Supreme Court of India 
ಸುದ್ದಿಗಳು

ಉಜ್ಜಯಿನಿಯ ತಕಿಯಾ ಮಸೀದಿ ಭೂಸ್ವಾಧೀನ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಪಕ್ಕದ ಮಹಾಕಾಲ ದೇವಸ್ಥಾನದ ವಾಹನ ನಿಲುಗಡೆ ಪ್ರದೇಶ ವಿಸ್ತರಿಸುವ ಸಲುವಾಗಿ ರಾಜ್ಯ ಸರ್ಕಾರ 200 ವರ್ಷಗಳಷ್ಟು ಹಳೆಯದಾದ ಮಸೀದಿಯ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

Bar & Bench

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲ ದೇವಸ್ಥಾನ ಸಂಕೀರ್ಣ ವಿಸ್ತರಿಸುವ ಉದ್ದೇಶದಿಂದ ತಕಿಯಾ ಮಸೀದಿಯ ಜಾಗದ ಭೂಸ್ವಾಧೀನ ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ [ಮೊಹಮ್ಮದ್ ತೈಯಾಬ್ ಮತ್ತು ನಗರಾಡಳಿತ ಮತ್ತು ಅಭಿವೃದ್ಧಿ ಇಲಾಖೆ ಇನ್ನಿತರರ ನಡುವಣ ಪ್ರಕರಣ].

ಅರ್ಜಿದಾರರು ಕೇವಲ ಮಸೀದಿಯ ಅನುಯಾಯಿಗಳಾಗಿದ್ದು ಅವರು ಮಾಲೀಕರಲ್ಲದ ಕಾರಣ ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಲು ಅವರಿಗೆ ಅರ್ಹತೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಹೇಳಿತು.

ಸ್ವಾಧೀನಕ್ಕೆ ಸಂಬಂಧಿಸಿದ ಅಧಿಸೂಚನೆಗಳನ್ನು ಮೂಲಭೂತವಾಗಿ ಪ್ರಶ್ನಿಸಲಾಗಿಲ್ಲ ಹಾಗೂ ದೂರು ಕೇವಲ ಪರಿಹಾರ ಮೊತ್ತದ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಅದಕ್ಕಾಗಿ ಪರ್ಯಾಯ ಕಾನೂನು ಪರಿಹಾರ ಲಭ್ಯವಿದೆ ಎಂದು ಪೀಠ ನುಡಿಯಿತು.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಹುಜೇಫಾ ಅಹ್ಮದಿ ಅವರು 2013ರ ಭೂಸ್ವಾಧೀನ ಕಾಯ್ದೆಯ ಅಡಿಯಲ್ಲಿ ಕಡ್ಡಾಯವಾದ ಸಾಮಾಜಿಕ ಪರಿಣಾಮ ಮೌಲ್ಯಮಾಪನ ನಡೆಸಲಾಗಿಲ್ಲ, ವಕ್ಫ್ ಕಾಯ್ದೆಯ ನಿಯಮಗಳನ್ನು ಪಾಲಿಸಿಲ್ಲ ಮತ್ತು ತುರ್ತು ಅಧಿಕಾರಗಳನ್ನು ದುರುಪಯೋಗಪಡಿಸಲಾಗಿದೆ ಎಂದು ವಾದ ಮಂಡಿಸಿದರು.

ಅಲ್ಲದೆ ಒಂದು ಧಾರ್ಮಿಕ ಸಂಸ್ಥೆಯ ಅನುಕೂಲಕ್ಕಾಗಿ ಮತ್ತೊಂದು ಧಾರ್ಮಿಕ ಸಂಸ್ಥೆಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಸಾರ್ವಜನಿಕ ಉದ್ದೇಶವಲ್ಲ ಎಂದರು.

ಆದರೆ ವಾದ ಒಪ್ಪದ ನ್ಯಾಯಾಲಯ ಅರ್ಜಿದಾರರ ಆಕ್ಷೇಪಣೆಗಳು ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿಲ್ಲ. ಬದಲಿಗೆ ಪರಿಹಾರ ಆದೇಶಕ್ಕೆ ಮಾತ್ರ ಸೀಮಿತವಾಗಿವೆ ಎಂದಿತು. ಪರಿಹಾರಕ್ಕೆ ಸಂಬಂಧಿಸಿದಂತೆ 2013ರ ಕಾಯಿದೆಯಡಿ ಪರ್ಯಾಯ ಕಾನೂನು ಪರಿಹಾರ ಲಭ್ಯವಿದೆ ಎಂದು ತಿಳಿಸಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್‌ ಕೂಡ ಸ್ವಾಧೀನ ಪ್ರಕ್ರಿಯೆ ಎತ್ತಿಹಿಡಿದು ಅರ್ಜಿ ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ತಕಿಯಾ ಮಸೀದಿ ತೆರವು ಪ್ರಶ್ನಿಸಿದ್ದ ಮತ್ತೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ತಿರಸ್ಕರಿಸಿರುವುದರಿಂದ ಮಹಾಕಾಲ ಲೋಕ ಎರಡನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ನಡೆದ ಭೂಸ್ವಾಧೀನ ಕುರಿತು ಎದ್ದಿದ್ದ ಎಲ್ಲಾ ವ್ಯಾಜ್ಯಗಳಿಗೆ ಅಂತಿಮ ತೆರೆ ಬಿದ್ದಿದೆ.