Justice Yashwant Varma 
ಸುದ್ದಿಗಳು

ಹಣದ ರಾಶಿ ಪತ್ತೆ ಪ್ರಕರಣ: ನ್ಯಾ. ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಲು ಸುಪ್ರೀಂ ಕೋರ್ಟ್ ನಕಾರ

ಸಿಜೆಐ ರಚಿಸಿದ ಆಂತರಿಕ ಸಮಿತಿ ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದೆ. ತಪ್ಪಾಗಿದೆ ಎಂದು ಸಮಿತಿ ತೀರ್ಮಾನಿಸಿದರೆ, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿತು.

Bar & Bench

ತಮ್ಮ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ವಿರುದ್ಧ  ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಚಿಸಿದ ಆಂತರಿಕ ಸಮಿತಿ ಈಗಾಗಲೇ ಪ್ರಕರಣದ ತನಿಖೆ ನಡೆಸುತ್ತಿದೆ. ತಪ್ಪಾಗಿದೆ ಎಂದು ಸಮಿತಿ ತೀರ್ಮಾನಿಸಿದರೆ, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಪೀಠವು ವಕೀಲರಾದ ಮ್ಯಾಥ್ಯೂಸ್ ಜೆ ನೆಡುಂಪರ ಮತ್ತು ಹೇಮಾಲಿ ಸುರೇಶ್ ಕುರ್ನೆ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ನಿರಾಕರಿಸಿತು.

"ಆಂತರಿಕ ವಿಚಾರಣೆ ನಡೆಯುತ್ತಿದೆ. ವರದಿಯಲ್ಲಿ ಏನಾದರೂ ತಪ್ಪಾಗಿದ್ದರೆ, ಎಫ್‌ಐಆರ್ ದಾಖಲಿಸಬಹುದು ಅಥವಾ ಪ್ರಕರಣವನ್ನು ಸಂಸತ್ತಿಗೆ ಉಲ್ಲೇಖಿಸಬಹುದು. ಇಂದು ಅದನ್ನು ಪರಿಣಿಸಲು ಸಮಯವಲ್ಲ" ಎಂದು ಪೀಠ ಹೇಳಿದೆ.

ಆದರೆ ಪೋಕ್ಸೊ ಪ್ರಕರಣವೊಂದರಲ್ಲಿ ನಿವೃತ್ತ ನ್ಯಾಯಾಧೀಶರೊಬ್ಬರ ವಿರುದ್ಧ ಆರೋಪ ಕೇಳಿ ಬಂದಾಗ ಪೊಲೀಸರು ಮಾತ್ರವೇ ತನಿಖೆ ನಡೆಸಬಹುದು ನ್ಯಾಯಾಲಯಗಳಲ್ಲ ಎನ್ನಲಾಗಿತ್ತು. ಏಕೆ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಜನ ಕೇಳುತ್ತಿದ್ದಾರೆ ಎಂದು ವಕೀಲ ನೆಡುಂಪರ ವಾದಿಸಿದರು.

ಆದರೆ ಈ ವಾದ ಒಪ್ಪದ ನ್ಯಾಯಾಲಯ ಆಂತರಿಕ ತನಿಖಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ನೀಡಿರುವ ಎರಡು ತೀರ್ಪುಗಳನ್ನೂ ಓದುವಂತೆ ಸಲಹೆ ನೀಡಿತು. ಆದರೆ ಈ ಹಂತದಲ್ಲಿ ನಾವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಎಲ್ಲಾ ಆಯ್ಕೆ ಮುಕ್ತವಾಗಿವೆ ಎಂದು ನುಡಿಯಿತು.

ಜನಸಾಮಾನ್ಯರಿಗೆ ಇವೆಲ್ಲಾ ಅರ್ಥವಾಗುವುದಿಲ್ಲ ಎಂದು ನೆಡುಂಪರ ವಾದಿಸಿದಾಗ ನ್ಯಾಯಾಲಯ ಸುಪ್ರೀಂ ಕೋರ್ಟ್‌ ತೀರ್ಪುಗಳ ಬಗ್ಗೆ ಜನಸಾಮಾನ್ಯರಲ್ಲಿ ವಕೀಲರು ಅರಿವು ಮೂಡಿಸಬೇಕು” ಎಂದು ಕಿವಿಮಾತು ಹೇಳಿತು.

 ಆಂತರಿಕ ಸಮಿತಿ ಈಗಾಗಲೇ ತನಿಖೆ ನಡೆಸುತ್ತಿರುವುದಿಂದ ತಾನು ಅರ್ಜಿ ಪುರಸ್ಕರಿಸುವುದಿಲ್ಲ ಎಂದು ಪೀಠ ತಿಳಿಸಿತು.