
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎನ್ನುವ ಕುರಿತು ಪರಿಶೀಲಿಸಲು ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ಗೆ ಶಿಫಾರಸ್ಸು ಮಾಡಿರುವುದು ಸಮರ್ಥನೀಯವಲ್ಲ ಎಂದು ವಾದಿಸಿ ತಮಿಳುನಾಡು ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಪರಿಶೀಲನೆ ಕೋರಿ ಮಾಡಿದ್ದ ಶಿಫಾರಸ್ಸಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಸರ್ಕಾರ ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರ ಅಧಿಕಾರಗಳು ಮತ್ತು 201ನೇ ವಿಧಿಯಡಿ ರಾಷ್ಟ್ರಪತಿಗಳ ಅಧಿಕಾರ ಕುರಿತು ಈಗಾಗಲೇ ಇತ್ಯರ್ಥಗೊಂಡಿರುವ ಕಾನೂನನ್ನು ಮತ್ತೆ ಕೆದಕಲು ರಾಷ್ಟ್ರಪತಿಗಳು ಈ ಶಿಫಾರಸ್ಸು ಮಾಡಿದ್ದಾರೆ ಎಂದು ದೂರಿದೆ.
ತಮಿಳುನಾಡು ಸರ್ಕಾರ ಮತ್ತು ತಮಿಳುನಾಡು ರಾಜ್ಯಪಾಲರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರಪತಿಗಳು ಸಲ್ಲಿಸಿದ ಮಾರುವೇಷದ ಮೇಲ್ಮನವಿ ಇದಾಗಿದ್ದು ಶಿಫಾರಸ್ಸನ್ನು ಪುರಸ್ಕರಿಸಬಾರದು ಎಂದು ರಾಜ್ಯ ಸರ್ಕಾರ ವಾದಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಈಗಾಗಲೇ ಅವರು ಮಾಡಿರುವ ಶಿಫಾರಸ್ಸಿಗೆ ಸಮಗ್ರ ರೀತಿಯ ಉತ್ತರ ನೀಡಿದೆ ಎಂದು ಅದು ಹೇಳಿದೆ.
ಆದ್ದರಿಂದ, ಮೇ 13 ರಂದು ಅವರು ಮಾಡಿರುವ ಶಿಫಾರಸ್ಸನ್ನು ಉತ್ತರರಹಿತವಾಗಿ ಮರಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಅದು ಮನವಿ ಮಾಡಿದೆ. .
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಕೇಂದ್ರ ಸರ್ಕಾರ ಮತ್ತು ಎಲ್ಲಾ ರಾಜ್ಯಗಳಿಗೆ ಔಪಚಾರಿಕ ನೋಟಿಸ್ ಜಾರಿ ಮಾಡಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಸೂಚಿಸಿತ್ತು.
ಸಂವಿಧಾನದ 200 ನೇ ವಿಧಿಯ ಅಡಿಯಲ್ಲಿ ರಾಜ್ಯ ಶಾಸಕಾಂಗ ಮಂಡಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ವಿವರಿಸುವ ಮಹತ್ವದ ತೀರ್ಪನ್ನು ಏಪ್ರಿಲ್ 8ರಂದು ನೀಡಿದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಆ ಮೂಲಕ ಸಂವಿಧಾನದ 201 ನೇ ವಿಧಿಯ ಅಡಿಯಲ್ಲಿ ಭಾರತದ ರಾಷ್ಟ್ರಪತಿಗಳ ಅಧಿಕಾರಗಳಿಗೆ ಇರುವ ಮಿತಿಯನ್ನೂ ವ್ಯಾಖ್ಯಾನಿಸಿತ್ತು.
ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಸೂದೆಗಳಿಗೆ ಒಪ್ಪಿಗೆ ನೀಡುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಸಂವಿಧಾನದ 200 ಮತ್ತು 201 ನೇ ವಿಧಿಗಳು ಯಾವುದೇ ಗಡುವನ್ನು ಅಥವಾ ನಿರ್ದಿಷ್ಟ ಕಾರ್ಯವಿಧಾನದ ಅವಶ್ಯಕತೆಗಳನ್ನು ಸೂಚಿಸುವುದಿಲ್ಲ ಎಂದು ಒತ್ತಿ ಹೇಳಿದ್ದ ರಾಷ್ಟ್ರಪತಿ ಮುರ್ಮು ಅವರು ಸುಪ್ರೀಂ ಕೋರ್ಟ್‌ಗೆ 14 ಪ್ರಶ್ನೆಗಳನ್ನು ಕೇಳಿದ್ದರು.