karnataka and supreme court 
ಸುದ್ದಿಗಳು

ಅರ್ಧ ವಾರ್ಷಿಕ ಪಬ್ಲಿಕ್ ಪರೀಕ್ಷೆ: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮತ್ತೆ ಚಾಟಿ

ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದರೂ ಪಬ್ಲಿಕ್ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸುವ ಮೂಲಕ ತನ್ನ ಕಡೆಯಿಂದ ತಪ್ಪಾಗಿದೆ ಎಂದು ಕರ್ನಾಟಕ ಸರ್ಕಾರ ಈ ಹಿಂದಿನ ವಿಚಾರಣೆ ವೇಳೆ ಹೇಳಿತ್ತು.

Bar & Bench

ಕರ್ನಾಟಕ ಸರ್ಕಾರ ಶಾಲೆಗಳಲ್ಲಿ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆಗಳನ್ನು ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ [ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ ಮತ್ತು ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಮುಂದಿನ ಆದೇಶದವರೆಗೆ ಈ ಪರೀಕ್ಷೆಗಳ ಫಲಿತಾಂಶ ಘೋಷಣೆಗೆ ತಡೆ ನೀಡಿತು.

ರಾಜ್ಯವು ವಿದ್ಯಾರ್ಥಿಗಳಿಗೆ ಕಿರುಕುಳ ನೀಡಲು ಏಕೆ ಮುಂದಾಗಿದೆ? ಯಾವ ರಾಜ್ಯದಲ್ಲೂ ಇಂತಹ ಧೋರಣೆ ಇಲ್ಲ. ಕರ್ನಾಟಕದಲ್ಲಿ ಮಾತ್ರ ಹೀಗಿದೆ. ರಾಜ್ಯದ ಮೇಲೆ ಅದೇನು ಒತ್ತಡ ಇದೆ?
ನ್ಯಾಯಮೂರ್ತಿ ಬೇಲಾ ತ್ರಿವೇದಿ

ಈ ಮಾತಿಗೆ ದನಿಗೂಡಿಸಿದ ನ್ಯಾ. ಶರ್ಮಾ “ನನ್ನ ರಾಜ್ಯದಲ್ಲಿ ಅಂತಹ ಯಾವುದೇ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆ ಇಲ್ಲ. ಇದು ಸಾಧ್ಯವಾಗದ ಸಂಗತಿ. ನೀವು ನಿಜವಾಗಿಯೂ ವಿದ್ಯಾರ್ಥಿಗಳ ಏಳಿಗೆ ಬಯಸುತ್ತಿದ್ದರೆ, ಬೋಧನೆ ಮತ್ತು ಶಿಕ್ಷಣ ಉತ್ತಮ ರೀತಿಯಲ್ಲಿರುವ ಶಾಲೆಗಳನ್ನು ತೆರೆಯಿರಿ. ನೀವು ಇದನ್ನೆಲ್ಲಾ ಏಕೆ ಮಾಡುತ್ತಿದ್ದೀರಿ? ಖಂಡಿತಾ ಯಾರದೋ ಪ್ರತಿಷ್ಠೆಯ ಕಾರಣಕ್ಕೆ ಇದನ್ನೆಲ್ಲಾ ಮಾಡಲಾಗುತ್ತಿದೆ” ಎಂದರು.

ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಗೆ (ಕೆಎಸ್‌ಇಎಬಿ) ಸಂಯೋಜಿತವಾಗಿರುವ ಶಾಲೆಗಳಲ್ಲಿ 5,8, 9 ಮತ್ತು 11ನೇ ತರಗತಿಗಳಿಗೆ ಮಂಡಳಿ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದ್ದ ಹೈಕೋರ್ಟ್ ಆದೇಶ  ಜಾರಿಯಾಗದಂತೆ ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತ್ತು.

ಹೈಕೋರ್ಟ್‌ ಮಾರ್ಚ್ 22ರಂದು ನೀಡಿದ್ದ ತೀರ್ಪಿನಲ್ಲಿ ಸರ್ಕಾರದ ನಡೆ ಪ್ರಶ್ನಿಸುವ ಅರ್ಜಿಗಳನ್ನು ವಜಾಗೊಳಿಸಿತ್ತು. ಈ ಪರೀಕ್ಷೆಗಳನ್ನು ಸಾಂಪ್ರದಾಯಿಕ ಪಬ್ಲಿಕ್‌ ಪರೀಕ್ಷೆಯಂತೆ ನೋಡುವುದಿಲ್ಲ ಎಂಬ ರಾಜ್ಯ ಸರ್ಕಾರದ ವಾದವನ್ನು ಅದು ಆ ವೇಳೆ ಒಪ್ಪಿತ್ತು.

ಆದರೆ ಸುಪ್ರೀಂ ಕೋರ್ಟ್‌ ಕಳೆದ ಬಾರಿ ನಡೆಸಿದ ವಿಚಾರಣೆ ವೇಳೆ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮೂರು ಗ್ರಾಮಾಂತರ ಜಿಲ್ಲೆಗಳಲ್ಲಿ  5, 8 ಮತ್ತು 9 ನೇ ತರಗತಿಗಳಿಗೆ ಪಬ್ಲಿಕ್‌ ಪರೀಕ್ಷೆ (ಮಂಡಳಿ ಪರೀಕ್ಷೆ) ನಡೆಸುವ ತನ್ನ ಅಧಿಸೂಚನೆ ಹಿಂಪಡೆಯಲಾಗಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿತು.

ಕುತೂಹಲಕರ ಸಂಗತಿ ಎಂದರೆ, ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾಗಿರುವ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ್ದರು.

ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿದಾರರ ಪರ ವಾದ ಮಂಡಿಸಿದ ವಕೀಲರಾದ ಕೆವಿ ಧನಂಜಯ್, ಎ ವೇಲನ್, ಅನನ್ಯ ಕೃಷ್ಣ, ಸಾಯಿನಾಥ್ ಡಿ ಎಂ ಹಾಗೂ ಧೀರಜ್ ಎಸ್‌ ಜೆ ಅವರು ಕೇವಲ ಏಳು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅಧಿಸೂಚನೆ ಹಿಂಪಡೆಯಲಾಗಿದೆಯೇ ಹೊರತು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅಲ್ಲ ಎಂದು ತಿಳಿಸಿದರು.

"24 ಜಿಲ್ಲೆಗಳು ಇನ್ನೂ ಆದೇಶ ಹಿಂಪಡೆದಿಲ್ಲ. ನಾವು ಆರೋಪ ಮಾಡದ ಕಾರಣ ಅವರು ಯಾವುದೇ ಕ್ರಮ ಕೈಗೊಂಡಿಲ್ಲ" ಎಂದರು.

ನಂತರ ಆದೇಶ ಜಾರಿಗೆ ಮುಂದಾದ ನ್ಯಾಯಾಲಯ ಈ ಸಂಗತಿಗಳನ್ನು ಮೊದಲೇ ಗಮನಕ್ಕೆ ತರಬೇಕಿತ್ತು ಎಂದಿತು.

ವಿದ್ಯಾರ್ಥಿಗಳ ಅಂಕಗಳಲ್ಲಿ ಕುಸಿತ ಕಂಡುಬಂದಿದ್ದರಿಂದ ಈ ಕ್ರಮ ಕೈಗೊಳ್ಳಬೇಕಾಯಿತು ಎಂದು ರಾಜ್ಯ ಸರ್ಕಾರ ವಾದಿಸಿತು.

ಆಗ ನ್ಯಾಯಾಲಯ "ರಾಜ್ಯ ಸರ್ಕಾರ ಪ್ರತಿ ಅಫಿಡವಿಟ್‌ ಸಲ್ಲಿಸಲು ಬಯಸುತ್ತಿದ್ದು ಕಾಲಾವಕಾಶ ನೀಡಲಾಗಿದೆ. ಮುಂದಿನ ಆದೇಶದವರೆಗೆ ರಾಜ್ಯದ ಯಾವುದೇ ಜಿಲ್ಲೆಗಳಿಗೆ 8 ನೇ 9 ಮತ್ತು 10 ನೇ ಅರ್ಧವಾರ್ಷಿಕ ಪಬ್ಲಿಕ್‌ ಪರೀಕ್ಷೆಗಳ ಫಲಿತಾಂಶಗಳನ್ನು ಘೋಷಿಸಬಾರದು ಎಂದು ನಾವು ಪ್ರತಿವಾದಿಗೆ ನಿರ್ದೇಶಿಸುತ್ತೇವೆ" ಎಂದು ಪೀಠ ತಿಳಿಸಿತು.