ಭ್ರಷ್ಟಾಚಾರ ತಡೆ ಕಾಯಿದೆಯ 17ಎ ಸೆಕ್ಷನ್‌ನ ಸಂವಿಧಾನಾತ್ಮಕ ಮಾನ್ಯತೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಭಿನ್ನ ತೀರ್ಪು ನೀಡಿದೆ.
ಸಾರ್ವಜನಿಕ ಸೇವಕರು ತಮ್ಮ ಅಧಿಕೃತ ಕರ್ತವ್ಯಗಳಿಗೆ ಸಂಬಂಧಿಸಿದ ಅಪರಾಧಗಳನ್ನು ಎಸಗಿರುವ ಆರೋಪ ಕೇಳಿ ಬಂದಾಗ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ತನಿಖೆ ನಡೆಸಬಾರದು ಎನ್ನುತ್ತದೆ ಸೆಕ್ಷನ್ 17 ಎ.
ಈ ಸೆಕ್ಷನ್ ಮನಸೋಇಚ್ಛೆಯಿಂದ ಕೂಡಿದೆ ಎಂದು ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಅಭಿಪ್ರಾಯಪಟ್ಟರೆ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರು ಇದು ಸಂವಿಧಾನಾತ್ಮಕವಾಗಿ ಮಾನ್ಯ ಎಂದು ತೀರ್ಪು ನೀಡಿದರು. ಆದರೆ, ಸರ್ಕಾರದ ಬದಲಾಗಿ ಲೋಕಪಾಲ ಅಥವಾ ಲೋಕಾಯುಕ್ತರ ಶಿಫಾರಸಿನ ಆಧಾರದ ಮೇಲಷ್ಟೇ ಪೂರ್ವಾನುಮತಿ ನೀಡಬೇಕು ಎಂಬ ಷರತ್ತನ್ನು ಅವರು ವಿಧಿಸಿದರು.
ಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ, ಪ್ರಕರಣವನ್ನು ಸೂಕ್ತ ಪೀಠದ ಮುಂದಿರಿಸಿ ಹೊಸದಾಗಿ ಪರಿಗಣಿಸುವ ಸಲುವಾಗಿ ಸಿಜೆಐ ಅವರ ಮುಂದಿರಿಸಬೇಕು ಎಂದು ನ್ಯಾಯಾಲಯ ಹೇಳಿತು.
2018ರಲ್ಲಿ ಜಾರಿಗೆ ಬಂದ ಸೆಕ್ಷನ್‌ನ ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಅರ್ಜಿ ಸಲ್ಲಿಸಿತ್ತು.
ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಉದ್ದೇಶಗಳಿಗೆ ಸೆಕ್ಷನ್ 17 ಎ ವ್ಯತಿರಿಕ್ತವಾಗಿದ್ದು ಇದನ್ನು ಜಾರಿಗೆ ತಂದಿರುವುದೇ ಭ್ರಷ್ಟರನ್ನು ರಕ್ಷಿಸುವುದಕ್ಕಾಗಿ ಎಂದು ನ್ಯಾ. ನಾಗರತ್ನ ಅಭಿಪ್ರಾಯಪಟ್ಟರು.
"ಸೆಕ್ಷನ್ 17ಎ ಯು ಭ್ರಷ್ಟಾಚಾರ ತಡೆ ಕಾಯಿದೆಯ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿದ್ದು, ಅಸಾಂವಿಧಾನಿಕವಾಗಿದೆ. ಹಾಗಾಗಿ ಇದನ್ನು ರದ್ದುಪಡಿಸಬೇಕು... ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ನಾನು ಅಭಿಪ್ರಾಯಪಡುತ್ತೇನೆ. ಇದಾಗೇ ರದ್ದುಪಡಿಸಿರುವ ಸೆಕ್ಷನ್ ಒಂದನ್ನು ಪುನರುಜ್ಜೀವನಗೊಳಿಸುವ, ಆ ಮೂಲಕ ಭ್ರಷ್ಟರನ್ನು ರಕ್ಷಿಸುವ ಪ್ರಯತ್ನವಾಗಿ ಈ ಸೆಕ್ಷನ್ ಗೋಚರಿಸುತ್ತದೆ," ಎಂದು ಅವರು ತಮ್ಮ ಆದೇಶದಲ್ಲಿ ವಿವರಿಸಿದರು.
ಪೂರ್ವಾನುಮತಿ ಪಡೆಯಬೇಕೆಂಬ ನಿಯಮ ಪ್ರಾಥಮಿಕ ವಿಚಾರಣೆಯನ್ನೇ ತಡೆ ಹಿಡಿಯುವ ಮೂಲಕ ಭ್ರಷ್ಟಾಚಾರ ಆರೋಪವನ್ನು ಆರಂಭದಲ್ಲಿಯೇ ಚಿವುಟಿ ಹಾಕುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಂದುವರೆದು, ಕ್ಷುಲ್ಲಕ ದೂರನ್ನು ಸೆಕ್ಷನ್ 19ರ ಅಡಿ ಬದಿಗೆ ಸರಿಸಬಹುದಾಗಿದೆ ಎಂದ ಅವರು ಸೆಕ್ಷನ್ 17 ಎ ಜಾರಿಯಲ್ಲಿರುವ ಕಾರಣಕ್ಕೆ ಸರ್ಕಾರದಿಂದ ಪೂರ್ವಾನುಮತಿ ದೊರೆಯವುದು ಕಷ್ಟಕರವಾಗುವುದರಿಂದ ಕಾಯಿದೆಯ ಮೂಲ ಉದ್ದೇಶವೇ ವಿಫಲವಾಗುತ್ತದೆ ಎಂದರು.
ಇದಕ್ಕೆ ವ್ಯತಿರಿಕ್ತ ತೀರ್ಪು ನೀಡಿದ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರು ಸೆಕ್ಷನ್ 17 ಎ ಸಂವಿಧಾನಬದ್ಧ ಎಂದರು. ಸೆಕ್ಷನ್‌ನ ಉದ್ದೇಶ ಅಕ್ರಮ ಚಟುವಟಿಕೆಗಳನ್ನು ಕ್ಷಮಿಸುವುದಲ್ಲ, ಬದಲಾಗಿ ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸುವ ಪರಿಶೀಲನಾ ವ್ಯವಸ್ಥೆ ರೂಪಿಸುವುದಾಗಿದೆ ಎಂದು ಅವರು ಹೇಳಿದರು. ಸೆಕ್ಷನ್‌ನ ದುರುಪಯೋಗ ಸಾಧ್ಯತೆ ಇದೆ ಎಂದ ಮಾತ್ರಕ್ಕೆ ಅದನ್ನು ರದ್ದುಗೊಳಿಸಲಾಗದು ಎಂದ ಅವರು ಸರ್ಕಾರದ ಬದಲಿಗೆ ಲೋಕಪಾಲ ಅಥವಾ ಲೋಕಾಯುಕ್ತರ ಶಿಫಾರಸಿನ ಆಧಾರದ ಮೇಲೆ ಪೂರ್ವಾನುಮತಿ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದರು.
ಸಿಪಿಐಎಲ್ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಹಾಜರಿದ್ದರು. ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.