Supreme Court of India 
ಸುದ್ದಿಗಳು

ರಾಜ್ಯಪಾಲರ ಅಧಿಕಾರ ಕುರಿತ ತೀರ್ಪು ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದನ್ನು ಅವಲಂಬಿಸಿರುವುದಿಲ್ಲ: ಸುಪ್ರೀಂ ಕೋರ್ಟ್

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು ರಾಷ್ಟ್ರಪತಿಯವರು ಸಲ್ಲಿಸಿದ್ದ ಶಿಫಾರಸ್ಸಿನ ವಿಚಾರಣೆ ಪೀಠದಲ್ಲಿ ನಡೆಯಿತು.

Bar & Bench

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎನ್ನುವ ಕುರಿತು ಪರಿಶೀಲಿಸಲು ರಾಷ್ಟ್ರಪತಿಗಳು ಮಾಡಿದ ಶಿಫಾರಸ್ಸಿನ ಕುರಿತು ತಾನು ನೀಡಲಿರುವ ತೀರ್ಪು ಪ್ರಸ್ತುತ ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿದೆ ಅಥವಾ ಹಿಂದೆ ಅಧಿಕಾರದಲ್ಲಿತ್ತು ಎಂಬುದನ್ನು ಅವಲಂಬಿಸಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತಿಳಿಸಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಡಿದ ಶಿಫಾರಸ್ಸಿಗೆ ಸಂಬಂಧಿಸಿದ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ , ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಮ್ ನಾಥ್, ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್ ಚಂದೂರ್ಕರ್ ಅವರಿದ್ದ ಸಾಂವಿಧಾನಿಕ ಪೀಠ ಆಲಿಸಿತು.

ಯಾವ ಪಕ್ಷ ಅಧಿಕಾರದಲ್ಲಿತ್ತು ಅಥವಾ ಇದೆ ಎಂಬುದನ್ನು ಆಧರಿಸಿ ನ್ಯಾಯಾಲಯ ಪ್ರಕರಣ ನಿರ್ಧರಿಸುವುದಿಲ್ಲ ಎಂದು ಸಿಜೆಐ ಗವಾಯಿ ಎಚ್ಚರಿಕೆಯ ಧ್ವನಿಯಲ್ಲಿ ತಿಳಿಸಿದರು.

ರಾಜ್ಯಪಾಲರು ಮಸೂದೆಗಳಿಗೆ ಒಪ್ಪಿಗೆ ನೀಡದೆ ತಡೆಹಿಡಿದ ಪ್ರಕರಣಗಳ ಕುರಿತು ವಿವರಗಳ ಸಲ್ಲಿಕೆ ಕುರಿತು ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಡುವೆ ವಾಗ್ವಾದ ಉಂಟಾದ ಹೊತ್ತಿನಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿತು.   

ನನ್ನ ಬಳಿ ತಮಿಳುನಾಡು ಮತ್ತು ಕೇರಳದ ಮಾಹಿತಿ ಇದೆ”ಎಂದು ತಿಳಿಸಿದ ಸಿಂಘ್ವಿ ಅವರು ರಾಜ್ಯಪಾಲರು ಮಸೂದೆ ತಡೆದ ಉದಾಹರಣೆಗಳನ್ನು ವಿವರಿಸಲು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮೆಹ್ತಾ ಅವರು ಉಳಿದ ರಾಜ್ಯಗಳ ಪಟ್ಟಿ ನನ್ನಲ್ಲಿದೆ. ಅವರು ಕೆಟ್ಟ ಹಾದಿ ತುಳಿಯುವುದಾದರೆ ತಾನೂ ಅದೇ ಹಾದಿಯಲ್ಲಿ ಸಾಗಲು ಹಿಂಜರಿಯುವುದಿಲ್ಲ. ಆದರೆ ಇದು ರಾಷ್ಟ್ರಪತಿಗಳ ಶಿಫಾರಸ್ಸಿನ ಪ್ರಕರಣ ಎಂದರು.

ಈ ಹಂತದಲ್ಲಿ ಸಿಂಘ್ವಿ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾ, "ಮಿ. ಮೆಹ್ತಾ, ನಿಮ್ಮ ಬೆದರಿಕೆಗಳು ಕೆಲಸ ಮಾಡುವುದಿಲ್ಲ" ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಲಯವು ಯಾವ ರಾಜಕೀಯ ವ್ಯವಸ್ಥೆ ಅಧಿಕಾರದಲ್ಲಿದೆ ಅಥವಾ ಇತ್ತು ಎಂಬುದರ ಆಧಾರದ ಮೇಲೆ ಪ್ರಕರಣದ ತೀರ್ಪು ನೀಡುವುದಿಲ್ಲ ಎಂದಿತು. ಬಳಿಕ ಕಾನೂನು ವಾದಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುವಂತೆ ವಕೀಲರಿಗೆ ನ್ಯಾಯಾಲಯ ಸೂಚಿಸಿತು.

ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ತಮ್ಮ ಮುಂದಿರಿಸಲಾದ ಮಸೂದೆಗಳಿಗೆ ಅಂಕಿತ ಹಾಕುವುದನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್‌ ಕಳೆದ ಏಪ್ರಿಲ್‌ನಲ್ಲಿ ಕಾಲಮಿತಿ ನಿಗದಿಪಡಿಸಿತ್ತು. ಅಲ್ಲದೆ, ಸಂವಿಧಾನದ 200ನೇ ವಿಧಿಯಡಿಯಲ್ಲಿ ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡದೆ ಇರುವುದು ನ್ಯಾಯಾಂಗ ಪರಿಶೀಲನೆಗೆ ಒಳಪಡುತ್ತದೆ ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿದ್ದ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ ಸಲಹೆ ಕೋರಿ ಶಿಫಾರಸ್ಸು ಮಾಡಿದ್ದರು.