jairam ramesh and Supreme Court 
ಸುದ್ದಿಗಳು

ಚುನಾವಣಾ ನಿಯಮಾವಳಿ ತಿದ್ದುಪಡಿಗೆ ಜೈರಾಮ್ ರಮೇಶ್ ಆಕ್ಷೇಪ: ಕೇಂದ್ರ, ಇಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಎಲೆಕ್ಟ್ರಾನಿಕ್ ಚುನಾವಣಾ ದಾಖಲೆಗಳ ದುರುಪಯೋಗ ತಡೆಯುವ ಉದ್ದೇಶದಿಂದ ಕೆಲವು ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಾರ್ವಜನಿಕರು ಪಡೆಯದಂತೆ ಮಿತಿಗೊಳಿಸಲು ಕೇಂದ್ರ ಸರ್ಕಾರ ಚುನಾವಣಾ ನಿಯಮಾವಳಿ- 1961ರ ನಿಯಮ 93ಕ್ಕೆ ತಿದ್ದುಪಡಿ ಮಾಡಿದೆ.

Bar & Bench

ಚುನಾವಣೆಗೆ ಸಂಬಂಧಪಟ್ಟ ದಾಖಲೆಗಳನ್ನು ಪಡೆಯುವ ಜನರ ಹಕ್ಕನ್ನು ಮೊಟಕುಗೊಳಿಸಿ ಚುನಾವಣಾ ನಿಯಮಾವಳಿ 1961ಕ್ಕೆ ಈಚೆಗೆ ಮಾಡಲಾದ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ.

ಅರ್ಜಿ ಸಂಬಂದ ಮಾರ್ಚ್ 17 ರೊಳಗೆ ಕೇಂದ್ರ ಸರ್ಕಾರ ಮತ್ತು ಇಸಿಐ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ  ತಿಳಿಸಿದೆ.

ಜೈರಾಮ್‌ ರಮೇಶ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತಿದ್ದುಪಡಿಯ ಹಿಂದಿನ ಕಾರಣ ಪ್ರಶ್ನಿಸಿದರು. ಪತ್ರಿಕೆಗಳಲ್ಲಿ ಪ್ರಕಟವಾಗಿರುವಂತೆ, ಮತದಾರನ ಗುರುತು ಬಹಿರಂಗವಾಗಿರುವುದರಿಂದ ಸಿಸಿಟಿವಿ, ವೀಡಿಯೋ ತೆಗೆಯುತ್ತಿದ್ದೇವೆ ಎಂದು ಸರ್ಕಾರ ಹೇಳಿದೆ ಎಂಬುದಾಗಿ ಅವರು ದೂರಿದರು. ಪ್ರತಿವಾದಿಗಳು ತಮ್ಮ ಉತ್ತರ ಸಲ್ಲಿಸಲು ಗಡುವನ್ನು ನಿಗದಿಪಡಿಸಬೇಕು ಇಲ್ಲದಿದ್ದರೆ ಪ್ರತಿವಾದಿಗಳು ವಿಚಾರಣಾ ದಿನದಂದ ಪ್ರತಿಕ್ರಿಯೆ ಸಲ್ಲಿಸಬೇಕಿದೆ ಎಂದು ಜಾರಿಕೊಳ್ಳುತ್ತಾರೆ ಎಂದು ಸಿಂಘ್ವಿ ತಿಳಿಸಿದರು.

ಜೈ ರಾಮ್‌ ರಮೇಶ್‌ ಅವರು ತಮ್ಮ ವಾದದಲ್ಲಿ, ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಸಾಂವಿಧಾನಿಕ ಸಂಸ್ಥೆಯಾಗಿದೆ ಮತ್ತು ಸಾರ್ವಜನಿಕ ಸಮಾಲೋಚನೆಯಿಲ್ಲದೆ ಇಂತಹ ಪ್ರಮುಖ ಕಾನೂನಿಗೆ ಏಕಪಕ್ಷೀಯವಾಗಿ ತಿದ್ದುಪಡಿ ಮಾಡುವಂತಿಲ್ಲ.  ತಿದ್ದುಪಡಿಯಿಂದಾಗಿ ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸಲು ಬೇಕಾದ ಮಾಹಿತಿ ಪಡೆಯದಂತೆ ಸಾರ್ವಜನಿಕರನ್ನು ನಿರ್ಬಂಧಿಸುತ್ತದೆ ಎಂದು ಆಕ್ಷೇಪಿಸಿದರು.

ಎಲೆಕ್ಟ್ರಾನಿಕ್ ಚುನಾವಣಾ ದಾಖಲೆಗಳ ದುರುಪಯೋಗ ತಡೆಯುವ ಉದ್ದೇಶದಿಂದ ಕೆಲವು ಎಲೆಕ್ಟ್ರಾನಿಕ್ ದಾಖಲೆಗಳನ್ನು ಸಾರ್ವಜನಿಕರು ಪಡೆಯದಂತೆ ಮಿತಿಗೊಳಿಸಲು ಕೇಂದ್ರ ಸರ್ಕಾರ ಚುನಾವಣಾ ನಿಯಮಾವಳಿ- 1961ರ ನಿಯಮ 93ಕ್ಕೆ ತಿದ್ದುಪಡಿ ಮಾಡಿದೆ.

ತಿದ್ದುಪಡಿಯಿಂದಾಗಿ ಸಿಸಿಟಿವಿ ಕ್ಯಾಮೆರಾ ಮತ್ತು ವೆಬ್‌ಕಾಸ್ಟ್ ದೃಶ್ಯಾವಳಿಗಳು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ವಿಡಿಯೋ ರೆಕಾರ್ಡಿಂಗ್‌ಗಳು ಸಾರ್ವಜನಿಕರಿಗೆ ದೊರೆಯದಂತಾಗುತ್ತದೆ. ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರ ಕಾನೂನು ಸಚಿವಾಲಯ ತಿದ್ದುಪಡಿ ಮಾಡಿತ್ತು.

ಕುತೂಹಲಕಾರಿ ಸಂಗತಿ ಎಂದರೆ ಇತ್ತೀಚೆಗೆ ಹರಿಯಾಣ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾನಕ್ಕೆ ಸಂಬಂಧಿಸಿದ ವಿಡಿಯೋ, ಸಿಸಿಟಿವಿ ದೃಶ್ಯಾವಳಿ ಮತ್ತು ದಾಖಲೆಗಳ ಪ್ರತಿಗಳನ್ನು ವಕೀಲ ಮೆಹಮೂದ್ ಪ್ರಾಚಾ ಅವರಿಗೆ ಒದಗಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ ಕೆಲ ದಿನಗಳಲ್ಲಿ ಈ ತಿದ್ದುಪಡಿ ಮಾಡಲಾಗಿತ್ತು. .