ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ ಎನ್ ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಎಲ್ಲಾ ವಾದಗಳನ್ನು ಮುಕ್ತವಾಗಿಟ್ಟು ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು ಸೂಚಿಸಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಪ್ರಕರಣವನ್ನು ಹೈಕೋರ್ಟ್‌ಗೆ ಮರಳಿಸಿತು.
ಶಿಕ್ಷೆ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಈ ಹಿಂದಿನ ಪೀಠ ಈಗಾಗಲೇ ಅಭಿಪ್ರಾಯ ನೀಡಿರುವುದರಿಂದ ಹೈಕೋರ್ಟ್‌ನ ಬೇರೊಂದು ಪೀಠ ಪ್ರಕರಣದ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
“ಅಂತಹ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾದ ಬಳಿಕ ಪೂರ್ವಾನುಮತಿಯ ಪ್ರಶ್ನೆಯನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ವಾದಿಸಲು ಸರ್ಕಾರ ಮುಕ್ತವಾಗಿರುತ್ತದೆ… ಮೇಲ್ಮನವಿಗಳನ್ನು ತ್ವರಿತವಾಗಿ, ನಾಲ್ಕು ತಿಂಗಳೊಳಗೆ ವಿಲೇವಾರಿ ಮಾಡುವಂತೆ ಹೈಕೋರ್ಟ್‌ಗೆ ಕೇಳಿಕೊಳ್ಳುತ್ತಿದ್ದೇವೆ. ಆಕ್ಷೇಪಿತ ಆದೇಶ ನೀಡಿದ ಪೀಠಕ್ಕಿಂತಲೂ ಬೇರೊಂದು ಪೀಠದ ಮುಂದೆ ಪ್ರಕರಣವನ್ನು ಇಡುವ ಔಚಿತ್ಯವನ್ನು ಗಮನಿಸಲಾಗಿದೆ” ಎಂದು ನ್ಯಾಯಾಲಯ ನುಡಿದಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಮಹಾರಾಷ್ಟ್ರಸರ್ಕಾರವನ್ನು ಪ್ರತಿನಿಧಿಸಿದ್ದರು. ಆರೋಪಿ ಪರ ಹಿರಿಯ ವಕೀಲರಾದ ಆರ್ ಬಸಂತ್ ಮತ್ತು ನಿತ್ಯಾ ರಾಮಕೃಷ್ಣ ಹಾಗೂ ವಕೀಲ ಶದನ್ ಫರಾಸತ್ ವಾದ ಮಂಡಿಸಿದ್ದರು.
2017ರಲ್ಲಿ ವಿಚಾರಣಾ ನ್ಯಾಯಾಲಯ ಸಾಯಿಬಾಬಾ ಅವರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಿತ್ತು. ಇದನ್ನು ಪ್ರಶ್ನಿಸಿ ಸಾಯಿಬಾಬಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು 2022ರ ಅಕ್ಟೋಬರ್ 14ರಂದು ಹೈಕೋರ್ಟ್ ಪುರಸ್ಕರಿಸಿ ಅವರನ್ನು ಖುಲಾಸೆಗೊಳಿಸಿತ್ತು. ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ (ಯುಎಪಿಎ) ಸೆಕ್ಷನ್ 45 (1) ರ ಪ್ರಕಾರ ಕೇಂದ್ರ ಸರ್ಕಾರದ ನಿರ್ಬಂಧಗಳು ಇಲ್ಲದಿರುವಾಗ ಸೆಷನ್ಸ್ ನ್ಯಾಯಾಲಯ ಸಾಯಿಬಾಬಾ ವಿರುದ್ಧ ಆರೋಪಗಳನ್ನು ನಿಗದಿಪಡಿಸಿದೆ ಎಂಬ ಅಂಶವನ್ನು ಆಧರಿಸಿ ಆ ಮೇಲ್ಮನವಿಗೆ ಅನುಮತಿ ನೀಡಲಾಗಿದೆ.
ಭಯೋತ್ಪಾದನೆಯು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ. ಅದರ ವಿರುದ್ಧ ಬತ್ತಳಿಕೆಯಲ್ಲಿರುವ ಎಲ್ಲಾ ಕಾನೂನು ಅಸ್ತ್ರಗಳನ್ನು ಅಣಿಗೊಳಿಸಬೇಕು, ಆದರೆ, ಇದೇ ವೇಳೆ ನಾಗರಿಕ ಪ್ರಜಾಪ್ರಭುತ್ವವು ಆರೋಪಿಗಳಿಗೆ ನೀಡಿರುವ ವಿವಿಧ ಕಾರ್ಯವಿಧಾನಗಳ ಸುರಕ್ಷತೆಗಳನ್ನು ಬಿಟ್ಟುಬಿಡಲು ಸಹ ಸಾಧ್ಯವಿಲ್ಲ ಎಂದು ಹೈಕೋರ್ಟ್ ದಾಖಲಿಸಿತ್ತು.
ಸುಪ್ರೀಂ ಕೋರ್ಟ್ ತರುವಾಯ ಅಕ್ಟೋಬರ್ 15ರ ಶನಿವಾರದಂದು ವಿಶೇಷ ಕಲಾಪ ನಡೆಸಿ ಹೈಕೋರ್ಟ್ ತೀರ್ಪನ್ನು ಅಮಾನತುಗೊಳಿಸಿತ್ತು.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 465 ರ ದೃಷ್ಟಿಯಿಂದ ಆರೋಪಿಯ ತನಿಖೆಗೆ ಪೂರ್ವಾನುಮತಿ ನೀಡಲು ವಿಫಲವಾದ ಮಾತ್ರಕ್ಕೆ ಅವರನ್ನು ಖುಲಾಸೆಗೊಳಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿದ ನಂತರ ಈ ಆದೇಶ ನೀಡಲಾಗಿತ್ತು.