ದೇಶದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿ ಕಡಿತ ಘಟನೆಗಳಿಗೆ ಸಂಬಂಧಿಸಿದಂತೆ ತಾನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ.
ವಿವಿಧ ರಾಜ್ಯಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯೂಬಿಐ) ಮಂಡಿಸಿದ ಅಂತಿಮ ವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್‌ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠ ತೀರ್ಪು ಕಾಯ್ದಿರಿಸಿತು.
ಹೆದ್ದಾರಿಗಳಲ್ಲಿ ತೊಂದರೆ ನೀಡುವ ಬೀಡಾಡಿ ದನಗಳು ಮತ್ತಿತರ ಪ್ರಾಣಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಅನುವಾಗುವಂತೆ ಒಂದು ಅಪ್ಲಿಕೇಷನ್ ಅಭಿವೃದ್ಧಿಪಡಿಸುವಂತೆ ಎನ್ಎಚ್ಎಐಗೆ ಸುಪ್ರೀಂ ಕೋರ್ಟ್ ಇದೇ ವೇಳೆ ಸೂಚಿಸಿತು.
ದೇಶದಲ್ಲಿ ಮಾನ್ಯತೆ ಪಡೆದ ಶ್ವಾನ ಸಂತಾನಹರಣ ಕೇಂದ್ರಗಳಿರುವುದು ಕೇವಲ 76 ಮಾತ್ರ. ಆದರೆ ರಾಜ್ಯ ಸರ್ಕಾರಗಳು ನೀಡಿರುವ ಮಾಹಿತಿ ಪ್ರಕಾರ 883 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಎಡಬ್ಲ್ಯೂಬಿಐ ಪರ ವಕೀಲರು ತಿಳಿಸಿದರು. ಕೆಲವು ಕೇಂದ್ರಗಳಲ್ಲಿ ಸಂಖ್ಯೆಗಳ ವ್ಯತ್ಯಾಸವಾಗಿರುವುದನ್ನು ಮತ್ತು ನಿಧಿ ದುರ್ಬಳಕೆಯಾಗಿರುವುದನ್ನು ಈ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಯಿತು.
ರಾಜಸ್ಥಾನದಲ್ಲಿ ಕೇವಲ 22 ಬೀದಿ ನಾಯಿ ಆಶ್ರಯ ಕೇಂದ್ರಗಳಿವೆ. ಈ ಸಂಖ್ಯೆ ಅತೃಪ್ತಿದಾಯಕವಾಗಿದೆ ಎಂದು ಪೀಠ ಹೇಳಿತು. ಪಂಜಾಬ್ ಪ್ರತಿದಿನ 100 ಬೀದಿನಾಯಿಗಳ ಸಂತಾನಹರಣ ಮಾಡುತ್ತಿದ್ದರೂ ಈ ಪ್ರಮಾಣ ಸಮಸ್ಯೆಯನ್ನು ಪರಿಹರಿಸಲು ತಕ್ಕುದಾಗಿಲ್ಲ. ತಮಿಳುನಾಡಿನಲ್ಲಿ ವರ್ಷಕ್ಕೆ 35,000 ನಾಯಿಗಳ ಸಂತಾನಹರಣವಷ್ಟೇ ನಡೆಯುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ಪ್ರದೇಶದ ಸ್ಥಿತಿ ಉತ್ತಮವಾಗಿದೆ. ಅಲ್ಲಿ 3,406 ಶ್ವಾನ ಕೇಂದ್ರಗಳು ಇದ್ದು ಎಂಟು ಲಕ್ಷಕ್ಕೂ ಹೆಚ್ಚು ಸಂತಾನಹರಣ ನಡೆದಿದೆ. ನೋಯ್ಡಾ ಒಂದರಲ್ಲೇ 40,000 ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಅದು ಹೇಳಿತು.
ಹೆದ್ದಾರಿಗಳಲ್ಲಿ ಬೀಡಾಡಿ ದನಗಳು ಮತ್ತಿತರ ಪ್ರಾಣಿಗಳ ನಿರ್ವಹಣೆ ಮೂಲತಃ ಎನ್‌ಎಚ್‌ಎಐ ಹೊಣೆ ಎಂದ ನ್ಯಾಯಾಲಯ ಹೆದ್ದಾರಿಗಳಲ್ಲಿ ತೊಂದರೆ ನೀಡುವ ಬೀಡಾಡಿ ದನಗಳು ಮತ್ತಿತರ ಪ್ರಾಣಿಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಅನುವಾಗುವಂತೆ ಒಂದು ಆ್ಯಪ್ ಅಭಿವೃದ್ಧಿಪಡಿಸುವಂತೆ ಸಹಾಯವಾಣಿ ತೆರೆಯುವಂತೆ ಇದೇ ವೇಳೆ ಸೂಚಿಸಿತು.
ಇದೇ ವೇಳೆ ನ್ಯಾಯಾಲಯ, ಜನನ ನಿಯಂತ್ರಣ (ಎಬಿಸಿ) ಕ್ರಮಗಳನ್ನು ಪಾಲಿಸಲು ಸ್ಥಳೀಯ ಸಂಸ್ಥೆಗಳು ವಿಫಲವಾಗಿರುವುದು, ಶ್ವಾನವಧೆ ಪ್ರಕರಣಗಳು ಹೆಚ್ಚಾಗಿರುವುದು ಹಾಗೂ ರಾಜ್ಯಗಳ ವಾದದಲ್ಲಿರುವ ಅಸ್ಪಷ್ಟತೆ ಬಗ್ಗೆ ಕಿಡಿಕಾರಿತು. ಬೀಡಾಡಿ ಪ್ರಾಣಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿತು.
ವಿಚಾರಣೆ ವೇಳೆ ವಕೀಲರೊಬ್ಬರು ಬೀದಿ ನಾಯಿಗಳನ್ನು ಕೊಲ್ಲುವುದು ಧಾರ್ಮಿಕವಾಗಿ ತಪ್ಪು ಎಂದು ವಾದಿಸಿದರಾದರೂ ಆ ಕುರಿತು ಟಿಪ್ಪಣಿ ಒದಗಿಸುವಂತೆ ಪೀಠ ಸೂಚಿಸಿತು.