ನವೆಂಬರ್ 2024ರಲ್ಲಿ ನಡೆದ ಮಹಾರಾಷ್ಟ್ರವಿಧಾನಸಭಾ ಚುನಾವಣೆಯಲ್ಲಿ ಸಂಜೆ 6 ಗಂಟೆಯ ನಂತರ (ಮತದಾನ ಮುಕ್ತಾಯಗೊಳ್ಳುವ ಅವಧಿ) ಮತಗಳ ಸಂಖ್ಯೆಯಲ್ಲಿ ಅಸಾಧಾರಣ ಹೆಚ್ಚಳ ಕಂಡು ಬಂದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ [ಚೇತನ್ ಚಂದ್ರಕಾಂತ್ ಅಹಿರೆ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಜೂನ್ 2025ರ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಚೇತನ್ ಚಂದ್ರಕಾಂತ್ ಅಹಿರೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ತಿರಸ್ಕರಿಸಿತು.
ಮತದಾನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದ 288 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮತದಾನದ ಅವಧಿ ಸಂಜೆ 6 ಗಂಟೆಗೆ ಮುಗಿದಿದ್ದರೂ ಆ ಬಳಿಕ 75 ಲಕ್ಷಕ್ಕೂ ಅಧಿಕ ಮತಗಳ ಚಲಾವಣೆಯಾಗಿದೆ. 90 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮತದಾನವಾದ ಮತ್ತು ಎಣಿಕೆಯಾದ ಮತಗಳ ನಡುವಿನ ವ್ಯತ್ಯಾಸ ಕಂಡುಬಂದಿದೆ. ಚುನಾವಣೆಯಲ್ಲಿ ಈ ರೀತಿ ಹೊಂದಾಣಿಕೆ ನಡೆದಿದ್ದರೂ ಚುನಾವಣಾಧಿಕಾರಿಗಳು ಅದನ್ನು ವರದಿ ಮಾಡದೆ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಲಾಗಿತ್ತು.
ಈ ಹಿಂದೆ ಅರ್ಜಿದಾರರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ ಕಳೆದ ಜೂನ್‌ನಲ್ಲಿ ಅರ್ಜಿ ವಜಾಗೊಳಿಸಲಾಗಿತ್ತು. ಅರ್ಜಿ ಕೇವಲ ಒಂದು ಪತ್ರಿಕಾ ವರದಿಯನ್ನು ಆಧರಿಸಿದ್ದು ಊಹಾತ್ಮಕ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದೆ. ಇದು ಕಾನೂನು ಪ್ರಕ್ರಿಯೆಯ ಸಂಪೂರ್ಣ ದುರುಪಯೋಗಕ್ಕೆ ಸಮ ಎಂದು ಹೈಕೋರ್ಟ್ ಹೇಳಿತ್ತು.
ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರು ಚುನಾವಣಾ ಆಯೋಗವನ್ನು ಸಂಪರ್ಕಿಸಿಲ್ಲ ಎಂದು ಅದು ಬೆರಳು ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.