SIR of electoral rolls  
ಸುದ್ದಿಗಳು

ಎಸ್ಐಆರ್: ತೀರ್ಪು ಕಾಯ್ದಿರಿಸಿದ ಸರ್ವೋಚ್ಚ ನ್ಯಾಯಾಲಯ

ದೇಶದ ವಿವಿಧೆಡೆ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಶೀಲನೆಗೆ ತಡೆ ನೀಡಲು ಈ ಹಿಂದೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

Bar & Bench

ವಿವಿಧ ರಾಜ್ಯಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ಆಮೂಲಾಗ್ರ ಪರಿಶೀಲನೆ ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ.

ಕಳೆದ ವರ್ಷ, ಬಿಹಾರದಲ್ಲಿ ಆಯೋಗ ಮತದಾರರ ಪಟ್ಟಿ ಆಮೂಲಾಗ್ರ ಪರಿಷ್ಕರಣೆಗೆ ಮುಂದಾದಾಗ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಮತ್ತು ನ್ಯಾಷನಲ್ ಫೆಡರೇಷನ್ ಫಾರ್ ಇಂಡಿಯನ್ ವಿಮೆನ್ (ಎನ್‌ಎಫ್‌ಐಡಬ್ಲ್ಯೂ) ಸೇರಿದಂತೆ ಹಲವು ಸಂಸ್ಥೆಗಳು ಪ್ರಶ್ನಿಸಿದ್ದವು. ಆದರೆ ಸುಪ್ರೀಂ ಕೋರ್ಟ್‌ ಪರಿಷ್ಕರಣೆಗೆ ತಡೆ ನೀಡದೆ ಇದ್ದುದರಿಂದ ಪ್ರಕ್ರಿಯೆ ಮುಂದುವರೆದಿತ್ತು.

ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್‌ಐಆರ್‌ ಪ್ರಕ್ರಿಯೆಯನ್ನು ಆಯೋಗವು 2025ರ ಅಕ್ಟೋಬರ್ 27ರಂದು, ವಿಸ್ತರಿಸಿತ್ತು. ಹೀಗಾಗಿ ಇನ್ನಷ್ಟು ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾದವು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್  ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಇಂದು ಈ ಅರ್ಜಿಗಳ ಕುರಿತ ವಾದ ಆಲಿಸುವಿಕೆಯನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತು.

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಸಂಬಂಧ ಸುಪ್ರೀಂ ಕೋರ್ಟ್ ಜನವರಿ 19ರಂದು ಚುನಾವಣಾ ಆಯೋಗಕ್ಕೆ ಹಲವು ನಿರ್ದೇಶನ ನೀಡಿತ್ತು. ಇಂದು, ತಮಿಳುನಾಡು ರಾಜ್ಯದ ವಿಷಯದಲ್ಲಿಯೂ ಚುನಾವಣಾ ಆಯೋಗಕ್ಕೆ ಅಂಥದ್ದೇ ನಿರ್ದೇಶನಗಳನ್ನು ಪೀಠ ನೀಡಿದೆ.

ಕೆಲ ದಿನಗಳ ಹಿಂದೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌, ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಶೀಲನೆಯನ್ನು ನಡೆಸುವ ಚುನಾವಣಾ ಆಯೋಗದ ಅಧಿಕಾರವು ನ್ಯಾಯಾಂಗದ ಪರಿಶೀಲನೆಗೆ ಒಳಪಡದ, ಅನಿಯಂತ್ರಿತ ಅಧಿಕಾರವಾಗಿದೆಯೇ ಎಂದು ಪ್ರಶ್ನಿಸಿದ್ದನ್ನು ಇಲ್ಲಿ ಗಮನಿಸಬಹುದು.