ಭ್ರಷ್ಟಾಚಾರ ನಿಗ್ರಹ ಕಾಯಿದೆ ತಿದ್ದುಪಡಿ ಸಮರ್ಥಿಸಿಕೊಂಡ ಕೇಂದ್ರ: ತೀರ್ಪು ಕಾಯ್ದಿರಿಸಿದ ಸುಪ್ರೀಂ

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರ ವಾದಗಳನ್ನು ಸತತ ಎರಡು ದಿನಗಳ ಕಾಲ ಆಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತು.
Prevention of Corruption Act
Prevention of Corruption Act
Published on

ಭ್ರಷ್ಟಾಚಾರ ತಡೆ ಕಾಯಿದೆ- 1988ಕ್ಕೆ 2018ರಲ್ಲಿ ಮಾಡಲಾದ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಬುಧವಾರ ಕಾಯ್ದಿರಿಸಿದೆ [ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] .

ಅರ್ಜಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಕುರಿತಾದ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್)ಸಂಸ್ಥೆಯ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಮತ್ತು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ವಾದ ಆಲಿಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಆದೇಶ ಕಾಯ್ದಿರಿಸಿತು.

Also Read
ಪ್ರಾಮಾಣಿಕ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ಕಾಯಿದೆ ತೂಗುಗತ್ತಿಯಾಗಬಾರದು: ಸುಪ್ರೀಂ ಕೋರ್ಟ್‌

ಕಾಯಿದೆಗೆ ಸೆಕ್ಷನ್ 17ಎ ಸೇರ್ಪಡೆ ಮಾಡಿರುವುದು ಮತ್ತು ಸೆಕ್ಷನ್ 13ಕ್ಕೆ ಮಾಡಲಾದ ಬದಲಾವಣೆಗಳನ್ನು ಪ್ರಶ್ನಿಸಿ ಸಿಪಿಐಎಲ್‌ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು.

ಸರ್ಕಾರಿ ಅಧಿಕಾರಿ ತನ್ನ ಅಧಿಕೃತ ಕಾರ್ಯಗಳು ಅಥವಾ ಕರ್ತವ್ಯದ ಭಾಗವಾಗಿ ಕೈಗೊಂಡ ಯಾವುದೇ ಶಿಫಾರಸು ಅಥವಾ ನಿರ್ಧಾರದ ಕುರಿತಾಗಿ ಪೊಲೀಸ್‌ ಅಧಿಕಾರಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿಯಿಲ್ಲದೆ ತನಿಖೆ ನಡೆಸುವುದನ್ನು ಸೆಕ್ಷನ್‌ 17ಎ ನಿಷೇಧಿಸುತ್ತದೆ.

ಅದೇ ತಿದ್ದುಪಡಿಯ ಮೂಲಕ, ಕಾಯಿದೆಯ 13(1)(ಡಿ) ಸೆಕ್ಷನ್‌ ಅನ್ನು ರದ್ದುಗೊಳಿಸಲಾಗಿತ್ತು. ಈ ಸೆಕ್ಷನ್‌ ಸರ್ಕಾರಿ ಅಧಿಕಾರಿಗಳು ತಮಗೆ ಅಥವಾ ಇತರರಿಗೆ ಅಮೂಲ್ಯವಾದ ವಸ್ತು ಅಥವಾ ಹಣಕಾಸಿನ ಲಾಭವನ್ನು ಪಡೆಯಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಸಾರ್ವಜನಿಕ ಹಿತಾಸಕ್ತಿಯಿಲ್ಲದೆ ವರ್ತಿಸುವ ಕ್ರಮಗಳನ್ನು ಅಪರಾಧೀಕರಿಸುತ್ತಿತ್ತು.

ಅರ್ಜಿದಾರರು ಹೇಳುವುದನ್ನು ಒಪ್ಪಿದರೆ, ಎಲ್ಲಾ ನ್ಯಾಯಾಧೀಶರು, ಸಚಿವರು ಮತ್ತು ವಕೀಲರು ಭ್ರಷ್ಟರಾಗುತ್ತಾರೆ. ಯಾವುದೇ ದೇಶದಲ್ಲಿ ನೀವು ಇಂತಹ ಸಂದೇಹದಿಂದ ಬದುಕಲು ಸಾಧ್ಯವಿಲ್ಲ. ಒಳ್ಳೆಯ ಜನರು ಇರುತ್ತಾರೆ ಎಂದು ಎಸ್ ಜಿ ತುಷಾರ್ ಮೆಹ್ತಾ ವಾದಿಸಿದರು.

ಅಲ್ಲದೆ, (ದೂರನ್ನು) ಪರಿಶೀಲಿಸುವ ಕಾರ್ಯವಿಧಾನ ಅಳವಡಿಸಿಕೊಳ್ಳುವ ಮೂಲಕ ನಿರ್ದಿಷ್ಟ ವರ್ಗದ ವ್ಯಕ್ತಿಗಳ ರಕ್ಷಣೆ ಮಾಡುವ ಸೆಕ್ಷನ್‌ ಸ್ವೇಚ್ಛೆಯಿಂದ ಕೂಡಿರುವಂಥದ್ದಲ್ಲ ಎಂದು ವಾದಿಸಿದ ಅವರು ಸರ್ಕಾರ ಮಾಡಿರುವ ತಿದ್ದುಪಡಿಗಳನ್ನು ಸಮರ್ಥಿಸಿಕೊಂಡರು.

Also Read
ಪುರಾವೆ ನೀಡದ ಸಿಬಿಐ: ಆಪ್‌ ಮುಖಂಡ ಸತ್ಯೇಂದರ್ ಜೈನ್ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಅಂತ್ಯ

ಸೆಕ್ಷನ್ 17ಎ ಅಡಿಯಲ್ಲಿ ತನಿಖೆಗೆ ಅನುಮತಿ ನೀಡುವುದಕ್ಕೂ ಮತ್ತು ಸೆಕ್ಷನ್ 19 ರ ಅಡಿಯಲ್ಲಿ ಅಗತ್ಯವಿರುವ ಕಾನೂನು ಕ್ರಮಕ್ಕೆ ಅನುಮೋದನೆ ನೀಡುವುದಕ್ಕೂ ಇರುವ ವ್ಯತ್ಯಾಸವನ್ನು ಅವರು ಎತ್ತಿ ತೋರಿಸಿದರು.

"ಉದಾಹರಣೆಗೆ, ನಾನು ಒಬ್ಬ ಅಧಿಕಾರಿ ಎಂದುಕೊಳ್ಳಿ, ನನ್ನ ವಿರುದ್ಧ 17ಎ ಅಡಿ (ತನಿಖೆಗೆ) ಅನುಮತಿ ಬೇಕಿರುತ್ತದೆ ಎಂದು ಭಾವಿಸೋಣ. ಆಗ, ನನ್ನ ಸಚಿವಾಲಯಕ್ಕೆ ಈ ಕುರಿತಾದ ಮಾಹಿತಿ, ತಿಳಿವಳಿಕೆ, ಮುಂತಾದವು ಇರುತ್ತದೆ. ಹಾಗಾಗಿ, 17ಎ (ತನಿಖೆಗೆ ಅನುಮತಿ ನೀಡುವ ಅಧಿಕಾರ) ನನ್ನ ಸಚಿವಾಲಯಕ್ಕೆ ಇರುತ್ತದೆ... ಒಮ್ಮೆ ಅನುಮತಿ ನೀಡಿದ ನಂತರ ತನಿಖೆ ನಡೆಯುತ್ತದೆ, ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತದೆ, ಆರೋಪ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ನಂತರ ಇದನ್ನು (ಕಾನೂನು ಕ್ರಮ ಜರುಗಿಸುವ ಸಲುವಾಗಿ) ವಿಚಾರಣೆಗೆ ಅನುಮೋದನೆಯನ್ನು ಕೋರಿ ಸೆಕ್ಷನ್‌ 19ರ ಅಡಿ ಸಕ್ಷಮ ಪ್ರಾಧಿಕಾರದ ಮುಂದೆ ಇರಿಸಲಾಗುತ್ತದೆ. ಇದು ನನ್ನ ಸಚಿವಾಲಯದ ಮುಂದೆ ಹೋಗುವುದಿಲ್ಲ," ಎಂದು ಅವರು ವಿವರಿಸಿದರು.

ತಮ್ಮ ಪ್ರತ್ಯುತ್ತರ ಅರ್ಜಿಯಲ್ಲಿ ಭೂಷಣ್‌ ಅವರು, ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸುವುದು ಮತ್ತು ಭ್ರಷ್ಟ ಅಧಿಕಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಅಥವಾ ಅವರ ರಾಜಕೀಯ ಯಜಮಾನರಿಂದ ರಕ್ಷಿಸಲ್ಪಡದಂತೆ ನೋಡಿಕೊಳ್ಳುವುದರ ನಡುವೆ ಸಮತೋಲನ  ಕಾಯ್ದುಕೊಳ್ಳಲು, ನ್ಯಾಯಾಲಯ ಮಾರ್ಗಸೂಚಿಗಳನ್ನು ರೂಪಿಸಬಹುದು ಎಂದು ಪುನರುಚ್ಚರಿಸಿದರು.

Kannada Bar & Bench
kannada.barandbench.com