ಸುದ್ದಿಗಳು

ಮಗಳ ಮೇಲೆ ಅತ್ಯಾಚಾರ: ಮಾಜಿ ನ್ಯಾಯಾಧೀಶನ ವಿರುದ್ಧದ ಆರೋಪ ರದ್ದತಿಗೆ ಸುಪ್ರೀಂ ನಕಾರ

ನ್ಯಾಯಾಧೀಶರ ಮಗಳು ತನ್ನ ತಂದೆ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಗಂಭೀರವಾಗಿವೆ ಎಂದ ಸರ್ವೋಚ್ಚ ನ್ಯಾಯಾಲಯ, ಕ್ರಿಮಿನಲ್ ವಿಚಾರಣೆಯಲ್ಲಿ ಮಧ್ಯಪ್ರವೇಶ ನಿರಾಕರಿಸಿತು.

Bar & Bench

ಸ್ವಂತ ಮಗಳಿಂದ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮಾಜಿ ನ್ಯಾಯಾಂಗ ಅಧಿಕಾರಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದ್ದು ಪ್ರಕರಣ "ಆಘಾತಕಾರಿ" ಎಂದಿದೆ.

ಏಪ್ರಿಲ್ 15ರಂದು ಬಾಂಬೆ ಹೈಕೋರ್ಟ್ ತನ್ನ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಲು ನಿರಾಕರಿಸಿದ ಆದೇಶ ಪ್ರಶ್ನಿಸಿ ನ್ಯಾಯಾಧೀಶ ಸಲ್ಲಿಸಿದ್ದ ವಿಶೇಷ ಅನುಮತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

ವಿಚಾರಣೆಯಿಂದಾಗಿ ತನ್ನ ಕಕ್ಷಿದಾರನ ಬದುಕು ಮತ್ತು ವೃತ್ತಿಜೀವನ ಹಾಳಾಗಿದೆ. ಪತ್ನಿಯೊಂದಿಗಿನ ದೀರ್ಘಕಾಲದ ವೈವಾಹಿಕ ವ್ಯಾಜ್ಯದಿಂದಾಗಿ ಈ ಆರೋಪ ಕೇಳಿ ಬರುತ್ತಿದೆ. ಇದೊಂದು ಸ್ಪಷ್ಟ ಪ್ರತಿದಾಳಿ. ತನ್ನ ಕಕ್ಷಿದಾರನ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡರು ಎಂದು ಮಾಜಿ ನ್ಯಾಯಾಧೀಶರ ಪರ ವಕೀಲರು ವಾದ ಮಂಡಿಸಿದರು.

ಆದರೆ ನ್ಯಾಯಾಧೀಶರ ಮಗಳು ತನ್ನ ತಂದೆ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಗಂಭೀರವಾಗಿವೆ ಎಂದ ಸರ್ವೋಚ್ಚ ನ್ಯಾಯಾಲಯ, ಕ್ರಿಮಿನಲ್ ವಿಚಾರಣೆಯಲ್ಲಿ ಮಧ್ಯಪ್ರವೇಶ ನಿರಾಕರಿಸಿತು. ಮಗನ ಕೃತ್ಯದಿಂದ ಬೇಸತ್ತು ತಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದ ಅದು ಇದು ರದ್ದತಿಗೊಳಿಸುವಂತಹ ಪ್ರಕರಣವೇ ಎಂದು ಪ್ರಶ್ನಿಸಿತು.

ಮಹಾರಾಷ್ರ್ಟದ ಭಂಡಾರದಲ್ಲಿ  ಜನವರಿ 21, 2019ರಂದು ಎಫ್‌ಐಆರ್‌ ದಾಖಲಾಗಿತ್ತು. ಆದರೆ ಮೇ 2014 ಮತ್ತು 2018ರ ನಡುವೆ ಆರೋಪ ಮಾಡಲಾಗಿದೆ ಎಂಬ ನ್ಯಾಯಾಧೀಶರ ಪರ ವಕೀಲರ ವಾದಕ್ಕೂ ಪೀಠ  ಕಿವಿಗೊಡಲಿಲ್ಲ. ಹೈಕೋರ್ಟ್‌ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಅದು ವಿಚಾರಣಾ ನ್ಯಾಯಾಲಯ ತ್ವರಿತವಾಗಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿತು. ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಅರ್ಜಿದಾರರು ಪೋಕ್ಸೊ ನ್ಯಾಯಾಲಯದಲ್ಲಿ ವಿಚಾರಣೆ  ಎದುರಿಸಬೇಕಿದೆ.