ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಪಿಯಾಗಿರುವ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣ ರದ್ದತಿ ಕೋರಿ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಮತ್ತು ಅದರ ಉಪ ಪ್ರಧಾನ ವ್ಯವಸ್ಥಾಪಕ (ಅನುಸರಣೆ) ಪ್ರವೀಣ್ ಜಾನ್ ಸಿಕ್ವೇರಾ ಸಲ್ಲಿಸಿದ್ದ ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ [ಜೆಎಸ್ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಮತ್ತು ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ನಡುವಣ ಪ್ರಕರಣ].
ರೆಡ್ಡಿ ಅವರ ಓಬಳಾಪುರಂ ಗಣಿಗಾರಿಕೆ ಕಂಪನಿ ಭಾಗಿಯಾಗಿರುವ ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ತನಿಖೆ ಆರಂಭಿಸಿತ್ತು.
ಇ ಡಿ ದೂರು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ (ಪಿಎಂಎಲ್‌ಎ) ರೂಪುಗೊಂಡಿರುವ ವಿಶೇಷ ನ್ಯಾಯಾಲಯ ಪ್ರಕಟಿಸಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ಕರ್ನಾಟಕ ಹೈಕೋರ್ಟ್ ಜೂನ್ 13, 2022ರಲ್ಲಿ ಹೊರಡಿಸಿದ್ದ ಆದೇಶವನ್ನು ಈ ಮೂಲಕ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಎತ್ತಿಹಿಡಿದಿದೆ.
ಆಸ್ತಿ ಮುಟ್ಟುಗೋಲು ಮತ್ತು "ಅಪರಾಧದ ಗಳಿಕೆ"ಗೆ ಸಂಬಂಧಿಸಿದ ವಿಚಾರವನ್ನು ಮೊದಲು ಪಿಎಂಎಲ್ಎ ನ್ಯಾಯಾಲಯ ನಿರ್ಣಯಿಸಬೇಕು ಎಂದು ಪೀಠ ಹೇಳಿದೆ.
ಕಾನೂನು ಪ್ರಕ್ರಿಯೆ ತನ್ನ ಸಹಜ ಹಾದಿಯಲ್ಲಿ ಸಾಗುವಂತೆ ಬಿಡುವುದು ಸಮರ್ಪಕ ಮಾರ್ಗವಾಗಿದೆ. ಈ ಹಂತದಲ್ಲಿ ತಾನು ಮಧ್ಯಪ್ರವೇಶ ಮಾಡಿದರೆ ಪಿಎಂಎಲ್‌ಎ ನ್ಯಾಯಾಲಯದ ವ್ಯಾಪ್ತಿಯ ಪ್ರಕರಣವನ್ನು ಪೂರ್ವಗ್ರಹದಿಂದ ನಿರ್ಣಯಿಸಿದಂತಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.
ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ಜೊತೆ 1.5 ದಶಲಕ್ಷ ಟನ್ ಕಬ್ಬಿಣದ ಅದಿರನ್ನು ಪೂರೈಸುವ ಒಪ್ಪಂದವನ್ನು ನವೆಂಬರ್ 2009 ರಲ್ಲಿ, ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪೆನಿ ಮಾಡಿಕೊಂಡಿತ್ತು.
ಜೆಎಸ್‌ಡಬ್ಲ್ಯೂ ₹130 ಕೋಟಿ ಮುಂಗಡ ಹಣ ಪಾವತಿಸಿತ್ತು. ಆದರೆ ಒಎಂಸಿ ಅದಿರು ಪೂರೈಸದ ಹಿನ್ನೆಲೆಯಲ್ಲಿ ಜೆಎಸ್‌ಡಬ್ಲ್ಯೂ ಮಧ್ಯಸ್ಥಿಕೆ ಕೇಂದ್ರದ ಮೊರೆ ಹೋಯಿತು. 2014ರಲ್ಲಿ ₹35 ಕೋಟಿ ಮರಳಿಸುವಂತೆ ಮಧ್ಯಸ್ಥಿಕೆ ಕೇಂದ್ರ ಆದೇಶಿಸಿತು.
2011ರಲ್ಲಿ ಸಿಬಿಐ ಜಾನಾರ್ಧನ ರೆಡ್ಡಿ, ಅವರ ಪತ್ನಿ ಮುಂತಾದವರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಿಸಿತ್ತು. ಮೊದಲಿಗೆ ಜೆಎಸ್‌ಡಬ್ಲ್ಯೂವನ್ನೂ ಆರೋಪಿಯಾಗಿ ಸೇರಿಸಲಾಗಿತ್ತು, ಆದರೆ 2013ರಲ್ಲಿ ಸಲ್ಲಿಸಲಾದ ಪೂರಕ ಆರೋಪಪಟ್ಟಿಯಲ್ಲಿ ಅದರ ಹೆಸರನ್ನು ಕೈಬಿಟ್ಟಿತು.
ಇದೆಲ್ಲದರ ನಡುವೆ ಇ ಡಿ 2012ರ ಸೆಪ್ಟೆಂಬರ್‌ನಲ್ಲಿ ಇಸಿಐಆರ್ ದಾಖಲಿಸಿಕೊಂಡು ಜೆಎಸ್‌ಡಬ್ಲೂ, ಒಎಂಸಿಯ ಅಂಗ ಸಂಸ್ಥೆಯಾದ ಎಎಂಸಿಗೆ ₹33.8 ಕೋಟಿ ಪಾವತಿಸಿಲ್ಲ. ಈ ಮೊತ್ತ ಅಪರಾಧ ಗಳಿಕೆ ಎಂದು ಪರಿಗಣಿಸಿ 2015–16ರಲ್ಲಿ ಜೆಎಸ್‌ಡಬ್ಲ್ಯೂ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತು.
ಕರ್ನಾಟಕ ಹೈಕೋರ್ಟ್‌ನಲ್ಲಿ ಜೆಎಸ್‌ಡಬ್ಲ್ಯೂ ಮುಟ್ಟುಗೋಲು ಆದೇಶವನ್ನು ಪ್ರಶ್ನಿಸಿತಾದರೂ ಮೊದಲು ಪಿಎಂಎಲ್‌ಎ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತು.
ವಿಚಾರಣೆ ನಡೆದು ಪ್ರಕರಣ ಮತ್ತೆ ಹೈಕೋರ್ಟ್ ಅಂಗಳಕ್ಕೆ ತಲುಪಿದಾಗ ಹಣ ವರ್ಗಾವಣೆ ನಡೆದಿರುವುದು ಸಾಬೀತಾಗಿದೆ ಎಂದು ಹೈಕೋರ್ಟ್ ತೀರ್ಪು ನೀಡಿತು. ನಂತರ ಇಡಿ ತನಿಖೆ ಪ್ರಶ್ನಿಸಿ ಜೆಎಸ್‌ಡಬ್ಲ್ಯೂ ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಿತು.
ಇಸಿಐಆರ್ ಅಥವಾ ಸಿಬಿಐ ಅಂತಿಮ ಆರೋಪಪಟ್ಟಿಯಲ್ಲಿ ಜೆಎಸ್‌ಡಬ್ಲ್ಯೂ ಕಂಪೆನಿಯನ್ನು ಆರೋಪಿಯಾಗಿ ಹೆಸರಿಸಲಾಗಿಲ್ಲವಾದರೂ, ಇಡಿಯ ಪ್ರಕರಣ ಮುಟ್ಟುಗೋಲು ಆದೇಶ ಉಲ್ಲಂಘಿಸಿ ಜಪ್ತಿ ಮಾಡಿದ ಖಾತೆಗಳಿಂದ ಹಣ ಹಿಂಪಡೆದಿರುವುದಕ್ಕೆ ಸಂಬಂಧಿಸಿದೇ ಎಂದು ನ್ಯಾಯಾಲಯ ತಿಳಿಸಿದೆ.
ಸಿಬಿಐ ತನಿಖೆಯ ಮೂಲ ಪ್ರಕರಣ ರದ್ದಾಗಿರುವುದರಿಂದ ಪಿಎಂಎಲ್‌ಎ ತನಿಖೆಯೂ ರದ್ದಾಗಬೇಕು ಎಂಬ ಜೆಎಸ್‌ಡಬ್ಲ್ಯೂ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ₹33.8 ಕೋಟಿ ಮೊತ್ತ ಅಪರಾಧದ ಗಳಿಕೆಯೇ ಎಂಬುದೇ ಇ ಡಿ ಪ್ರಕರಣದ ಪ್ರಮುಖ ವಿಚಾರವಾಗಿದೆ ಎಂದಿತು.
ಜೆಎಸ್‌ಡಬ್ಲ್ಯೂ ಕಂಪೆನಿಯ ಇಡೀ ಬ್ಯಾಂಕ್ ಖಾತೆ ವ್ಯವಹಾರವನ್ನು ಇ ಡಿ ತನಿಖೆ ನಡೆಸುತ್ತಿಲ್ಲ ಬದಲಿಗೆ ಆ ನಿರ್ದಿಷ್ಟ ಮೊತ್ತದ ಬಗ್ಗೆಯಷ್ಟೇ ವಿಚಾರಣೆ ನಡೆಸುತ್ತಿದೆ ಎಂದು ಅದು ಹೇಳಿತು. ಅಂತೆಯೇ ಪಿಎಂಎಲ್‌ಎ ನ್ಯಾಯಾಲಯದಲ್ಲಿ ಜೆಎಸ್‌ಡಬ್ಲ್ಯೂ ತನ್ನ ವಾದವನ್ನು ಮುಂದುವರೆಸಬಹುದು. ತಾನು ಈಗ ನೀಡಿರುವ ಅವಲೋಕನದಿಂದ ಪಿಎಂಎಲ್‌ಎ ನ್ಯಾಯಾಲಯ ಪ್ರಭಾವಿತವಾಗದೇ ವಿಚಾರಣೆ ನಡೆಸಬೇಕು ಎಂದು ಅದು ಹೇಳಿತು.
ಜೆಎಸ್‌ಡಬ್ಲ್ಯೂ ಕಂಪೆನಿಯ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಜೈದೀಪ್ ಗುಪ್ತಾ ಮತ್ತವರ ತಂಡ ವಾದ ಮಂಡಿಸಿತು.
[ಆದೇಶದ ಪ್ರತಿ]