Lakshya Sen Image source: X (Twitter)
ಸುದ್ದಿಗಳು

ಜನ್ಮ ದಿನಾಂಕ ತಿರುಚಿದ ಪ್ರಕರಣ: ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ವಿರುದ್ಧದ ತನಿಖೆಗೆ ಸುಪ್ರೀಂ ಕೋರ್ಟ್ ತಡೆ

ಲಕ್ಷ್ಯ ಸೇನ್ ಮತ್ತು ಅವರ ಸಹೋದರ ಚಿರಾಗ್ ಸೇನ್ ಅವರ ಜನನ ಪ್ರಮಾಣಪತ್ರಗಳು ನಕಲಿ ಎಂದು ಆರೋಪಿಸಿದ್ದ ದೂರುದಾರ ಎಂ.ಜಿ. ನಾಗರಾಜ್ ಮತ್ತು ಕರ್ನಾಟಕ ಸರ್ಕಾರ ಪ್ರತಿಕ್ರಿಯಿಸುವಂತೆ ನ್ಯಾಯಾಲಯ ಸೂಚಿಸಿದೆ.

Bar & Bench

ಕಿರಿಯರ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ಅವಕಾಶ ಪಡೆಯುವುದಕ್ಕಾಗಿ ತಮ್ಮ  ಜನನ ಪ್ರಮಾಣಪತ್ರವನ್ನು ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಡ್ಮಿಂಟನ್‌ ಆಟಗಾರ ಲಕ್ಷ್ಯ ಸೇನ್‌ ಹಾಗೂ ಇತರರ ವಿರುದ್ಧದ ತನಿಖೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆ ನೀಡಿದೆ [ಚಿರಾಗ್‌ ಸೇನ್‌ ಇನ್ನಿತರರು ಹಾಗೂ ಕರ್ನಾಟಕ ಸರ್ಕಾರ ಮತ್ತಿತರರ ನಡುವಣ ಪ್ರಕರಣ] .

ಲಕ್ಷ್ಯ ಸೇನ್ ಮತ್ತು ಅವರ ಸಹೋದರ ಚಿರಾಗ್ ಸೇನ್ ಅವರ ಜನನ ಪ್ರಮಾಣಪತ್ರಗಳು ನಕಲಿ ಎಂದು ಆರೋಪಿಸಿದ್ದ ದೂರುದಾರ ಎಂ.ಜಿ. ನಾಗರಾಜ್ ಮತ್ತು ಕರ್ನಾಟಕ ಸರ್ಕಾರ ಪ್ರತಿಕ್ರಿಯಿಸುವಂತೆ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ ಸೂಚಿಸಿದೆ.

ಮುಂದಿನ ವಿಚಾರಣೆ ನಡೆಯಲಿರುವ 16.04.2025ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ನ್ಯಾಯಾಲಯ ಸೂಚಿಸಿದ್ದು ಅಲ್ಲಿಯವರೆಗೂ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದ ತನಿಖೆಗೆ ತಡೆ ನೀಡಿದೆ.

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಉದ್ಯೋಗಿಯಾಗಿರುವ ತಮ್ಮ ತರಬೇತುದಾರರೊಂದಿಗೆ ಶಾಮೀಲಾಗಿ ಲಕ್ಷ್ಯ ಸೇನ್ ಮತ್ತು ಅವರ ಸಹೋದರ ಚಿರಾಗ್ ಸೇನ್ ಅವರ ಜನನ ಪ್ರಮಾಣಪತ್ರಗಳನ್ನು ಅವರ ಪೋಷಕರು ಮೋಸದಿಂದ ತಿರುಚಿದ್ದಾರೆ ಎಂದು ಆರೋಪಿಸಿ ನಾಗರಾಜ್ ಅವರು ಖಾಸಗಿ ದೂರು ಸಲ್ಲಿಸಿದ್ದರು.

ನಕಲಿ ಎನ್ನಲಾದ ದಾಖಲೆಯಿಂದಾಗಿ ಅವರ ವಯಸ್ಸು ಸುಮಾರು ಎರಡೂವರೆ ವರ್ಷಗಳಷ್ಟು ಕಡಿಮೆಯಾಯಿತು. ಪರಿಣಾಮ ಅವರು ಕಿರಿಯರ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸಲು ಮತ್ತು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು ಎಂದು ಆರೋಪ ಮಾಡಲಾಗಿತ್ತು.

ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಐಪಿಸಿ ಸೆಕ್ಷನ್ 420 (ವಂಚನೆ), 468 (ಫೋರ್ಜರಿ) ಮತ್ತು 471 (ನಕಲಿ ದಾಖಲೆಗಳನ್ನು ಅಸಲಿ ಎಂದು ಬಳಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಇಬ್ಬರೂ ಸಹೋದರರು, ಅವರ ಪೋಷಕರು ಹಾಗೂ ತರಬೇತುದಾರರು ಕ್ರಿಮಿನಲ್‌ ಮೊಕದ್ದಮೆ ರದ್ದತಿ ಕೋರಿ ಈ ಹಿಂದೆ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ ಫೆಬ್ರವರಿ 19ರಂದು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌ ತನಿಖೆ ಮುಂದುವರೆಸಲು ಅವಕಾಶ ನೀಡಿತ್ತು.

ಕೃತ್ಯ ನಡೆದಿದೆ ಎನ್ನುವುದನ್ನು ಸೂಚಿಸುವ ಪ್ರಾಥಮಿಕ ಪುರಾವೆಗಳು ಲಭ್ಯ ಇರುವುದರಿಂದ ತನಿಖೆ ಸ್ಥಗಿತಗೊಳಿಸಿ ಕ್ರಿಮಿನಲ್‌ ವಿಚಾರಣೆ ರದ್ದುಗೊಳಿಸುವುದಕ್ಕೆ ಯಾವುದೇ ಕಾರಣ ಇಲ್ಲ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಜಿ. ಉಮಾ ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಕದ ತಟ್ಟಿದ್ದರು.

ಹಿರಿಯ ವಕೀಲ ಸಿಎ ಸುಂದರಂ, ವಕೀಲರಾದ ರೋಹಿಣಿ ಮೂಸಾ, ನಿಪುಣ್‌ ಕಟ್ಯಾಲ್ ಹಾಗೂ ವರುಣ್ ಜೋಶಿ ಅವರು ಮೇಲ್ಮನವಿದಾರರ ಪರವಾಗಿ ವಾದ ಮಂಡಿಸಿದರು. ಅಡ್ವೊಕೇಟ್ ಆನ್ ರೆಕಾರ್ಡ್ ಬದ್ರಿ ವಿಶಾಲ್ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Chirag_Sen___Anr_v__State_of_Karnataka___Anr_.pdf
Preview