Abhishek Bannerjee, ED 
ಸುದ್ದಿಗಳು

ಇ ಡಿ ಸಮನ್ಸ್ ಪ್ರಶ್ನಿಸಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದ ಎಲ್ಲಾ ವ್ಯಕ್ತಿಗಳು ಖುದ್ದಾಗಿ ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ ಹಾಜರಾಗಿ ಸತ್ಯ ನುಡಿಯಲು ಬದ್ಧರಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರು ದೆಹಲಿಗೆ ಬರುವಂತೆ ಜಾರಿ ನಿರ್ದೇಶನಾಲಯ (ಇ ಡಿ) ನೀಡಿದ್ದ ಸಮನ್ಸ್‌ ರದ್ದತಿಗೆ ಸುಪ್ರೀಂ ಕೋಟ್‌ ಮಂಗಳವಾರ ನಿರಾಕರಿಸಿದೆ [ಅಭಿಷೇಕ್ ಬ್ಯಾನರ್ಜಿ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಇಬ್ಬರನ್ನೂ ದೆಹಲಿಗೆ ಕರೆಸುವಲ್ಲಿ ಇ ಡಿ ಯಾವುದೇ ಅಕ್ರಮ ಎಸಗಿಲ್ಲ. ಏಕೆಂದರೆ ನಡೆದಿದೆ ಎನ್ನಲಾದ ಅಪರಾಧದ ಒಂದು ಬೇರು ದೆಹಲಿಯಲ್ಲೂ ಇದೆ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ತಿಳಿಸಿದೆ.

ದೆಹಲಿ ರೌಸ್‌ ಅವೆನ್ಯೂ ನ್ಯಾಯಾಲಯ ಸಂಕೀರ್ಣದ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಆರೋಪಿಗಳ ವಿರುದ್ಧ ಸಲ್ಲಿಸಿದ ದೂರಿನಲ್ಲಿ ಇ ಡಿ ಹೇಳಿರುವಂತೆ ತಮ್ಮ ರಾಜಕೀಯ ದಣಿಗಳಿಗೆ ತಲುಪಿಸಲೆಂದು ಸಹ-ಆರೋಪಿ ಅನೂಪ್‌ ಮಜೀ ಅವರಿಂದ ಇನ್‌ಸ್ಪೆಕ್ಟರ್‌ ಅಶೋಕ್ ಕುಮಾರ್ ಮಿಶ್ರಾ ಅವರು ರೂ.168 ಕೋಟಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. 168 ಕೋಟಿ ರೂಪಾಯಿಗಳನ್ನು ದೆಹಲಿ ಮತ್ತು ವಿದೇಶಗಳಿಗೆ ವೋಚರ್ಗಳ ಮೂಲಕ ವರ್ಗಾಯಿಸಲಾಗಿದೆ. ಇದು ನಡೆದಿರುವುದು ದೆಹಲಿ ಪ್ರದೇಶದಲ್ಲಿ ಎನ್ನುವುದು ಸ್ಪಷ್ಟವಾಗಿ ಸಾಬೀತಾಗಿದೆ ಎಂದು ನ್ಯಾಯಾಲಯ ನುಡಿಯಿತು.

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಇ ಡಿಯಿಂದ ಸಮನ್ಸ್ ಪಡೆದ ಎಲ್ಲಾ ವ್ಯಕ್ತಿಗಳು ಖುದ್ದಾಗಿ ಅಥವಾ ಅಧಿಕೃತ ಏಜೆಂಟರ ಮೂಲಕ ಅಧಿಕಾರಿ ನಿರ್ದೇಶಿಸಿದಂತೆ ಹಾಜರಾಗಿ ಸತ್ಯ ನುಡಿಯಲು ಬದ್ಧರಾಗಿರಬೇಕು  ಎಂದು ನ್ಯಾಯಾಲಯ ಹೇಳಿದೆ.

ಇ ಡಿ ಸಮನ್ಸ್‌ಗೆ ಅವಿಧೇಯತೆ ತೋರುವ ಯಾವುದೇ ವ್ಯಕ್ತಿ ವಿರುದ್ಧ ಐಪಿಸಿ ಸೆಕ್ಷನ್ 174ರ (ಸಾರ್ವಜನಿಕ ಸೇವಕರ ಆದೇಶಕ್ಕೆ ವಿಧೇಯರಾಗಿ ಹಾಜರಾಗದಿರುವುದು) ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ವಿಚಾರಣೆ ವೇಳೆ ಸಾಕ್ಷ್ಯ, ಇಲ್ಲವೇ ದಾಖಲೆ ಸಲ್ಲಿಸಲು ಅಗತ್ಯ ಎಂದು ಪರಿಗಣಿಸಲಾದ ಯಾವುದೇ ವ್ಯಕ್ತಿಗೆ ಸಮನ್ಸ್‌ ನೀಡಲು ಅಧಿಕೃತ ಪ್ರಾಧಿಕಾರಿಗೆ ಪಿಎಂಎಲ್ಎ ಕಾಯಿದೆಯ ಸೆಕ್ಷನ್ 50 ಅಧಿಕಾರ ನೀಡುತ್ತದೆ. ಸೆಕ್ಷನ್ 50 ರ ಉಪ ಸೆಕ್ಷನ್‌ (3)ರ ಪ್ರಕಾರ ಹಾಗೆ ಸಮನ್ಸ್‌ ಪಡೆದ ವ್ಯಕ್ತಿಗಳು ಖುದ್ದು ಇಲ್ಲವೇ ಅಧಿಕೃತ ಪ್ರತಿನಿಧಿಗಳ ಮೂಲಕ ಹಾಜರಾಗಿ ತಾವು ವಿಚಾರಣೆಗೆ ಒಳಪಟ್ಟಿರುವ ಪ್ರಕರಣದ ಕುರಿತಂತೆ ಸತ್ಯ ನುಡಿಯಲು ಇಲ್ಲವೇ ಹೇಳಿಕೆ ಸಲ್ಲಿಸಲು ಬದ್ಧರಾಗಿರುತ್ತಾರೆ ಎಂದು ವಿಚಾರಣೆ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಮನ್ಸ್ ನೀಡಿಕೆ ಹಂತದಲ್ಲಿ, ವ್ಯಕ್ತಿ ಸಂವಿಧಾನದ 20(3)ನೇ ವಿಧಿಯಡಿ (ಬಲವಂತದ ಸ್ವಯಂ ದೋಷಾರೋಪಣೆಯ ವಿರುದ್ಧದ ರಕ್ಷಣೆ) ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈಸ್ಟರ್ನ್ ಕೋಲ್‌ ಫೀಲ್ಡ್ಸ್‌ ಲಿಮಿಟೆಡ್‌ನ (ECL) ಗುತ್ತಿಗೆ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಕಲ್ಲಿದ್ದಲು ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ..