ಪತಂಜಲಿ ಆಯುರ್ವೇದ ಲಿಮಿಟೆಡ್‌ನಿಂದ ₹273.5 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದಂಡ ವಸೂಲಿ ಮಾಡುವಂತೆ ಅಲಾಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ [ಪತಂಜಲಿ ಆಯುರ್ವೇದ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] .
ಪತಂಜಲಿಯ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಎ ಎಸ್ ಚಂದೂರ್ಕರ್ ಅವರಿದ್ದ ಪೀಠ ಕೇಂದ್ರ ಸರ್ಕಾರ ಮತ್ತು ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಜಿಜಿಐ) ನೋಟಿಸ್ ಜಾರಿ ಮಾಡಿತು. ಮುಂದಿನ ಆದೇಶದವರೆಗೆ ದಂಡ ಸ್ವೀಕರಿಸದಂತೆ ತಡೆ ಇರುತ್ತದೆ ಎಂದು ನ್ಯಾಯಾಲಯ ತಿಳಿಸಿತು.
ಪತಂಜಲಿಯ ವಹಿವಾಟುಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆ ನಡೆಸಿದ್ದ ಡಿಜಿಜಿಐ ದಂಡ ವಿಧಿಸಿತ್ತು. ಯಥೇಚ್ಛವಾಗಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಬಳಸುತ್ತಿದ್ದರೂ ಆದಾಯ ತೆರಿಗೆ ರುಜುವಾತುಗಳನ್ನು ಹೊಂದಿರದ ಸಂಸ್ಥೆಗಳೊಂದಿಗೆ ಪತಂಜಲಿ ಅನುಮಾನಾಸ್ಪದ ವ್ಯವಹಾರ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದಾಗಿ ಇಲಾಖೆ ಹೇಳಿತ್ತು. ಅದು ನಿಜವಾದ ಸರಕು ಪೂರೈಸದೆಯೇ ತೆರಿಗೆ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು.
ಅಂತೆಯೇ ಇಲಾಖೆ ಪತಂಜಲಿಗೆ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಅಲಾಹಾಬಾದ್ ಹೈಕೋರ್ಟ್ ಮೆಟ್ಟಿಲೇರಿತ್ತು. ಸಿಜಿಎಸ್‌ಟಿ ಕಾಯಿದೆಯ ಸೆಕ್ಷನ್ 122ರ ಪ್ರಕಾರ ದಂಡ ಕ್ರಿಮಿನಲ್ ಸ್ವರೂಪದ್ದಾಗಿದ್ದು ಇದನ್ನು ಕ್ರಿಮಿನಲ್ ನ್ಯಾಯಾಲಯ ವಿಚಾರಣೆ ನಡೆಸಿಯೇ ವಿಧಿಸಬೇಕೆ ವಿನಾ ಇಲಾಖಾ ಅಧಿಕಾರಿಗಳಲ್ಲ ಎಂದು ವಾದಿಸಿತ್ತು. ಅಲ್ಲದೆ ಸೆಕ್ಷನ್ 74ರಡಿ ವಿಚಾರಣೆ ಕೈ ಬಿಟ್ಟಿರುವಾಗ ದಂಡಕ್ಕೆ ಮಾನ್ಯತೆ ಇರುವುದಿಲ್ಲ ಎಂದು ಕಂಪೆನಿ ಹೇಳಿತು.
ಆದರೆ ಮೇ 29ರಂದು ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶೇಖರ್ ಬಿ ಸರಾಫ್ ಮತ್ತು ವಿಪಿನ್ ಚಂದ್ರ ದೀಕ್ಷಿತ್ ಅವರಿದ್ದ ಪೀಠ ಸೆಕ್ಷನ್ 122ರ ಅಡಿಯಲ್ಲಿ ದಂಡದ ಪ್ರಕ್ರಿಯೆಗಳು ಸಿವಿಲ್ ಸ್ವರೂಪದ್ದಾಗಿದ್ದು ಇಲಾಖೆ ಅಧಿಕಾರಿಗಳೇ ಆ ಬಗ್ಗೆ ನಿರ್ಣಯ ಕೈಗೊಳ್ಳಬಹುದು ಎಂದು ಅಭಿಪ್ರಾಯಪಟ್ಟಿತ್ತು. ಈ ಸಂಬಂಧ ಗುಜರಾತ್ ತಿರುವಾಂಕೂರು ಏಜೆನ್ಸಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅದು ಅವಲಂಬಿಸಿತ್ತು.
ಇದಕ್ಕೆ ಪತಂಜಲಿ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿತು. ಸೆಕ್ಷನ್ 122ರ ಅಡಿಯಲ್ಲಿ ದಂಡ ವಿಧಿಸುವುದರ ವ್ಯಾಪ್ತಿ ಮತ್ತು ಸ್ವರೂಪ, ಅವುಗಳನ್ನು ವಿಧಿಸಲು ಜಿಎಸ್‌ಟಿ ಅಧಿಕಾರಿಗಳಿಗೆ ಇರುವ ಅಧಿಕಾರ ವ್ಯಾಪ್ತಿ ಮತ್ತು ಸೆಕ್ಷನ್ 74ರ ಅಡಿಯಲ್ಲಿ ಸಂಬಂಧಿತ ತೆರಿಗೆ ಬೇಡಿಕೆಗಳನ್ನು ರದ್ದುಗೊಳಿಸುವುದರ ಪರಿಣಾಮದ ಬಗ್ಗೆ ಅದು ಪ್ರಶ್ನೆ ಎತ್ತಿತು.
ಇಂದು ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ₹273.5 ಕೋಟಿ ದಂಡ ವಸೂಲಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಪತಂಜಲಿ ಪರವಾಗಿ ಹಿರಿಯ ವಕೀಲ ಅರವಿಂದ್ ಪಿ ದಾತಾರ್ ಮತ್ತು ವಕೀಲ ರಾಜ್ ಕಿಶೋರ್ ಚೌಧರಿ ವಾದ ಮಂಡಿಸಿದರು.