ಸುದ್ದಿಗಳು

ಕೆಟ್ಟ ಕೇಶ ವಿನ್ಯಾಸ: ಎನ್‌ಸಿಡಿಆರ್‌ಸಿ ಆದೇಶಿಸಿದ್ದ ₹2 ಕೋಟಿ ಪರಿಹಾರ ರದ್ದು; ಹೊಸದಾಗಿ ಪರಿಗಣಿಸಲು ಸುಪ್ರೀಂ ಸೂಚನೆ

ಪರಿಹಾರದ ಮೊತ್ತವನ್ನು ಪುರಾವೆಗಳ ಆಧಾರದ ಮೇಲೆ ನಿರ್ಧರಿಸಬೇಕೇ ವಿನಾ ಗ್ರಾಹಕರು ಕೋರಿದ ಪರಿಹಾರ ಆಧರಿಸಿ ಅಲ್ಲ ಎಂದಿದೆ ಪೀಠ.

Bar & Bench

ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಸೂಕ್ತವಲ್ಲದ ಕೇಶ ವಿನ್ಯಾಸ ಮಾಡಿದ್ದಕ್ಕಾಗಿ ಹಾಗೂ ಆನಂತರ ನಿರ್ಲಕ್ಷ್ಯದಿಂದ ಕೇಶಚಿಕಿತ್ಸೆ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ₹ 2 ಕೋಟಿ ಪರಿಹಾರ ನೀಡುವಂತೆ ಸೂಚಿಸಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ (ಎನ್‌ಸಿಡಿಆರ್‌ಸಿ) ಆದೇಶವನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ರದ್ದುಗೊಳಿಸಿದೆ [ಐಟಿಸಿ ಲಿಮಿಟೆಡ್ ಮತ್ತು ಅಶ್ನಾ ರಾಯ್ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಪರಿಹಾರದ ಮೊತ್ತವನ್ನು ಹೊಸದಾಗಿ ನಿರ್ಧರಿಸುವಂತೆ ಆಯೋಗಕ್ಕೆ ಸೂಚಿಸಿದೆ. ಪುರಾವೆಗಳ ಆಧಾರದ ಮೇಲೆ ಪರಿಹಾರದ ಮೊತ್ತ ನಿರ್ಧರಿಸಬೇಕೇ ವಿನಾ ಗ್ರಾಹಕರು ಕೋರಿದ ಪರಿಹಾರ ಆಧರಿಸಿ ಅಲ್ಲ ಎಂದು ಅದು ಹೇಳಿದೆ.  

“ಎನ್‌ಸಿಡಿಆರ್‌ಸಿ ಮಹಿಳೆಯ ಜೀವನದಲ್ಲಿ ಕೂದಲಿನ ಪ್ರಾಮುಖ್ಯತೆ ಬಗ್ಗೆ ಚರ್ಚಿಸಿದ್ದು ರೂಪದರ್ಶಿ ಮತ್ತು ಜಾಹೀರಾತು ಉದ್ಯಮದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಇದೊಂದು ಆಸ್ತಿಯಾಗಬಹುದು ಎಂದಿದೆ. ಆದರೆ ಅದು ಸೂಚಿಸಿದ ಪರಿಹಾರ ಮೊತ್ತ ಸಾಕ್ಷ್ಯವನ್ನು ಆಧರಿಸಿರಬೇಕೇ ವಿನಾ ಕೇಳಿದ ಪರಿಹಾರದ ಆಧಾರದ ಮೇಲಲ್ಲ. ಸೇವೆಯಲ್ಲಿನ ಕೊರತೆ ಸಾಬೀತಾದ ನಂತರ ಪ್ರತಿವಾದಿ ಕಾನೂನಿನಡಿ ಸ್ವೀಕಾರಾರ್ಹವಾದ ವಿವಿಧ ವಿಭಾಗಗಳಡಿ ಸೂಕ್ತ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಯಾವ ಆಧಾರದ ಮೇಲೆ ಎಷ್ಟು ಪರಿಹಾರ ಎಂಬುದು ಮುಖ್ಯವಾಗುತ್ತದೆ. ಈ ಬಗೆಗಿನ ಪ್ರಮಾಣ ನಿಗದಿಪಡಿಸುವಿಕೆಯನ್ನು ಎನ್‌ಸಿಡಿಆರ್‌ಸಿಯ ವಿವೇಚನೆಗೆ ಬಿಡೋಣ” ಎಂದು ನ್ಯಾಯಾಲಯ ಹೇಳಿತು.

ಮಾನಸಿಕ ಆಘಾತ ಉಂಟುಮಾಡುವಂತಹ ಮತ್ತು ವೃತ್ತಿಜೀವನಕ್ಕೆ ಅಪಾಯಕಾರಿಯಾದ ಕೇಶ ವಿನ್ಯಾಸ ಮತ್ತು ಕೇಶಚಿಕಿತ್ಸೆ ಮಾಡಿರುವುದು ಸಲೂನ್‌ ಎಸಗಿರುವ ನಿರ್ಲಕ್ಷ್ಯವಾಗಿದೆ ಎಂದು ವಿವರಿಸಿದ್ದ ಎನ್‌ಸಿಡಿಆರ್‌ಸಿ ಆದೇಶ ಪ್ರಶ್ನಿಸಿ ಐಟಿಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ.

ಕಘಟನೆ 2018ರಲ್ಲಿ ನಡೆದಿತ್ತು. ಸಂದರ್ಶನವೊಂದಕ್ಕೆ ಹಾಜರಾಗಬೇಕಿದ್ದ ಪ್ರತಿವಾದಿ ಆಶ್ನಾ ರಾಯ್‌ ಅವರು ಕೇಶ ಶೃಂಗಾರಕ್ಕಾಗಿ ಐಟಿಸಿ ಮೌರ್ಯದಲ್ಲಿರುವ ಸೆಲೂನ್‌ಗೆ ತೆರಳಿದ್ದರು. ರೂಢಿಯಂತೆ ಕೇಶ ವಿನ್ಯಾಸ ಮಾಡುತ್ತಿದ್ದ ವಿನ್ಯಾಸಕಿ ಇಲ್ಲದಿದ್ದರಿಂದ ಬೇರೊಬ್ಬ ಸ್ಟೈಲಿಸ್ಟ್‌ ಅನ್ನು ಸಲೂನ್‌ ನಿಯೋಜಿಸಿತ್ತು. ಸಲೂನ್‌ ವ್ಯವಸ್ಥಾಪಕರ ಭರವಸೆ ಮೇರೆಗೆ ಆಶ್ನಾ ಅವರು ಸೇವೆ ಪಡೆಯಲು ಮುಂದಾದರು.

ತಮ್ಮನ್ನು ಆ ವಿನ್ಯಾಸಕಿ ಪದೇ ಪದೇ ತಲೆ ತಗ್ಗಿಸು ಎಂದು ಹೇಳುತ್ತಿದ್ದುದರಿಂದ ಕನ್ನಡಿ ನೋಡಲು ಆಗುತ್ತಿರಲಿಲ್ಲ. ಕಡೆಗೆ ತನ್ನ ಕೇಶ ವಿನ್ಯಾಸ ನೋಡಿ ತೀವ್ರ ಆಘಾತಕ್ಕೆ ಒಳಗಾದೆ. ತಲೆಯ ತುದಿಯಿಂದ ಕೇವಲ ನಾಲ್ಕು ಇಂಚು ಬಿಟ್ಟು ಉಳಿದೆಲ್ಲಾ ಕೂದಲನ್ನು ಕತ್ತರಿಸಿಹಾಕಲಾಗಿತ್ತು. ಕೂದಲು ತನ್ನ ಭುಜವನ್ನು ತಾಕುತ್ತಲೇ ಇರಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದರು.

ಈ ಬಗ್ಗೆ ಸಲೂನ್‌ ವ್ಯವಸ್ಥಾಪಕರಿಗೆ ಆಕೆ ದೂರು ನೀಡಿದರು. ದೂರಿನ ಬಳಿಕ ಉಚಿತವಾಗಿ ಕೇಶಚಿಕಿತ್ಸೆ ನಡೆಸುವುದಾಗಿ ಹೋಟೆಲ್‌ನವರು ಹೇಳಿದರು. ಆಗ ಒಲ್ಲದ ಮನಸ್ಸಿನಿಂದಲೇ ಆಶ್ನಾ ಒಪ್ಪಿಗೆ ಸೂಚಿಸಿದರು.

ತಾವು ರೂಢಿಯಂತೆ ಕೇಶ ವಿನ್ಯಾಸ ಮಾಡಿಕೊಳ್ಳುವ ಸ್ಟೈಲಿಸ್ಟ್‌ ಮೇಲ್ವಿಚಾರಣೆಯಲ್ಲಿ; ತರಬೇತುಪಡೆದ, ಪರಿಣತರಾದ ಸಲೂನಿನ ಮತ್ತೊಬ್ಬ ಕೇಶ ವಿನ್ಯಾಸಕಿ ಕೇಶಚಿಕಿತ್ಸೆ ನೀಡಲಿದ್ದಾರೆ ಎಂದು ಅಶ್ನಾ ಅವರಿಗೆ ತಿಳಿಸಲಾಯಿತು. ಆದರೆ ಚಿಕಿತ್ಸೆ ವೇಳೆ ಬಳಸಿದ ಅಧಿಕ ಅಮೋನಿಯಾದಿಂದಾಗಿ ಮತ್ತು ವಿನ್ಯಾಸದ ವಿಧಾನದಿಂದಾಗಿ ಕೂದಲು ಮತ್ತು ನೆತ್ತಿ ಹಾನಿಗೊಳಗಾಗಿ ಮತ್ತಷ್ಟು ಕಿರಿಕಿರಿಯಾಯಿತು ಎಂದು ಆಶ್ನಾ ದೂರಿದರು. ಚಿಕಿತ್ಸೆ ಬಳಿಕ ಕೂದಲ ತುರಿಕೆ ಉಂಟಾಯಿತು. ಸುಟ್ಟ ನೆತ್ತಿ ಒರಟಾಗಿ ಕಾಣತೊಡಗಿತು. ಈ ವಿಚಾರದಲ್ಲಿ ಹೋಟೆಲ್‌ ಸಿಬ್ಬಂದಿಯ ಸಹಾಯ ಪಡೆಯಲು ಯತ್ನಿಸಿದರೂ ತನಗೆ ನಿಂದನೀಯ ಪದ ಬಳಸಿ ಬೆದರಿಕೆ ಹಾಕಲಾಯಿತು ಎಂದು ಆಶ್ನಾ ತಿಳಿಸಿದರು.  ತಮಗೆ ಉಂಟಾದ ಸೇವಾ ದೋಷ, ಕಿರುಕುಳ, ಅವಮಾನ ಹಾಗೂ ಮಾನಸಿಕ ಆಘಾತದ ಕಾರಣಕ್ಕೆ ₹ 3 ಕೋಟಿ ಪರಿಹಾರ ನೀಡಬೇಕು. ಜೊತೆಗೆ ಐಟಿಸಿ ವ್ಯವಸ್ಥಾಪಕ ಮಂಡಳಿ ಕ್ಷಮೆ ಯಾಚಿಸಬೇಕು ಎಂದು ಆಶ್ನಾ ಕೋರಿದ್ದರು.  

“ಆಶ್ನಾ ಅವರ ಸೂಚನೆಗಳಿಗೆ ವಿರುದ್ಧವಾಗಿ ಸಲೂನ್‌ ಕೇಶ ವಿನ್ಯಾಸದ ವೇಳೆ ಕೂದಲು ಕತ್ತರಿಸಿದ್ದರಿಂದಾಗಿ ಆಕೆ ಅನೇಕ ಅವಕಾಶಗಳಿಂದ ವಂಚಿತರಾಗಿ ದೊಡ್ಡ ನಷ್ಟ ಅನುಭವಿಸಿದರು. ಅವರ ಜೀವನಶೈಲಿ ಬದಲಾಗಿ ಅತ್ಯುತ್ತಮ ರೂಪದರ್ಶಿ ಆಗಬೇಕೆಂಬ ಆಕೆಯ ಕನಸು ಛಿದ್ರಗೊಂಡಿತು” ಎಂದು  2021ರ ಸೆಪ್ಟೆಂಬರ್‌ನಲ್ಲಿ ಎನ್‌ಸಿಡಿಆರ್‌ಸಿ  ತೀರ್ಪು ನೀಡಿತು. ಈ ಕಾರಣಕ್ಕೆ ಅವರಿಗೆ ₹ 2 ಕೋಟಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಕೇಶಚಿಕಿತ್ಸೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಐಟಿಸಿ ಹೋಟೆಲ್‌ ಕೂಡ ತಪ್ಪಿತಸ್ಥ ಎಂದು ಅದು ಘೋಷಿಸಿತು. ಇದನ್ನು ಪ್ರಶ್ನಿಸಿ ಐಟಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು.