ಅಕ್ರಮ ಗಣಿಗಾರಿಕೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವ ಹಾಗೂ ಗಂಗಾವತಿಯ ಶಾಸಕ ಜಿ ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಜಿ ಲಕ್ಷ್ಮಿ ಅರುಣಾ ಅವರಿಗೆ ಸೇರಿದ ₹65.05 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಅನುಮತಿಸಿದೆ [ಸಿಬಿಐ ವರ್ಸಸ್ ಜಿ ಜನಾರ್ದನ ರೆಡ್ಡಿ ಮತ್ತು ಇತರರು].
ಕ್ರಿಮಿನಲ್ ಕಾನೂನು (ತಿದ್ದುಪಡಿ) ಸುಗ್ರೀವಾಜ್ಞೆ ಸೆಕ್ಷನ್ 3 ಜೊತೆಗೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 5(6)ರ ಅಡಿ ಬೆಂಗಳೂರಿನ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಜಯಂತ ಕುಮಾರ್ ಅವರು ಭಾಗಶಃ ಪುರಸ್ಕರಿಸಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದ ವಿಶೇಷ ಪ್ರಕರಣದ ಭಾಗವಾಗಿ ಆಸ್ತಿ ಜಪ್ತಿ ಕೋರಿ ಸಿಬಿಐ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಪ್ರತ್ಯೇಕಿಸಿ ವಿಚಾರಣೆ ನಡೆಸಿ, ನ್ಯಾಯಾಲಯ ಸೋಮವಾರ ಆದೇಶ ಮಾಡಿದೆ.
“ಜನಾರ್ದನ ರೆಡ್ಡಿ ಮತ್ತು ಆಕ್ಷೇಪಣಾಕಾರರಾದ ಅವರ ಪತ್ನಿ ಲಕ್ಷ್ಮಿ ಅರುಣಾ ಅವರಿಗೆ ಸೇರಿದ ಆಸ್ತಿಗಳನ್ನು ಜಪ್ತಿ ಮಾಡಬಹುದಾಗಿದೆ. ಪ್ರಧಾನ ಪ್ರಕರಣದಲ್ಲಿ ಪ್ರಕಟವಾಗುವ ತೀರ್ಪು ಆಧರಿಸಿ, ಜಪ್ತಿ ಮಾಡಲಾದ ಆಸ್ತಿ ವಿಲೇವಾರಿ ಮಾಡಬಹುದು” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ಇದರಲ್ಲಿ ಜನಾರ್ದನ ರೆಡ್ಡಿ ಅವರಿಗೆ ಸೇರಿದ 6 ಆಸ್ತಿಗಳ ಪೈಕಿ 5 ಅನ್ನು, ಲಕ್ಷ್ಮಿ ಅರುಣಾ ಅವರಿಗೆ ಸೇರಿದ 118 ಆಸ್ತಿಗಳ ಪೈಕಿ 77 ಆಸ್ತಿಗಳನ್ನು ಜಪ್ತಿ ಮಾಡಲು ವಿಶೇಷ ನ್ಯಾಯಾಲಯ ಅನುಮತಿಸಿದ್ದು, ಪತಿ-ಪತ್ನಿಯರ ಒಟ್ಟು 82 ಆಸ್ತಿಗಳನ್ನು ಜಪ್ತಿ ಮಾಡಲು ಸಿಬಿಐಗೆ ಅನುಮತಿಸಲಾಗಿದೆ. ಖಾಲಿ ನಿವೇಶನ, ಫ್ಲ್ಯಾಟ್, ವಾಣಿಜ್ಯ ಸಮುಚ್ಚಯ, ಜಮೀನುಗಳು ಜಪ್ತಿಯ ಭಾಗವಾಗಿವೆ. ಪ್ರಾಸಿಕ್ಯೂಷನ್ ಹಿತಾಸಕ್ತಿಯನ್ನು ಕಾಯಬೇಕಿರುವುದರಿಂದ ಆಸ್ತಿಗಳನ್ನು ಜಪ್ತಿ ಮಾಡಬೇಕಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
“ಲಕ್ಷ್ಮಿ ಅರುಣಾ ಅವರು ಸಲ್ಲಿಸಿರುವ ಆದಾಯ ತೆರಿಗೆ ಪಾವತಿಯನ್ನು ಸಿಬಿಐ, ನ್ಯಾಯಾಲಯದ ಮುಂದೆ ಇಟ್ಟಿದೆ. ಇಲ್ಲಿ ಒಂದು ಕಡೆ ಲಕ್ಷ್ಮಿ ಅರುಣಾ ಅವರು ₹18 ಕೋಟಿ ವೇತನವನ್ನು ಮೈನಿಂಗ್ ಕಂಪೆನಿಗಳಿಂದ ಪಡೆದಿರುವುದಾಗಿ ಘೋಷಿಸಿದ್ದಾರೆ. ಇನ್ನೊಂದ ಕಡೆ ₹16.5 ಕೋಟಿ ವೇತನ ಪಡೆದಿರುವುದಾಗಿ ಐಟಿ ದಾಖಲೆಯಲ್ಲಿ ಘೋಷಿಸಿದ್ದಾರೆ. ಆದರೆ, ₹18 ಕೋಟಿ ವೇತನ ಪಡೆದಿರುವುದಕ್ಕೆ ಪೂರಕವಾಗಿ ಲಕ್ಷ್ಮಿ ಅರುಣಾ ಅವರು ಯಾವುದೇ ದಾಖಲೆ ಸಲ್ಲಿಸಿಲ್ಲ. ಬ್ಯಾಂಕ್ ದಾಖಲೆ ಸಲ್ಲಿಸಿದ್ದು, ಅದರಲ್ಲಿ ಎಲ್ಲಿಯೂ ಸ್ವತಂತ್ರವಾಗಿ ಆದಾಯ ಹೊಂದಿರುವುದು ಕಂಡಿಲ್ಲ. ರೆಡ್ಡಿ ಆರಂಭಿಸಿರುವ ಮೈನಿಂಗ್ ಕಂಪೆನಿಗಳಲ್ಲಿ ರೆಡ್ಡಿ ಮತ್ತು ಅವರ ಪತ್ನಿ ನಿರ್ದೇಶಕರು ಮತ್ತು ಪಾಲುದಾರರಾಗಿದ್ದು, ಮೈನಿಂಗ್ ಹೊರತುಪಡಿಸಿ ಲಕ್ಷ್ಮಿ ಅರುಣಾ ಸ್ವತಂತ್ರವಾಗಿ ಆದಾಯ ಹೊಂದಿದ್ದು, ಅದರಿಂದ ಜಪ್ತಿ ಮಾಡಲು ಉಲ್ಲೇಖಿಸಿರುವ ಆಸ್ತಿ ಖರೀದಿಸಿದ್ದಾರೆ ಎಂದು ಹೇಳಲು ಯಾವುದೇ ದಾಖಲೆ ಇಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
“ಅರುಣಾ ಲಕ್ಷ್ಮಿ ಅವರು ₹1,49,44,285 ಕೋಟಿ ತೆರಿಗೆ ಪಾವತಿ ಮಾಡುವ ಕಡೆ ₹9,78,20,543 ತೆರಿಗೆ ಪಾವತಿ ಮಾಡಿದ್ದು, ₹8,28,76,258 ಹಣ ವಾಪಸ್ ಪಡೆದಿದ್ದಾರೆ. ಆದರೆ, ಇಷ್ಟು ತೆರಿಗೆ ಏಕೆ ಅರುಣಾ ಲಕ್ಷ್ಮಿ ಪಾವತಿಸಿದ್ದಾರೆ ಎಂಬುದಕ್ಕೆ ವಿವರಣೆ ನೀಡಿಲ್ಲ” ಎಂದೂ ನ್ಯಾಯಾಲಯ ಹೇಳಿದೆ.
ಪತ್ನಿಯ ಪರವಾಗಿ ರೆಡ್ಡಿ ಸಾಕ್ಷಿ: ಆಕ್ಷೇಪ ಎತ್ತಿರುವ ಲಕ್ಷ್ಮಿ ಅರುಣಾ ಅವರ ಪರವಾಗಿ ಜನಾರ್ದನ ರೆಡ್ಡಿ ಅವರು ಪವರ್ ಆಫ್ ಅಟಾರ್ನಿ ಪಡೆದು ಸಾಕ್ಷಿ ನುಡಿದಿದ್ದಾರೆ. ಓಬಳಾಪುರಂ ಮೈನಿಂಗ್ ಕಂಪೆನಿಯಿಂದ ಲಕ್ಷ್ಮಿ ಅವರು ವೇತನ ಪಡೆದು ಆಸ್ತಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆದಾಯ ತೆರಿಗೆ ಪಾವತಿಯಲ್ಲಿ ಲಕ್ಷ್ಮಿ ಅರುಣಾಗೆ ವೇತನ ಹೊರತುಪಡಿಸಿ ಯಾವುದೇ ಸ್ವತಂತ್ರ ಆದಾಯ ಇಲ್ಲ ಎಂದು ಹೇಳಲಾಗಿದೆ. ಲಕ್ಷ್ಮಿ ಅರುಣಾ ಅವರ ತಾಯಿ ಗೃಹಿಣಿಯಾಗಿದ್ದು, ಎಲ್ಲಿಯೂ ಉದ್ಯೋಗದಲ್ಲಿ ಇಲ್ಲ. ಅವರು ಆದಾಯ ತೆರಿಗೆ ಪಾವತಿದಾರರು ಅಲ್ಲ. ತಾಯಿಯಿಂದ ಲಕ್ಷ್ಮಿ ಅರುಣಾ ಅವರಿಗೆ ಹಲವು ಆಸ್ತಿಗಳು ವರ್ಗಾವಣೆಯಾಗಿವೆ. ಲಕ್ಷ್ಮಿ ಅರುಣಾ ಅವರ ತಂದೆಗೂ ಸಾಕಷ್ಟು ಆದಾಯವಿಲ್ಲ. ರೆಡ್ಡಿ ಮತ್ತು ಅವರ ಪತ್ನಿ ಆದಾಯ ತೆರಿಗೆ ಫೈಲ್ ಮಾಡಿದ್ದಾರೆ ಎಂದ ಮಾತ್ರಕ್ಕೆ ಅವರು ತೋರಿಸಿರುವ ಆದಾಯ ಕಾನೂನಾತ್ಮಕವಾಗಿದೆ ಎಂದು ಹೇಳಲಾಗದು ಎಂದು ವಿಶೇಷ ಸರ್ಕಾರಿ ಅಭಿಯೋಜಕರು ಆಕ್ಷೇಪಿಸಿದ್ದರು.
ಲಕ್ಷ್ಮಿ ಅರುಣಾ ಆಕ್ಷೇಪ: ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವಾಗ ಒಂದು ಅಥವಾ ಅದಕ್ಕಿಂತ ಹೆಚ್ಚು ಅಫಿಡವಿಟ್‌ಗಳನ್ನು ಸಲ್ಲಿಸಬೇಕು. ಇದರಲ್ಲಿ ಆರೋಪಿಯು ಅಪರಾಧ ಮಾಡಿದ್ದಾರೆ ಎಂಬುದನ್ನು ಯಾವ ಆಧಾರದ ಮೇಲೆ ನಂಬಲಾಗುತ್ತಿದೆ ಎಂಬುದಕ್ಕೆ ಆಧಾರ ನೀಡಬೇಕು. ಅಪರಾಧದ ಮೂಲಕ ಸಂಪಾದಿಸಿದ ಆಸ್ತಿಯ ಮೌಲ್ಯವನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು. ಇದರಲ್ಲಿ ಆಸ್ತಿ ಇರುವ ಸ್ಥಳ, ಜಪ್ತಿ ಮಾಡಲು ಉದ್ದೇಶಿಸಿರುವ ಆಸ್ತಿಯಲ್ಲಿನ ಹಿತಾಸಕ್ತಿ ಹೊಂದಿರುವವರ ಮಾಹಿತಿ ನಮೂದಿಸಬೇಕು. ಆರೋಪಿತ ಅಪರಾಧ ನಡೆಯುವುದಕ್ಕೂ ಮುಂಚಿತವಾಗಿ ಜಪ್ತಿ ಮಾಡಲು ಉಲ್ಲೇಖಿಸಿರುವ ಆರು ಆಸ್ತಿಗಳನ್ನು ಜನಾರ್ದನ ರೆಡ್ಡಿ ಖರೀದಿಸಿದ್ದಾರೆ. ಅಪರಾಧದ ಮೂಲಕ ಆಸ್ತಿ ಸಂಪಾದಿಸಲಾಗಿದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಸಿಬಿಐ ಇಟ್ಟಿಲ್ಲ. ಸಿಬಿಐ ಮೊಹರು, ಆಸ್ತಿಯ ಎಲ್ಲೆಗಳು, ಸದ್ಯದ ಮಾರುಕಟ್ಟೆಯ ಮೌಲ್ಯವನ್ನು ನಿಗದಿಪಡಿಸಲಾಗಿಲ್ಲ ಎಂದು ರೆಡ್ಡಿ ಮತ್ತು ಲಕ್ಷ್ಮಿ ಅರುಣಾ ಅವರ ಪರ ವಕೀಲರು ವಾದಿಸಿದ್ದರು.
ದುರುದ್ದೇಶದಿಂದ ಸಿಬಿಐ ಅರ್ಜಿ ಸಲ್ಲಿಸಿದ್ದು, ಲಕ್ಷ್ಮಿ ಅರುಣಾ ಅವರ ಆಸ್ತಿಗಳನ್ನು ಈ ಪ್ರಕರಣಕ್ಕೆ ಎಳೆದು ತರಲಾಗಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 20 ಆರೋಪಿಗಳಿದ್ದರೂ ಸಿಬಿಐ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದು, ಈ ಮೂಲಕ ರೆಡ್ಡಿ ಅವರಿಗೆ ಬೆದರಿಕೆ ಹಾಕಲು ಅರ್ಜಿಯನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.
ಪ್ರಕರಣದ ಹಿನ್ನೆಲೆ: ಜಿ ಜನಾರ್ದನ ರೆಡ್ಡಿ, ಬಳ್ಳಾರಿಯ ಅಂದಿನ ಉಪ ಅರಣ್ಯ ಸಂರಕ್ಷಕ ಎಸ್ ಮುತ್ತಯ್ಯ, ಹೊಸಪೇಟೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಎಸ್ ಪಿ ರಾಜು, ಎಸ್ ಬಿ ಲಾಜಿಸ್ಟಿಕ್ಸ್ ಹಾಗೂ ಇತರರ ವಿರುದ್ಧ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 120-ಬಿ, 420, 379, 411 ಮತ್ತು 447, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 13(1)(ಡಿ) ಜೊತೆಗೆ 13(2), ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 4(1), 4(1)(ಎ) ಜೊತೆಗೆ 21 ಮತ್ತು 23 ಮತ್ತು ಕರ್ನಾಟಕ ಅರಣ್ಯ ಕಾಯಿದೆ ಸೆಕ್ಷನ್ 24 ರ ಅಡಿ 2012ರ ಸೆಪ್ಟೆಂಬರ್ 13ರಂದು ಬೆಂಗಳೂರಿನ ಸಿಬಿಐ ಪೊಲೀಸ್ ಇನ್‌ಸ್ಪೆಕ್ಟರ್ ಎ ವಿ ಎಸ್ ಸಾಯಿ ಅವರು ಪ್ರಕರಣ ದಾಖಲಿಸಿದ್ದರು.
2008ರ ಜೂನ್ 9ರಿಂದ 2011ರ ಆಗಸ್ಟ್ 25ರವರೆಗೆ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಅಕ್ರಮ ಗಣಿಗಾರಿಕೆಯ ಮೂಲಕ ಅಪಾರ ಸಂಪತ್ತು ಸಂಪಾದನೆ ಮಾಡಿದ್ದಾರೆ. ವಿವಿಧ ಕಂಪೆನಿಗಳ ಮೂಲಕ ಅಲಿ ಖಾನ್, ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್ ಜೊತಗೂಡಿ ಅದಿರು ಮಾರಾಟ ಮಾಡಿದ್ದಾರೆ. ಆಂಧ್ರಪ್ರದೇಶ-ಕರ್ನಾಟಕ ಗಡಿಯಲ್ಲಿರುವ ಹಲಕುಂಡಿ ಚೆಕ್‌ಪೋಸ್ಟ್ ತೆರವು ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜನಾರ್ದನ ರೆಡ್ಡಿ ನಿರ್ದೇಶಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಲವು ಆಸ್ತಿಗಳನ್ನು ಜನಾರ್ದನ ರೆಡ್ಡಿ ಅವರು ತಮ್ಮ ಮತ್ತು ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರ ಹೆಸರಿನಲ್ಲಿ ಖರೀದಿಸಿದ್ದಾರೆ. ಲಕ್ಷ್ಮಿ ಅವರು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯಲ್ಲಿ ಪಾಲುದಾರರಾಗಿದ್ದಾರೆ. ಓಬಳಾಪುರಂ ಮೈನಿಂಗ್ ಕಂಪೆನಿಯಲ್ಲಿ ರೆಡ್ಡಿ ನಿರ್ದೇಶಕರಾಗಿದ್ದು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇದರ ಮೇಲೂ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ಪ್ರತಿವಾದಿಗಳಾದ ರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ ಸಲ್ಲಿಸಿರುವ ಅರ್ಜಿ ವಜಾ ಮಾಡುವಂತೆ ಸಿಬಿಐ ಕೋರಿತ್ತು.