ತಾತ್ಕಾಲಿಕವಾಗಿ ಹೈಕೋರ್ಟ್‌ಗಳಿಗೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಿಸಲು ಸುಪ್ರೀಂ ಅನುಮತಿ

ತಾತ್ಕಾಲಿಕ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಏಪ್ರಿಲ್ 2021ರ ತೀರ್ಪಿನಲ್ಲಿ ವಿಧಿಸಿದ್ದ ಕೆಲ ಷರತ್ತುಗಳನ್ನು ಸಡಿಲಿಸುವುದಾಗಿ ನ್ಯಾಯಾಲಯ ಈ ಹಿಂದೆ ಹೇಳಿತ್ತು.
Supreme Court
Supreme Court
Published on

ಬಾಕಿ ಉಳಿದಿರುವ ಕ್ರಿಮಿನಲ್ ಮೇಲ್ಮನವಿಗಳ ವಿಚಾರಣೆಗಾಗಿ ತಾತ್ಕಾಲಿಕ ಆಧಾರದ ಮೇಲೆ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳಲು ಹೈಕೋರ್ಟ್‌ಗಳು ಶಿಫಾರಸು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ [ಲೋಕ ಪ್ರಹರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ತಾತ್ಕಾಲಿಕ ನ್ಯಾಯಮೂರ್ತಿಗಳು ವಿಭಾಗೀಯ ಪೀಠದ ಸಾಮಾನ್ಯ ಸೇವಾನಿರತ ನ್ಯಾಯಮೂರ್ತಿಗಳೊಂದಿಗೆ ವಿಚಾರಣೆ ನಡೆಸಲಿದ್ದಾರೆ.

Also Read
ತನಿಖೆ ಬಾಕಿ ಉಳಿದಿರುವ 79,000 ಎಫ್ಐಆರ್‌ಗಳು: ಆಘಾತ ವ್ಯಕ್ತಪಡಿಸಿದ ಪಂಜಾಬ್ ಹೈಕೋರ್ಟ್, ಕ್ರಿಯಾಯೋಜನೆಗೆ ಸೂಚನೆ

ಪ್ರತಿ ಹೈಕೋರ್ಟ್‌ಗೆ ಇಬ್ಬರಿಂದ ಐವರು ನ್ಯಾಯಮೂರ್ತಿಗಳವರೆಗೆ ನೇಮಕ ಮಾಡಿಕೊಳ್ಳಬಹುದು. ಯಾವುದೇ ಸಂದರ್ಭದಲ್ಲಿ, ಈ ಸಂಖ್ಯೆ ಮಂಜೂರಾದ ನ್ಯಾಯಮೂರ್ತಿಗಳ ಸಂಖ್ಯೆಗೆ ಹೋಲಿಸಿದರೆ ಶೇ 10ಕ್ಕಿಂತಲೂ ಹೆಚ್ಚಿರಬಾರದು ಎಂದು ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರಿದ್ದ ವಿಶೇಷ ಪೀಠ ಹೇಳಿತು.

“ಸಂವಿಧಾನದ 224ಎಯನ್ನು ಆಶ್ರಯಿಸುವ ಮೂಲಕ ತಾತ್ಕಾಲಿಕ ನ್ಯಾಯಮೂರ್ತಿಗಳನ್ನು ಪ್ರತಿಯೊಂದು ಹೈಕೋರ್ಟ್‌ ನೇಮಕ ಮಾಡಿಕೊಳ್ಳಬಹುದು” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ತಾತ್ಕಾಲಿಕ ನ್ಯಾಯಮೂರ್ತಿಗಳ ನೇಮಕಾತಿಗಾಗಿ ಏಪ್ರಿಲ್ 2021 ರ ತೀರ್ಪಿನಲ್ಲಿ ವಿವರಿಸಿರುವ ಕೆಲವು ಷರತ್ತುಗಳನ್ನು ಮಾರ್ಪಡಿಸಲು ನ್ಯಾಯಾಲಯವು ಈ ಹಿಂದೆ ಒಲವು ವ್ಯಕ್ತಪಡಿಸಿತ್ತು .

ಲೋಕ್ ಪ್ರಹರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 2021ರಲ್ಲಿ ನೀಡಿದ ತೀರ್ಪಿನ ಮೂಲಕ ಮೊದಲ ಬಾರಿಗೆ ಹೈಕೋರ್ಟ್‌ಗಳಿಗೆ ತಾತ್ಕಾಲಿಕ ನ್ಯಾಯಮೂರ್ತಿಗಳ ನೇಮಕಾತಿಗೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿತ್ತು.

Also Read
ಕೊಲಿಜಿಯಂ ಸೂಚಿಸಿದ ನ್ಯಾಯಮೂರ್ತಿಗಳ ನೇಮಕ ಏಕೆ ಬಾಕಿ ಇದೆ ಎಂಬುದನ್ನು ಹೇಳಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

ಆದರೆ ತೀರ್ಪಿನಲ್ಲಿ ಸಾಮಾನ್ಯ ನ್ಯಾಯಮೂರ್ತಿಗಳ ನೇಮಕಾತಿ ಮಾಡಿಕೊಳ್ಳದೆ ತಾತ್ಕಾಲಿಕವಾಗಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳುವುದು ಪರಿಪಾಠವಾಗಬಾರದು ಎಂದು ಆಗ ನ್ಯಾಯಾಲಯ ಎಚ್ಚರಿಸಿತ್ತು.

ತಾತ್ಕಾಲಿಕ ನ್ಯಾಯಮೂರ್ತಿಗಳ ನೇಮಕ ಸಾಮಾನ್ಯ ಸೇವಾನಿರತ ನ್ಯಾಯಮೂರ್ತಿಗಳ ನೇಮಕಕ್ಕೆ ಪರ್ಯಾಯವಾಗುವುದಿಲ್ಲ. ಹೀಗಾಗಿ ಖಾಲಿ ಹುದ್ದೆಗಳ ಸಂಖ್ಯೆ ಶೇ 20ಕ್ಕಿಂತ ಹೆಚ್ಚಿದ್ದರೆ, ಪ್ರಕರಣಗಳ ಬಾಕಿ ಉಳಿಯುವಿಕೆ ಐದು ವರ್ಷಕ್ಕಿಂತಲೂ ಹೆಚ್ಚಿದ್ದರೆ ಅಥವಾ ವಿಲೇವಾರಿಗಿಂತಲೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುವಂತಹ ಸಂದರ್ಭಗಳಲ್ಲಿ ಮಾತ್ರ ಅಂತಹ ನೇಮಕಾತಿ ಮಾಡಿಕೊಳ್ಳಬಹುದು ಎಂದು ಆಗ ಅದು ಪ್ರಸ್ತಾಪಿಸಿತ್ತು. ಆದರೆ ಇಂದಿನ ವಿಚಾರಣೆ ವೇಳೆ ಈ ಮಿತಿಯನ್ನು ನ್ಯಾಯಾಲಯ ಸಡಿಲಗೊಳಿಸಿತು.  

Kannada Bar & Bench
kannada.barandbench.com