ಸುದ್ದಿಗಳು

ನರಸಿಂಹಾನಂದರ ಧರ್ಮ ಸಂಸದ್ ಪ್ರಶ್ನಿಸಿದ್ದ ಅರ್ಜಿ ಆಲಿಸಲು ಸುಪ್ರೀಂ ನಿರಾಕರಣೆ, ಹೈಕೋರ್ಟ್ ಮೆಟ್ಟಿಲೇರಲು ಅವಕಾಶ

ಕಾರ್ಯಕ್ರಮದ ಮೇಲೆ ನಿಗಾ ಇರಿಸಬೇಕು ಮತ್ತು ಅದರ ವಿಡಿಯೋ ದಾಖಲಿಸಿಕೊಳ್ಳಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.

Bar & Bench

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ವಾರ ಯತಿ ನರಸಿಂಹಾನಂದ ಮತ್ತಿತರರು ಆಯೋಜಿಸಲು ಉದ್ದೇಶಿಸಿರುವ ಧರ್ಮ ಸಂಸದ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಗುರುವಾರ ತಿರಸ್ಕರಿಸಿದೆ.

ಮಾಜಿ ಅಧಿಕಾರಿಗಳು ಸೇರಿದಂತೆ ನಾಗರಿಕ ಸಮಾಜದ ಸದಸ್ಯರ ಗುಂಪೊಂದು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಹೈಕೋರ್ಟ್‌ ಮೆಟ್ಟಿಲೇರಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದೆ ಎಂದಿದೆ.

“ಇಲ್ಲಿ ಅನೇಕ ಗಂಭೀರ ಪ್ರಕರಣಗಳಿದ್ದು ಅರ್ಜಿಯನ್ನು ಪುರಸ್ಕರಿಸಿದರೆ ಅಂತಹ ಅರ್ಜಿಗಳ ಮಹಾಪೂರವೇ ಹರಿಯುತ್ತದೆ. ನೀವು ಹೈಕೋರ್ಟ್‌ಗೆ ತೆರಳಿ. ಅರ್ಜಿಯನ್ನು ಪುರಸ್ಕರಿಸಲಾಗದು” ಎಂದು ನ್ಯಾಯಾಲಯ ವಿವರಿಸಿತು.

 ಆದರೆ ಇದೇ ವೇಳೆ ಉತ್ತರ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಪೀಠ ಕಾರ್ಯಕ್ರಮದ ಮೇಲೆ ನಿಗಾ ಇರಿಸಬೇಕು ಮತ್ತು ಅದನ್ನು ವಿಡಿಯೋದಲ್ಲಿ ದಾಖಲಿಸಿಕೊಳ್ಳಬೇಕು. ಅರ್ಜಿ ತಿರಸ್ಕರಿಸಿದ್ದೇವೆ ಎಂದ ಮಾತ್ರಕ್ಕೆ ಸಮಸ್ಯೆಯನ್ನು ಕೈಬಿಟ್ಟಿದ್ದೇವೆ ಎಂದರ್ಥವಲ್ಲ ಎಂಬುದಾಗಿ ತಿಳಿಸಿತು.  

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ದ್ವೇಷಪೂರಿತ ಭಾಷಣ ಮಾಡಬಾರದು ಎಂಬ ಷರತ್ತಿನ ಮೇಲೆ ನರಸಿಂಹಾನಂದ ಅವರಿಗೆ ಜಾಮೀನು ನೀಡಲಾಗಿದೆ ಎಂದು ತಿಳಿಸಿದರು. ಆಗ ನ್ಯಾಯಾಲಯ ನೀವು ಸುಪ್ರೀಂ ಕೋರ್ಟನ್ನು ಹೇಗೆ ಸಂಪರ್ಕಿಸಲು ಸಾಧ್ಯ? ಜಾಮೀನು ರದ್ದುಗೊಳಿಸುವಂತೆ ಅರ್ಜಿದಾರರು ಹೈಕೋರ್ಟ್‌ಗೆ ಮೊರೆ ಹೋಗಬೇಕು. ಕಾನೂನು ಸುವ್ಯವಸ್ಥೆ ಪಾಲನೆಗೆ ತಾನು ನೀಡಿರುವ ಆದೇಶವನ್ನು ಎಲ್ಲಾ ಅಧಿಕಾರಿಗಳು ಪಾಲಿಸಬೇಕು ಎಂದು ತಿಳಿಸಿತು.

ದ್ವೇಷ ಭಾಷಣ ಪ್ರಕರಣಗಳಲ್ಲಿ ಅಪರಾಧಿಗಳ ಧರ್ಮ ಲೆಕ್ಕಿಸದೆ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳುವಂತೆ 2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂದು ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಮುಸ್ಲಿಮರ ವಿರುದ್ಧ ನರಸಿಂಹಾನಂದ ಅವರು ಪದೇ ಪದೇ ದ್ವೇಷ ಭಾಷಣ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಅರುಣಾ ರಾಯ್, ಅಶೋಕ್ ಕುಮಾರ್ ಶರ್ಮಾ, ದೇಬ್ ಮುಖರ್ಜಿ, ನವರೇಖಾ ಶರ್ಮಾ, ಸೈಯದಾ ಹಮೀದ್, ವಿಜಯನ್ ಎಂ ಜೆ ಅವರಂತಹ ನಿವೃತ್ತ ಅಧಿಕಾರಿಗಳು ಮತ್ತು ಸಾಮಾಜಿಕ ಹೋರಾಟಗಾರರು ಅರ್ಜಿ ಸಲ್ಲಿಸಿದ್ದರು.