ಅಪ್ರಾಪ್ತ ಬಾಲಕಿಯ ಮೇಲೆ 2013ರಲ್ಲಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ [ಆಶಾರಾಂ ಅಲಿಯಾಸ್ ಆಶುಮಲ್ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].
ಶಿಕ್ಷೆ ಪ್ರಶ್ನಿಸಿದ್ದ ತನ್ನ ಮೇಲ್ಮನವಿಯನ್ನು ವಿಚಾರಣಾ ನ್ಯಾಯಾಲಯ ತ್ವರಿತವಾಗಿ ವಿಚಾರಣೆ ನಡೆಸದಿದ್ದರೆ ಶಿಕ್ಷೆ ಅಮಾನತುಗೊಳಿಸುವಂತೆ ರಾಜಸ್ಥಾನ ಹೈಕೋರ್ಟ್‌ನಲ್ಲಿ ಅಸಾರಾಂ ಹೊಸ ಮನವಿ ಸಲ್ಲಿಸಬಹುದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ತಿಳಿಸಿದೆ.
ಸಂಕ್ಷಿಪ್ತ ವಿಚಾರಣೆಯ ನಂತರ, ಅಸಾರಾಂ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ ಕಾಮತ್ ಅವರು ಅರ್ಜಿಯನ್ನು ಹಿಂಪಡೆಯಲು ಸ್ವಾತಂತ್ರ್ಯ ಕೋರಿದರು, ಇದಕ್ಕೆ ಪೀಠವು ಅನುಮತಿಸಿತು.
ರಾಜಸ್ಥಾನ ಹೈಕೋರ್ಟ್ ಅಸಾರಾಂಗೆ ಜುಲೈ 2022ರಲ್ಲಿ ಜಾಮೀನು ನಿರಾಕರಿಸಿತ್ತು. ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಮಾಡಲಾಗಿದ್ದ ಮನವಿಯನ್ನೂ ಅದು ತಿರಸ್ಕರಿಸಿತ್ತು. ಆದೇಶ ಪ್ರಶ್ನಿಸಿ ಆತ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಅಸಾರಾಂ ಅವರನ್ನು 2013ರಲ್ಲಿ ಬಂಧಿಸಲಾಗಿತ್ತು. 2013ರ ಆಗಸ್ಟ್‌ನಲ್ಲಿ ಜೋಧ್‌ಪುರದ ಮನೈ ಗ್ರಾಮದಲ್ಲಿ ಈ ಕೃತ್ಯ ನಡೆದಿತ್ತು ಎನ್ನಲಾಗಿದೆ. ಈ ಬಂಧನದ ಬಳಿಕ ಸೂರತ್‌ನ ಇಬ್ಬರು ಮಹಿಳೆಯರು 2002 ಮತ್ತು 2005ರ ನಡುವೆ ಅಸಾರಾಂ ಮತ್ತು ಅವರ ಮಗ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಿಸಿದ್ದರು. ಆ ಪ್ರಕರಣಗಳಲ್ಲಿಯೂ ಅಸಾರಾಂ ವಿಚಾರಣೆ ಎದುರಿಸುತ್ತಿದ್ದಾರೆ.