
ಒಂದಕ್ಕಿಂತ ಹೆಚ್ಚು ಗ್ರಾಮ ಪಂಚಾಯತಿ, ಮಂಡಲ ಪಂಚಾಯತಿ ಅಥವಾ ಪುರಸಭೆಗಳ ಮತದಾರರ ಪಟ್ಟಿಯಲ್ಲಿ ಚುನಾವಣಾ ಅಭ್ಯರ್ಥಿಯ ಹೆಸರು ಇದೆ ಎಂದ ಮಾತ್ರಕ್ಕೆ ಅವರ ನಾಮಪತ್ರ ತಿರಸ್ಕರಿಸಲಾಗದು ಎಂದು ರಾಜ್ಯ ಚುನಾವಣಾ ಆಯೋಗ ಹೊರಡಿಸಿದ ಸ್ಪಷ್ಟೀಕರಣಕ್ಕೆ ಉತ್ತರಾಖಂಡ ಹೈಕೋರ್ಟ್ ತಡೆ ನೀಡಿದೆ [ಶಕ್ತಿ ಸಿಂಗ್ ಬಾರ್ತ್ವಾಲ್ ಮತ್ತು ರಾಜ್ಯ ಚುನಾವಣಾ ಆಯೋಗ ನಡುವಣ ಪ್ರಕರಣ].
ಚುನಾವಣಾ ಆಯೋಗದ ಈ ಸ್ಪಷ್ಟೀಕರಣವು ಉತ್ತರಾಖಂಡ ಪಂಚಾಯತ್ ರಾಜ್ ಕಾಯಿದೆ- 2016ರ ಸೆಕ್ಷನ್ 9(6) ಮತ್ತು 9(7)ರ ಸೆಕ್ಷನ್‌ಗಳಿಗೆ ವಿರುದ್ಧವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ಅಲೋಕ್ ಮಹ್ರಾ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ. ಇದು ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಕ್ಷೇತ್ರಗಳಲ್ಲಿ ಅಥವಾ ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಮತದಾರರಾಗಿ ಒಬ್ಬರು ನೋಂದಣಿ ಮಾಡಿಕೊಳ್ಳುವುದನ್ನು ಈ ಸೆಕ್ಷನ್‌ಗಳು ನಿಷೇಧಿಸುತ್ತವೆ.
ತಾನು ತಡೆ ಹಿಡಿದಿರುವ ಸ್ಪಷ್ಟೀಕರಣ ಆಧರಿಸಿ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ರಾಜ್ಯ ಚುನಾವಣಾ ಆಯೋಗ ನಾಮಪತ್ರಗಳನ್ನು ಸರಿಯಾಗಿ ಪರಿಶೀಲಿಸುತ್ತಿಲ್ಲ ಎಂದು ಆರೋಪಿಸಿ ಶಕ್ತಿ ಸಿಂಗ್ ಎಂಬುವವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.
ವಿವಿಧ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರಿದ್ದರೂ ಸ್ಪರ್ಧಿಸಲು ಅವಕಾಶ ನೀಡುವುದರಿಂದ ಚುನಾವಣಾ ಪ್ರಕ್ರಿಯೆಯ ನ್ಯಾಯಪರತೆಗೆ ಧಕ್ಕೆ ಎದುರಾಗುತ್ತದೆ ಎಂದು ದೂರಿ ಹಲವು ಅರ್ಜಿಗಳನ್ನು ಸಲ್ಲಿಸಿದ ಬಳಿಕ ಚುನಾವಣಾ ಆಯೋಗಈ ಸ್ಪಷ್ಟೀಕರಣ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟೀಕರಣಕ್ಕೆ ತಡೆ ನೀಡುವಂತೆ ಕೋರಿ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಒಂದಕ್ಕಿಂತ ಹೆಚ್ಚು ನಗರ ಪಂಚಾಯಿತಿಗಳು ಮತ್ತು ಗ್ರಾಮ ಪಂಚಾಯಿತಿಗಳ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರುಗಳು ಕಾಣಿಸಿಕೊಂಡಿರುವ ಬಗ್ಗೆ ತನಿಖೆ ನಡೆಸಿ ಅಂತಹವರ ಉಮೇದುವಾರಿಕೆ ರದ್ದುಗೊಳಿಸಲು ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದರು. ಆಗಸ್ಟ್ 11ಕ್ಕೆ ಮತ್ತೆ ನ್ಯಾಯಾಲಯ ಪ್ರಕರಣ ಆಲಿಸಲಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಅಭಿಜಯ್ ನೇಗಿ ಮತ್ತು ಸ್ನಿಗ್ಧಾ ತಿವಾರಿ, ರಾಜ್ಯ ಚುನಾವಣಾ ಆಯೋಗದ ಪರವಾಗಿ ಸ್ಥಾಯಿ ವಕೀಲ ಸಂಜಯ್ ಭಟ್ ವಾದ ಮಂಡಿಸಿದರು.