
ಕಳೆದ ವರ್ಷ ನಡೆದ ಮಹಾರಾಷ್ಟ್ರವಿಧಾನಸಭಾ ಚುನಾವಣೆಯಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿರುವುದು, ಅದರಲ್ಲಿಯೂ ಸಂಜೆ 6 ಗಂಟೆಯ ನಂತರ (ಮತದಾನ ಮುಕ್ತಾಯಗೊಳ್ಳುವ ಅವಧಿ) ಮತಗಳ ಸಂಖ್ಯೆಯಲ್ಲಿ ಅಸಾಧಾರಣ ಹೆಚ್ಚಳ ಕಂಡು ಬಂದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಮುಂಬೈ ನಿವಾಸಿ ಚೇತನ್ ಚಂದ್ರಕಾಂತ್ ಅಹಿರೆ (ಅರ್ಜಿದಾರರು) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಜಿ ಎಸ್ ಕುಲಕರ್ಣಿ ಮತ್ತು ಆರಿಫ್ ಡಾಕ್ಟರ್ ಅವರಿದ್ದ ಪೀಠ ತಿರಸ್ಕರಿಸಿತು. ಅರ್ಜಿ ತನ್ನ ಸಮಯ ವ್ಯರ್ಥ ಮಾಡಿದೆ ಎಂದು ನ್ಯಾಯಾಲಯ ಹೇಳಿತಾದರೂ ದಂಡ ವಿಧಿಸದೆ ಇರಲು ನಿರ್ಧರಿಸಿತು.
ಅರ್ಜಿಯನ್ನು ತಿರಸ್ಕರಿಸಬೇಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದ ನ್ಯಾಯಾಲಯ ಅದರಂತೆ ತಾನು ಅದನ್ನು ತಿರಸ್ಕರಿಸುತ್ತಿರುವುದಾಗಿ ತಿಳಿಸಿತು. ʼಅರ್ಜಿ ವಿಚಾರಣೆಯಿಂದ ಇಡೀ ದಿನ ವ್ಯರ್ಥವಾಯಿತು, ಇದಕ್ಕಾಗಿ ದಂಡ ವಿಧಿಸಬೇಕಾಗಿದೆಯಾದರೂ ಹಾಗೆ ಮಾಡುತ್ತಿಲ್ಲʼ ಎಂದು ಅದು ನುಡಿಯಿತು.
ಮತದಾನ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯದ 288 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಮತದಾನದ ಅವಧಿ ಸಂಜೆ 6 ಗಂಟೆಗೆ ಮುಗಿದಿದ್ದರೂ ಆ ಬಳಿಕ 75 ಲಕ್ಷಕ್ಕೂ ಅಧಿಕ ಮತಗಳ ಚಲಾವಣೆಯಾಗಿದೆ. 90 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮತದಾನವಾದ ಮತ್ತು ಎಣಿಕೆಯಾದ ಮತಗಳ ನಡುವಿನ ವ್ಯತ್ಯಾಸ ಕಂಡುಬಂದಿದೆ. ಚುನಾವಣೆಯಲ್ಲಿ ಈ ರೀತಿ ಹೊಂದಾಣಿಕೆ ನಡೆದಿದ್ದರೂ ಚುನಾವಣಾಧಿಕಾರಿಗಳು ಅದನ್ನು ವರದಿ ಮಾಡದೆ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ವಕೀಲ ಪ್ರಕಾಶ್ ಅಂಬೇಡ್ಕರ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ದೂರಲಾಗಿತ್ತು.
ಚುನಾವಣಾ ಆಯೋಗವನ್ನು ಹಿರಿಯ ನ್ಯಾಯವಾದಿ ಅಶುತೋಷ್ ಕುಂಭಕೋಣಿ ಅವರು, ಅರ್ಜಿದಾರ ಅಹಿರೆ ಅವರು ರಾಜ್ಯಾದ್ಯಂತ ಘೋಷಿತವಾದ ಫಲಿತಾಂಶವನ್ನು ರಿಟ್ ಅರ್ಜಿಯ ಮೂಲಕ ಪ್ರಶ್ನಿಸುವ ನ್ಯಾಯಿಕ ನೆಲೆಯನ್ನು ಹೊಂದಿಲ್ಲ. ಅಲ್ಲದೆ, ಅವರು ವಿಜೇತರಾದ ಅಭ್ಯರ್ಥಿಗಳನ್ನು ಪ್ರತಿವಾದಿಗಳನ್ನಾಗಿಸಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಉದಯ್ ವರುಂಜಿಕರ್ ಅವರು, ಅರ್ಜಿದಾರರು ಪ್ರಸ್ತುತ ಅರ್ಜಿಯನ್ನು ಜನಪ್ರತಿನಿಧಿಗಳ ಕಾಯಿದೆ ಅಡಿ 45 ದಿನಗಳೊಳಗೆ ಸಲ್ಲಿಸಬೇಕಿತ್ತು. ಆದರೆ, ಅವರು ಈ ನಿಗದಿತ ಕಾಲಮಿತಿಯ ಒಳಗೆ ಅರ್ಜಿ ಸಲ್ಲಿಸುವಲ್ಲಿ ವಿಫಲರಾಗಿದ್ದಾರೆ. ಅದೇ ರೀತಿ, ಅರ್ಜಿಯ ವಿಸ್ತೃತ ಪರಿಣಾಮದ ಹಿನ್ನೆಲೆಯಲ್ಲಿ ಅದನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನಾಗಿ ದಾಖಲಿಸಬೇಕಿತ್ತು. ಆದರೆ, ಹಾಗೆ ಮಾಡದೆ ಲೋಪ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿಯು ತಿರಸ್ಕಾರ ಯೋಗ್ಯವಾಗಿದೆ ಎಂದು ವಾದಿಸಿದ್ದರು.