
ಕೊರೊನಿಲ್ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಪ್ರಚಾರ ಮಾಡಲು ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ದೂರಿಗೆ ಸಂಬಂಧಿಸಿದಂತೆ,ಉತ್ತರಾಖಂಡ್ ಹೈಕೋರ್ಟ್, ಪತಂಜಲಿ ಆಯುರ್ವೇದ, ದಿವ್ಯ ಫಾರ್ಮಸಿ ಮತ್ತು ಅವುಗಳ ಮಾಲೀಕರಾದ ಬಾಬಾ ರಾಮದೇವ್ ಹಾಗೂ ಬಾಲಕೃಷ್ಣ ಅವರಿಗೆ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಅನ್ನು ಉತ್ತರಾಖಂಡ ಹೈಕೋರ್ಟ್ ರದ್ದುಗೊಳಿಸಿದೆ [ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತಿತರರು ಹಾಗೂ ಉತ್ತರಾಖಂಡ ಸರ್ಕಾರ ನಡುವಣ ಪ್ರಕರಣ].
ಜಾಹೀರಾತುಗಳು ಸುಳ್ಳು ಅಥವಾ ದಾರಿತಪ್ಪಿಸುವಂತಿವೆ ಎಂದು ತೋರಿಸಲು ದೂರಿನೊಂದಿಗೆ ಯಾವುದೇ ತಜ್ಞರ ವರದಿಯನ್ನು ಸಲ್ಲಿಸಲಾಗಿಲ್ಲ ಎಂದು ಜೂನ್ 3ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ವಿವೇಕ್ ಭಾರತಿ ಶರ್ಮಾ ಅವರು ತಿಳಿಸಿದರು.
"ಜಾಹೀರಾತುಗಳಲ್ಲಿ ಮಾಡಲಾದ ಪ್ರತಿಪಾದನೆ ಸುಳ್ಳು ಅಥವಾ ದಾರಿ ತಪ್ಪಿಸುವಂತಿವೆ ಎನ್ನುವುದನ್ನು ನಿರೂಪಿಸುವ ಯಾವುದೇ ತಜ್ಞರ ವರದಿ ಇಲ್ಲದೆ, ನಿರ್ದಿಷ್ಟವಾಗಿ ಹೇಳದೆ ಜಾಹೀರಾತನ್ನು ತೆಗೆದುಹಾಕಬೇಕು ಎಂದು ಅರ್ಜಿದಾರರ ಸಂಸ್ಥೆಗೆ ಪತ್ರ ಬರೆಯುವುದು ಅರ್ಜಿದಾರರ ಸಂಸ್ಥೆಯ ಮೇಲೆ ಮೊಕದ್ದಮೆ ಹೂಡಲು ಕಾರಣವಾಗದು" ಎಂದು ನ್ಯಾಯಾಲಯ ಹೇಳಿದೆ.
ಔಷಧ ಮತ್ತು ಮಾಂತ್ರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯಿದೆ- 1954ರ ಅಡಿಯಲ್ಲಿ ಅಪರಾಧ ನಡೆದಿದೆ ಎನ್ನಲು ಔಷಧದ ಬಗ್ಗೆ ಸುಳ್ಳು ಹೇಳಿಕೆ ನೀಡಲಾಗಿದೆ ಎಂಬ ನಿರ್ದಿಷ್ಟ ಆರೋಪ ಇರಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ.
ಗಮನಾರ್ಹವಾಗಿ, ರಾಮದೇವ್ ಮತ್ತು ಬಾಲಕೃಷ್ಣ ಅವರು ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯದ ಬಗ್ಗೆ ರಾಜ್ಯ ಸರ್ಕಾರ ಮಂಡಿಸಿರುವ ವಾದ ತಪ್ಪಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ .