ಯವಿಧಾನವನ್ನು ಸರಿಯಾಗಿ ಪಾಲಿಸಲಾಗಿದೆಯೇ ಎಂಬುದನ್ನು ತಾನು ತಿಳಿಯಲು ಬಯಸುತ್ತಿರುವುದಾಗಿ ವಿವರಿಸಿತು.  

"ನಾವು ಕೇವಲ (ಸರ್ಕಾರ ಕೈಗೊಂಡ) ಪ್ರಕ್ರಿಯೆಯನ್ನು ಅರಿಯಲು ಬಯಸುತ್ತೇವೆ. ನೀವು ನಾಣ್ಯವನ್ನು ಎಸೆದರೆ ಮತ್ತು ಎರಡೂ ಬದಿಗಳಲ್ಲಿ ನೀವೇ ಗೆಲ್ಲುತ್ತೀರಿ. ಇಲ್ಲಿ ನಾವು ಗಮನಿಸಿದರೆ ಆ ವ್ಯಕ್ತಿಗೆ (ಗೋಯೆಲ್‌ಗೇ) ಅರ್ಹತೆಗಳಿವೆ, ಆದರೆ ಅವರು (ಸರ್ಕಾರಕ್ಕೆ) ವಿಧೇಯರಾಗಿದ್ದರೆ ಏನಾಗುತ್ತದೆ?" ಎಂದು ನ್ಯಾ. ಜೋಸೆಫ್ ಪ್ರಶ್ನಿಸಿದರು.

“ಅವರು ವಿಧೇಯ ಎಂದು ಕೆಲವರು ಹೇಳಬಹುದು. ಇಲ್ಲ ಎಂದು ಬೇರೆಯವರು ಹೇಳಬಹುದು. ನ್ಯಾಯಾಲಯ ಯಾವುದನ್ನು ಪರಿಗಣಿಸುತ್ತದೆ” ಎಂದು ಇದಕ್ಕೆ ಅಟಾರ್ನಿ ಜನರಲ್‌ ಉತ್ತರಿಸಿದರು.

ನಾಲ್ವರನ್ನು ಬಿಟ್ಟು ಅವರನ್ನು ಹೇಗೆ ಆಯ್ಕೆ ಮಾಡಲಾಗಿದೆ ಎಂಬುದನ್ನು ನಮಗೆ ತಿಳಿಸಿ ಎಂದು ನ್ಯಾ. ಜೋಸೆಫ್‌ ಪಟ್ಟು ಹಿಡಿದರು. ಈ ಹಂತದಲ್ಲಿ  “ಸ್ವಯಂ ನಿವೃತ್ತಿ ಇತ್ಯಾದಿಗಳೆಲ್ಲಾ ತುಂಬಾ… ಇದೆಲ್ಲಾ ಸಾಮಾನ್ಯವೆನಿಸುತ್ತದೆಯೇ? ಸಾಮಾನ್ಯವಾಗಿ ಈ ರೀತಿ ನಡೆಯುತ್ತದೆಯೇ?” ಎಂದು ನ್ಯಾ. ಬೋಸ್‌ ತರಾಟೆಗೆ ತೆಗೆದುಕೊಂಡರು.

ಆಗ ಅಟಾರ್ನಿ ಜನರಲ್‌ "ಅವರು (ಗೋಯೆಲ್‌) ಹೇಗಿದ್ದರೂ ಡಿಸೆಂಬರ್ 31ರಂದು ನಿವೃತ್ತರಾಗಲಿದ್ದಾರೆ" ಎಂದು ಉತ್ತರಿಸಿದರು. ಸುದೀರ್ಘವಿಚಾರಣೆ ಬಳಿಕ ನ್ಯಾಯಾಲಯ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತು.