
ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳನ್ನು ಭ್ರಷ್ಟಾಚಾರದ ಕ್ಷುಲ್ಲಕ ಮತ್ತು ಕಿರಿಕಿರಿಗೊಳಿಸುವಂತಹ ಆರೋಪಗಳಿಂದ ರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ [ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] .
ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಿಗಳ ಮೇಲೆ ತೂಗುಗತ್ತಿ ಇರಬಾರದು. ಹಾಗೆ ಮಾಡಿದರೆ ಸರ್ಕಾರದ ಪ್ರಮುಖ ನೀತಿಗಳಲ್ಲಿ ವಿಳಂಬ ಉಂಟಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿತು.
"ಕಾರ್ಯದರ್ಶಿಗಳು ಬಹಳಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ, ತುರ್ತು ಪರಿಸ್ಥಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಪರಿಶೀಲಿಸದೆ ಎಫ್‌ಐಆರ್ ದಾಖಲಿಸುವುದು ಅವರನ್ನು ಕಳಂಕಕ್ಕೆ ಈಡುಮಾಡಬಹುದು" ಎಂದು ಪೀಠ ಹೇಳಿತು.
ಸರ್ಕಾರದ ಪ್ರತಿಯೊಂದು ನಿರ್ಧಾರವನ್ನೂ ಕಳಂಕಿತ ಎಂದು ಹೇಳಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಮುಂದುವರೆದು, "ಅಂತಿಮವಾಗಿ ನಾವು ಸಮತೋಲನ ಸಾಧಿಸಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ಕ್ಷುಲ್ಲಕ ಅಥವಾ ಕಿರಿಕಿರಿಗೊಳಿಸುವ ದೂರುಗಳಿಂದ ರಕ್ಷಿಸಬೇಕು. ಅದೇ ರೀತಿ, ಅಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸುವ ಅಗತ್ಯವಿಲ್ಲ. ಹಾಗಾದರೆ, ಹೇಗೆ ಸಮತೋಲನ ಸಾಧಿಸಬೇಕು? ಪ್ರಾಮಾಣಿಕ ಅಧಿಕಾರಿಗಳನ್ನು ಕ್ಷುಲ್ಲಕ ಪ್ರಕರಣಗಳಿಗೆ ಒಳಪಡಿಸಿದರೆ, ಅವರು ಕೆಲಸವನ್ನೇ ಮಾಡದಂತಾಗುತ್ತದೆ" ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಭ್ರಷ್ಟಾಚಾರ ತಡೆ ಕಾಯಿದೆ- 1988ಕ್ಕೆ 2018ರಲ್ಲಿ ಮಾಡಲಾದ ತಿದ್ದುಪಡಿ ಪ್ರಶ್ನಿಸಿ ಲಾಭರಹಿ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಕುರಿತಾದ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಅರ್ಜಿ ಸಲ್ಲಿಸಿತ್ತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ಸೆಕ್ಷನ್ 17 ಎ ಸೇರ್ಪಡೆ ಮತ್ತು ಕಾಯಿದೆಯ ಸೆಕ್ಷನ್ 13ಕ್ಕೆ ಮಾಡಲಾದ ಬದಲಾವಣೆಗಳನ್ನು ಪ್ರಶ್ನಿಸುತ್ತಿರುವುದಾಗಿ ತಿಳಿಸಿದರು.
ಕೇಂದ್ರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮೋದನೆಯಿಲ್ಲದೆ, "ಸರ್ಕಾರಿ ಅಧಿಕಾರಿ ತನ್ನ ಅಧಿಕೃತ ಕಾರ್ಯಗಳು ಅಥವಾ ಕರ್ತವ್ಯದ ಭಾಗವಾಗಿ ಕೈಗೊಂಡ ಯಾವುದೇ ಶಿಫಾರಸು ಅಥವಾ ನಿರ್ಧಾರದ ಕುರಿತಾಗಿ" ಪೊಲೀಸ್ ಅಧಿಕಾರಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿಯಿಲ್ಲದೆ ತನಿಖೆ ನಡೆಸುವುದನ್ನು ಸೆಕ್ಷನ್ 17 ಎ ನಿಷೇಧಿಸುತ್ತದೆ.
ಅದೇ ತಿದ್ದುಪಡಿಯ ಮೂಲಕ, ಕಾಯಿದೆಯ 13(1)(ಡಿ) ಸೆಕ್ಷನನ್ನು ರದ್ದುಗೊಳಿಸಲಾಯಿತು. ಈ ಸೆಕ್ಷನ್ ಸರ್ಕಾರಿ ಅಧಿಕಾರಿಗಳು ತಮಗೆ ಅಥವಾ ಇತರರಿಗೆ ಅಮೂಲ್ಯವಾದ ವಸ್ತು ಅಥವಾ ಹಣಕಾಸಿನ ಲಾಭವನ್ನು ಪಡೆಯಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಅಥವಾ ಸಾರ್ವಜನಿಕ ಹಿತಾಸಕ್ತಿಯಿಲ್ಲದೆ ವರ್ತಿಸುವ ಕ್ರಮಗಳನ್ನು ಅಪರಾಧೀಕರಿಸುತ್ತಿತ್ತು.
ಈ ಬದಲಾವಣೆಗಳು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ತೀರ್ಪು ಮತ್ತು ಇನ್ನೊಂದು ಪ್ರಕರಣದಲ್ಲಿ ತ್ರಿಸದಸ್ಯ ಪೀಠ ನೀಡಿದ್ದ ಆದೇಶ ಉಲ್ಲಂಘಿಸುತ್ತದೆ ಎಂದು ಭೂಷಣ್ ವಾದಿಸಿದರು.
ಸೆಕ್ಷನ್ 17ಎ ಕೇಂದ್ರ ಸರ್ಕಾರಕ್ಕೆ ಯಾವ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಯಾರನ್ನು ರಕ್ಷಿಸಬೇಕು ಎಂಬುದನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸಲು ನ್ಯಾಯಾಲಯ ಮಾರ್ಗಸೂಚಿಗಳನ್ನು ರೂಪಿಸಬಹುದು ಎಂದು ಭೂಷಣ್ ಸಲಹೆ ನೀಡಿದರು.
ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , ಸಂಸತ್ತಿನಲ್ಲಿ ನಡೆದ ಗಂಭೀರ ಚರ್ಚೆಯ ನಂತರ ಈ ಸೆಕ್ಷನ್‌ಗಳನ್ನು ಜಾರಿಗೆ ತರಲಾಗಿದ್ದು ನೀತಿ ನಿರೂಪಣೆಯಲ್ಲಿನ ಜಡತ್ವಕ್ಕೆ ಉತ್ತರ ಕಂಡುಕೊಳ್ಳುತ್ತದೆ ಎಂದರು. ನಿರ್ಭೀತ ಉತ್ತಮ ಆಳ್ವಿಕೆ ಎಂಬುದು ಕಾನೂನಾತ್ಮಕ ಆಡಳಿತದ ಭಾಗ ಎಂದರು. ಪ್ರಕರಣದ ವಿಚಾರಣೆ ನಾಳೆಯೂ (ಆಗಸ್ಟ್ 6) ಮುಂದುವರೆಯಲಿದೆ.