Supreme Court of India 
ಸುದ್ದಿಗಳು

ತೀರ್ಪು ಘೋಷಣೆ ಮತ್ತು ಪ್ರಕಟಣೆಯ ದಿನಾಂಕ ಕುರಿತು ದೇಶದ ಹೈಕೋರ್ಟ್‌ಗಳಿಂದ ವರದಿ ಕೇಳಿದ ಸುಪ್ರೀಂ

ವಿವರ ಸಲ್ಲಿಸಲು ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ನಿರ್ದೇಶಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ತಿಳಿಸಿದೆ.

Bar & Bench

ತೀರ್ಪು ಘೋಷಿಸುವ ದಿನಾಂಕ ಮತ್ತು ಅವುಗಳನ್ನು ಜಾಲತಾಣದಲ್ಲಿ ಪ್ರಕಟಿಸಿದ ದಿನಾಂಕಗಳನ್ನು ವಿವರಿಸುವ ವರದಿ ಸಲ್ಲಿಸುವಂತೆ ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ [ಮೇರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಅಲಾಹಾಬಾದ್‌ ಹೈಕೋರ್ಟ್‌ ನಡುವಣ ಪ್ರಕರಣ].

ಜುಲೈ 2024 ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಆ ತೀರ್ಪು ಪ್ರಕಟಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು  ಎನ್‌ ಕೆ ಸಿಂಗ್ ಅವರಿದ್ದ ಪೀಠ ಈ ವಿಚಾರ ತಿಳಿಸಿತು.

ಕಂಪೆನಿ ತಯಾರಿಸಿದ ಉತ್ಪನ್ನವಾದ ಡಾಕ್-1 ಮ್ಯಾಕ್ಸ್ ಸಿರಪ್ ಸೇವಿಸಿದ ನಂತರ ಉಜ್ಬೇಕಿಸ್ತಾನದಲ್ಲಿ ಹದಿನೆಂಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನ್ನ ಉತ್ಪಾದನಾ ಪರವಾನಗಿ ರದ್ದುಗೊಳಿಸಿದ ಉತ್ತರ ಪ್ರದೇಶದ ಔಷಧ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ ದ ಕ್ರಮ ಪ್ರಶ್ನಿಸಿ ಮೇರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು.  

ಕೆಳ ನ್ಯಾಯಾಲಯಗಳೆದುರು ತನ್ನ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಿ ವಿಲೇವಾರಿಗೊಳಿಸಲು ನಡೆಸಿದ ಎಲ್ಲಾ ಯತ್ನಗಳು ವಿಫಲವಾದ ಕಾರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವುದಾಗಿ ಕಂಪೆನಿ ವಾದಿಸಿತ್ತು.

ಈ ಹಿನ್ನೆಲೆಯಲ್ಲಿ "ನೋಟಿಸ್‌ ನೀಡಿ.  (ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ) 05.05.2025 ರಂದು ತಾನು ನೀಡಿದ್ದ  ಆದೇಶದ ಮುಂದುವರಿಕೆಯಾಗಿ, ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳು ತೀರ್ಪು ಪ್ರಕಟಿಸುವ ದಿನಾಂಕ ಮತ್ತು ಅಂತಹ ತೀರ್ಪುಗಳನ್ನು ಪ್ರಕಟಿಸುವ ದಿನಾಂಕದ ಬಗ್ಗೆ ವಿವರ ಸಲ್ಲಿಸಲು ನಿರ್ದೇಶಿಸಲಾಗಿದೆ" ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಜನವರಿ 31, 2025ರಂದು ಅಥವಾ ಅದಕ್ಕೂ ಮೊದಲು ತೀರ್ಪು ಕಾಯ್ದಿರಿಸಿ, ಇನ್ನೂ ಅದನ್ನು ಪ್ರಕಟಿಸದ ಪ್ರಕರಣಗಳ ಕುರಿತು ಎಲ್ಲಾ ಹೈಕೋರ್ಟ್‌ಗಳಿಂದ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮೇ 5ರಂದು ಸೂಚಿಸಿತ್ತು. ಆ ಪ್ರಕರಣದಲ್ಲಿ ನ್ಯಾಯಾಲಯ ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ನಾಲ್ಕು ವಾರಗಳಲ್ಲಿಈ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಿತ್ತು.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಾಹಾಬಾದ್‌ ಹೈಕೋರ್ಟ್‌ ಪ್ರತಿಕ್ರಿಯೆ ಕೇಳಿ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 21ರಂದು ನಡೆಯಲಿದೆ.