ತಮಿಳುನಾಡು ಎಸ್ಐಆರ್: ತಾರ್ಕಿಕ ವ್ಯತ್ಯಾಸ ಇರುವ ಹೆಸರುಗಳನ್ನು ಪ್ರದರ್ಶಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಆದೇಶ

ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ಎಲ್ಲಾ ಪ್ರದೇಶಗಳಲ್ಲಿ ಚುನಾವಣಾ ಆಯೋಗ ತನ್ನ ನಿರ್ದೇಶನಗಳನ್ನು ಪಾಲಿಸಲಿದೆ ಎಂಬ ಆಶಾವಾದವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.
Tamil Nadu, Supreme Court
Tamil Nadu, Supreme Court
Published on

ತಮಿಳುನಾಡಿನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ  ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ಸಂದರ್ಭದಲ್ಲಿ ತಾರ್ಕಿಕ ವ್ಯತ್ಯಾಸಗಳಿವೆ ಎಂದು ಹೇಳಲಾಗಿರುವ ಮತದಾರರ ಹೆಸರು ಪ್ರಕಟಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ತಾರ್ಕಿಕ ವ್ಯತ್ಯಾಸ ಪಟ್ಟಿಯಲ್ಲಿರುವ ವ್ಯಕ್ತಿಗಳ ಹೆಸರನ್ನು ಗ್ರಾಮ ಪಂಚಾಯ್ತಿ, ತಾಲೂಕು ಕಚೇರಿ ಹಾಗೂ ವಾರ್ಡ್‌ ಕಚೇರಿಗಳಲ್ಲಿ ಪ್ರದರ್ಶಿಸುವಂತೆ ಸಿಜೆಐ ಸೂರ್ಯಕಾಂತ್ , ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಆದೇಶಿಸಿದೆ.

Also Read
'ಎಸ್ಐಆರ್ ಪ್ರಕ್ರಿಯೆ ಕೈಗೊಳ್ಳುವ ಇಸಿಐ ಅಧಿಕಾರ ಅನಿಯಂತ್ರಿತವೇ? ನ್ಯಾಯಾಂಗ ಪರಿಷ್ಕರಣೆಗೆ ಒಳಪಡದೇ?' ಸುಪ್ರೀಂ ಪ್ರಶ್ನೆ

ಪಟ್ಟಿಯಲ್ಲಿ ಹೆಸರು ಇರುವವರು 10 ದಿನಗಳೊಳಗೆ ಸ್ವತಃ ಅಥವಾ ಅಧಿಕೃತ ಪ್ರತಿನಿಧಿಗಳ ಮೂಲಕ ದಾಖಲೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಪೀಠ ಸೂಚಿಸಿದೆ.

ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ಎಲ್ಲಾ ಪ್ರದೇಶಗಳಲ್ಲಿ ಚುನಾವಣಾ ಆಯೋಗ  ತನ್ನ ನಿರ್ದೇಶನಗಳನ್ನು ಪಾಲಿಸಲಿದೆ ಎಂಬ ಆಶಾವಾದವನ್ನು ನ್ಯಾಯಾಲಯ ವ್ಯಕ್ತಪಡಿಸಿದೆ.

ತಾರ್ಕಿಕ ಅಸಂಗತತೆಯ ಕಾರಣಗಳನ್ನು ಬಹಿರಂಗಪಡಿಸುವುದು ಖಾಸಗಿತನಕ್ಕೆ ಧಕ್ಕೆ ಉಂಟುಮಾಡಬಹುದು ಎಂಬ ಚುನಾವಣಾ ಆಯೋಗದ ವಾದಕ್ಕೆ ಪ್ರತಿಕ್ರಿಯಿಸಿದ ಪೀಠ ನೋಟಿಸ್‌ನಲ್ಲಿ ಈಗಾಗಲೇ ಉಲ್ಲೇಖಿಸಿರುವ ಸಂಕ್ಷಿಪ್ತ ಕಾರಣವನ್ನಷ್ಟೇ ಪಟ್ಟಿಯೊಂದಿಗೆ ಪ್ರಕಟಿಸಬಹುದು ಎಂದು ತಿಳಿಸಿತು.

ಜೊತೆಗೆ, ಎಸ್‌ಐಆರ್‌ ಪ್ರಕ್ರಿಯೆ ಸುಗಮವಾಗಿ ನಡೆಯಲು ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಬೇಕು ಹಾಗೂ ಕಾನೂನು–ಸುವ್ಯವಸ್ಥೆ ಸಮಸ್ಯೆಗಳು ಉಂಟಾಗದಂತೆ ಪೊಲೀಸ್ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿತು.

Also Read
ಎಸ್ಐಆರ್ ಪ್ರಕರಣದಲ್ಲಿ ಅಮೆರಿಕ ತೀರ್ಪಿನ ಅವಲಂಬನೆಗೆ ಚುನಾವಣಾ ಆಯೋಗ ಆಕ್ಷೇಪ: ಟ್ರಂಪ್ ಆಕ್ರಮಣಶೀಲತೆಯ ಪ್ರಸ್ತಾಪ

ಬಿಹಾರದಲ್ಲಿ ಆಯೋಗ ಮತದಾರರ ಪಟ್ಟಿ ಆಮೂಲಾಗ್ರ ಪರಿಷ್ಕರಣೆಗೆ ಮುಂದಾದಾಗ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಮತ್ತು ನ್ಯಾಷನಲ್ ಫೆಡರೇಷನ್ ಫಾರ್ ಇಂಡಿಯನ್ ವಿಮೆನ್ (ಎನ್‌ಎಫ್‌ಐಡಬ್ಲ್ಯೂ) ಸೇರಿದಂತೆ ಹಲವು ಸಂಸ್ಥೆಗಳು ಪ್ರಶ್ನಿಸಿದ್ದವು. ಆದರೆ ಸುಪ್ರೀಂ ಕೋರ್ಟ್‌ ಪರಿಷ್ಕರಣೆಗೆ ತಡೆ ನೀಡದೆ ಇದ್ದುದರಿಂದ ಪ್ರಕ್ರಿಯೆ ಮುಂದುವರೆದಿತ್ತು. ಬಳಿಕ 2025ರ ಅಕ್ಟೋಬರ್ 27ರಂದು, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್‌ಐಆರ್‌ ಪ್ರಕ್ರಿಯೆ ವಿಸ್ತರಿಸಲಾಗಿತ್ತು. ಹೀಗಾಗಿ ಇನ್ನಷ್ಟು ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು. ಅರ್ಜಿದಾರರಲ್ಲಿ ತಮಿಳುನಾಡಿದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವೂ ಸೇರಿತ್ತು.

ಎಸ್‌ಐಆರ್‌ ನಡೆಸುವ ಆದೇಶವು ಸಂವಿಧಾನಬಾಹಿರವಾಗಿದ್ದು ಇದು ಚುನಾವಣಾ ಆಯೋಗ ತನ್ನ ಅಧಿಕಾರ ವ್ಯಾಪ್ತಿ ಮೀರಿ ಇದನ್ನು ನೀಡಿದೆ. ಪ್ರಜಾ ಪ್ರತಿನಿಧಿ ಕಾಯಿದೆ  1950 ಮತ್ತು ಮತದಾರರ ನೋಂದಣಿ ನಿಯಮಾವಳಿ 1960ಕ್ಕೆ ಈ ಆದೇಶ ವ್ಯತಿರಿಕ್ತವಾದುದು. ಸಂವಿಧಾನದ 14, 19, 21, 325 ಮತ್ತು 326 ನೇ ವಿಧಿಗಳನ್ನು ಆದೇಶ ಉಲ್ಲಂಘಿಸಲಾಗಿದ್ದು ನೈಜ ಮತದಾರರ ಸಾಮೂಹಿಕ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕಾರಣವಾಗಬಹುದು. ತಮಿಳುನಾಡಿನಲ್ಲಿ ಈಗಾಗಲೇ ಮತದಾರ ಪಟ್ಟಿಗಳು ಪರಿಷ್ಕೃತವಾಗಿವೆ. ಹೀಗಾಗಿ ಮತ್ತೆ ಎಸ್‌ಐಆರ್‌ ನಡೆಸುವುದು ಅನಗತ್ಯ ಮತ್ತು ನಿಷ್ಪ್ರಯೋಜಕ ಎಂದು ಡಿಎಂಕೆ ವಾದಿಸಿತ್ತು.

Kannada Bar & Bench
kannada.barandbench.com